ಬೆಂಗಳೂರು (ಸೆ.7): ಚಂದ್ರಯಾನ 2 ಯಶಸ್ವಿಯಾಗುವ ನಿರೀಕ್ಷೆಯಲ್ಲಿ ಇಡೀ ದೇಶವೇ ಕುತೂಹಲದಿಂದ ನಿನ್ನೆ ರಾತ್ರಿ ಕಾದು ಕುಳಿತಿತ್ತು. ಆದರೆ, ಚಂದ್ರನ ಮೇಲೆ ಇಳಿಯಬೇಕಾಗಿದ್ದ ವಿಕ್ರಮ್ ಲ್ಯಾಂಡರ್ ಕೊನೇ ಕ್ಷಣದಲ್ಲಿ ಸಂವಹನ ಕಳೆದುಕೊಂಡಿತ್ತು. ಇದರಿಂದ ಇಸ್ರೋ ವಿಜ್ಞಾನಿಗಳು ಸೇರಿದಂತೆ ದೇಶದ ಜನರು ಕೂಡ ನಿರಾಸೆಗೊಳಗಾಗಿದ್ದಾರೆ. ತಮ್ಮ ಪ್ರಯತ್ನ ವಿಫಲವಾಗಿದ್ದಕ್ಕೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಇಂದು ಕಣ್ಣೀರು ಹಾಕಿದ್ದಾರೆ.
ಚಂದ್ರಯಾನ 2 ವಿಕ್ರಮ್ ಲ್ಯಾಂಡಿಂಗ್ ವೀಕ್ಷಿಸಲು ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರು ಇಸ್ರೋ ಕೇಂದ್ರದಿಂದ ಯಲಹಂಕ ವಾಯುನೆಲೆ ಕೇಂದ್ರಕ್ಕೆ ತೆರಳಿದರು. ದೆಹಲಿಗೆ ಹೋಗಲು ಯಲಹಂಕ ವಾಯುನೆಲೆಗೆ ತೆರಳಿದ್ದ ನರೇಂದ್ರ ಮೋದಿ ನಿರ್ಗಮಿಸುವ ವೇಳೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಭಾವುಕರಾಗಿ ನಿಂತಿದ್ದರು. ತಮ್ಮ ಕನಸು ಈಡೇರದ ಕಾರಣ ಹತಾಶೆಯಿಂದ ನಿಂತಿದ್ದ ಶಿವನ್ ಅವರನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿ ಕೂಡ ಭಾವುಕರಾಗಿ ಶಿವನ್ ಅವರನ್ನು ತಬ್ಬಿ ಹಿಡಿದು ಸಾಂತ್ವನ ಮಾಡಿದ್ದಾರೆ.
ಹಿನ್ನಡೆಯಿಂದ ಕುಗ್ಗಬೇಡಿ, ನಿಮ್ಮ ಬಗ್ಗೆ ದೇಶವೇ ಹೆಮ್ಮೆ ಪಡುತ್ತಿದೆ; ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಕೆ. ಶಿವನ್ ಅವರನ್ನು ತಬ್ಬಿ ಸಾಂತ್ವನ ಮಾಡುತ್ತಿರುವ ವಿಡಿಯೋ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ. ಇಸ್ರೋ ಸಾಧನೆಗೆ ಟ್ವಿಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಗ ಉಂಟಾದ ಹಿನ್ನಡೆಯಿಂದ ವಿಜ್ಞಾನಿಗಳ ಮೇಲಿನ ಗೌರವ ಕಡಿಮೆಯಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಂಗಳೂರಿನ ಇಸ್ರೋ ಕಂಟ್ರೋಲ್ ಸೆಂಟರ್ನಲ್ಲಿ ಚಂದ್ರಯಾನದ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ನೀವೆಲ್ಲ ರಾತ್ರಿಯಿಡೀ ನಿದ್ದೆಗೆಟ್ಟು ಕೆಲಸ ಮಾಡಿದ್ದೀರಿ. ನೀವು ನಮ್ಮ ಮಾತೃಭೂಮಿಗೆ ಅದ್ಭುತವಾದ ಕೊಡುಗೆ ನೀಡಿದ್ದೀರಿ. ಇಡೀ ದೇಶ ನಿಮ್ಮ ಸಾಧನೆಯನ್ನು ನೋಡಿದೆ. ನಿಮ್ಮ ಸಾಧನೆಯಲ್ಲಿ ಕೊಂಚ ಹಿನ್ನಡೆಯಾಗಿರಬಹುದು. ಆದರೆ, ನಿಮ್ಮ ಕಠಿಣ ಪರಿಶ್ರಮಕ್ಕೆ ನಾವು ಹೆಮ್ಮೆ ಪಡುತ್ತೇವೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಗಳಾಗುವ ಬಗ್ಗೆ ನನಗೆ ನಂಬಿಕೆಯಿದೆ. ಇಡೀ ಭಾರತವೇ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ