ದೇಶ ಉಳಿಸಲು ಜಾತ್ಯತೀತ ಪಕ್ಷಗಳು ಒಂದಾಗುತ್ತಿವೆ: ದೇವೇಗೌಡರ ಭೇಟಿ ನಂತರ ಚಂದ್ರಬಾಬು ನಾಯ್ಡು ಹೇಳಿಕೆ

ಗುರುವಾರ ಮಧ್ಯಾಹ್ನ 3.30ಕ್ಕೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಚಂದ್ರಬಾಬು ನಾಯ್ಡು, ಪ್ರಸ್ತುತ ರಾಜಕೀಯ ವಿದ್ಯಮಾನ ಹಾಗೂ ಮುಂದಿನ ವರ್ಷ ಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ರಚನೆ ಬಗ್ಗೆ ಚರ್ಚೆ ನಡೆಸಿದರು. 

HR Ramesh | news18
Updated:November 8, 2018, 6:50 PM IST
ದೇಶ ಉಳಿಸಲು ಜಾತ್ಯತೀತ ಪಕ್ಷಗಳು ಒಂದಾಗುತ್ತಿವೆ: ದೇವೇಗೌಡರ ಭೇಟಿ ನಂತರ ಚಂದ್ರಬಾಬು ನಾಯ್ಡು ಹೇಳಿಕೆ
ಗುರುವಾರ ಮಧ್ಯಾಹ್ನ 3.30ಕ್ಕೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಚಂದ್ರಬಾಬು ನಾಯ್ಡು, ಪ್ರಸ್ತುತ ರಾಜಕೀಯ ವಿದ್ಯಮಾನ ಹಾಗೂ ಮುಂದಿನ ವರ್ಷ ಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ರಚನೆ ಬಗ್ಗೆ ಚರ್ಚೆ ನಡೆಸಿದರು. 
HR Ramesh | news18
Updated: November 8, 2018, 6:50 PM IST
- ಜನಾರ್ದನ ಹೆಬ್ಬಾರ್, ನ್ಯೂಸ್18 ಕನ್ನಡ

ಬೆಂಗಳೂರು(ನ. 08): ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಜಾತ್ಯತೀತ ಪಕ್ಷಗಳು ಒಂದಾಗುವುದು ಅನಿವಾರ್ಯವಾಗಿದೆ. ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಎನ್​ಡಿಎ ನೇತೃತ್ವದ ಕೇಂದ್ರ ಸರಕಾರವನ್ನು ಕಿತ್ತೊಗೆಯುವ ಕಾಲ ಬಂದಿದೆ ಎಂದು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಸರಕಾರವು ಐಟಿ, ಇ.ಡಿ., ಸಿಬಿಐಗಳಂಥ ಸ್ವಾಯತ್ತ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕರ್ನಾಟಕ, ತೆಲಂಗಾಣ, ಬಿಹಾರ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಈ ಸಂಸ್ಥೆಗಳ ಮೂಲಕ ವಿಪಕ್ಷಗಳನ್ನು ಹಣಿಯುವ ಕೆಲಸ ಮಾಡುತ್ತಿದೆ. ಈ ಸ್ವಾಯತ್ತ ಸಂಸ್ಥೆಗಳ ನಡವಳಿಕೆಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ ಎಂದು ಚಂದ್ರಬಾಬು ನಾಯ್ಡು ಆತಂಕ ತೋರ್ಪಡಿಸಿದ್ದಾರೆ.

ನೋಟ್ ಬ್ಯಾನ್ ಮಾಡಿ ಎರಡು ವರ್ಷವಾಯಿತು. ಆ ಕ್ರಮದಿಂದ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ಪದೇ ಪದೇ ಪೆಟ್ರೋಲ್ ಬೆಲೆ ಏರುತ್ತಲೇ ಇದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಪಸಂಖ್ಯಾತರಿಗೆ ರಕ್ಷಣೆಯೇ ಇಲ್ಲದೆ, ಅವರಿಗೆ ಅಭದ್ರತೆ ಕಾಡುತ್ತಿದೆ. ದೆಹಲಿಯಲ್ಲಿ ಪತ್ರಕರ್ತರಿಗೆ ನೆಲೆ ಇಲ್ಲದಂತಾಗಿದೆ ಎಂದು ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ತೃತೀಯ ರಂಗ ನಿರ್ಮಾಣಕ್ಕೆ ವೇದಿಕೆಯಾಗಲಿದೆಯೇ ಉಪಸಮರ ಫಲಿತಾಂಶ; ಎಚ್​ಡಿಡಿ ಜತೆ ಚಂದ್ರಬಾಬು ನಾಯ್ಡು ನಡೆಸಿದ ಚರ್ಚೆ ಏನು?

ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ ವಿಚಾರದ ಬಗ್ಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಆ ವಿಚಾರದ ಬಗ್ಗೆ ತಾವು ಚರ್ಚಿಸಿಲ್ಲ. ಆದರೆ, ದೇಶವನ್ನು ಉಳಿಸುವತ್ತ ಮೊದಲು ಗಮನ ಹರಿಸುತ್ತಿದ್ದೇವೆ. ದೇಶಾದ್ಯಂತ ಬಿಜೆಪಿಯೇತರ ಹಾಗೂ ಜಾತ್ಯತೀತ ಮನೋಭಾವದ ಪಕ್ಷಗಳನ್ನು ಒಂದಾಗಿ ಸೇರಿಸುವ ಕೆಲಸ ನಡೆಯುತ್ತಿದೆ ಎಂದು ಆಂಧ್ರದ ಸಿಎಂ ವಿವರಿಸಿದ್ದಾರೆ.

ಮಹಾಮೈತ್ರಿ ರಚನೆ ವಿಫಲವಾಗುತ್ತದೆ ಎಂಬ ಬಿಜೆಪಿಯ ಆರೋಪವನ್ನು ಅಲ್ಲಗಳೆದ ನಾಯ್ಡು, ಕರ್ನಾಟಕದ ಉಪಚುನಾವಣೆಯು ಎಲ್ಲಕ್ಕೂ ಉತ್ತರ ಕೊಟ್ಟಿದೆ ಎಂದು ತಿಳಿಸಿದ್ದಾರೆ.
Loading...

ದೇವೇಗೌಡ, ಕುಮಾರಸ್ವಾಮಿ ಅವರು ಬೆಂಬಲ ಕೊಡುತ್ತಿದ್ದಾರೆ. ಮಾಯಾವತಿ, ಅಖಿಲೇಶ್ ಯಾದವ್ ಜೊತೆಯೂ ಮಾತುಕತೆ ನಡೆಸಿದ್ದೇವೆ. ನಾಳೆ ತಮಿಳುನಾಡಿನ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಜನವರಿಯಲ್ಲಿ ಮಮತಾ ಬ್ಯಾನರ್ಜಿ ದೊಡ್ಡ ಸಮಾವೇಶ ಇಟ್ಟುಕೊಂಡಿದ್ದಾರೆ. ನಾವೂ ಕೂಡ ಆ ತಿಂಗಳಲ್ಲೇ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ. ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಪಕ್ಷವು ನಮಗೆ ಬಾಹ್ಯ ಬೆಂಬಲವಾಗಿ ನಿಂತಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.ದೀಪಾವಳಿಯ ಕೊನೆಯ ದಿನದಂದು ದೇವೇಗೌಡರ ನಿವಾಸದ 2ನೇ ಮಹಡಿಯಲ್ಲಿ ಚಂದ್ರಬಾಬು ನಾಯ್ಡು, ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಈ ಮೂವರು ಕುಳಿತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿದರು. ಸಭೆಯ ನಂತರ ಕೇಂದ್ರದ ವಿರುದ್ಧ ಹರಿಹಾಯ್ದ ಚಂದ್ರಬಾಬು ನಾಯ್ಡು ಅವರ ಅಭಿಪ್ರಾಯಗಳಿಗೆ ದೇವೇಗೌಡರು ಧ್ವನಿಗೂಡಿಸಿದರು.

“ನಾಲ್ಕೂವರೆ ವರ್ಷದಲ್ಲಿ ಮೋದಿ ಅವರು ಸಾಕಷ್ಟು ಸಮಸ್ಯೆ ಉಂಟು ಮಾಡಿದ್ದಾರೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ,” ಎಂದು ದೇವೇಗೌಡರು ಆರೋಪಿಸಿದ್ದಾರೆ.

ಮೋದಿ ನೇತೃತ್ವದ ಎನ್​ಡಿಎ ಸರಕಾರವನ್ನು ಕಿತ್ತೊಗೆಯಬೇಕು. ಅದಕ್ಕಾಗಿ ಜಾತ್ಯತೀತ ಪಕ್ಷಗಳು ಒಂದಾಗಬೇಕಿದೆ. ಈ ಕಾರ್ಯಕ್ಕಾಗಿ ಚಂದ್ರಬಾಬು ನಾಯ್ಡು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಸಹಕಾರ ಕೊಡಬೇಕಿದೆ. ಕಾಂಗ್ರೆಸ್​ನ ಹೆಚ್ಚಿನ ಜವಾಬ್ದಾರಿ ಇದೆ. ಇದೀಗ ಸೆಕ್ಯೂಲರ್ ಪಾರ್ಟಿಗಳ ಬಲ ತೋರ್ಪಡಿಸುವ ಸಮಯ ಬಂದಿದೆ. ಮಾಯಾವತಿ, ಮಮತಾ ಬ್ಯಾನರ್ಜಿ, ಸ್ಟಾಲಿನ್ ಸೇರಿದಂತೆ ಜಾತ್ಯತೀತ ನಾಯಕರೆಲ್ಲರೂ ಒಂದಾಗಬೇಕು ಎಂದು ಮಾಜಿ ಪ್ರಧಾನಿಗಳು ಕರೆ ನೀಡಿದ್ದಾರೆ.

ಇದಾದ ನಂತರ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, 1996ರಲ್ಲಾದಂತೆ 2019ರಲ್ಲೂ ರಾಜಕೀಯ ಕ್ರಾಂತಿ ಆಗುತ್ತದೆ. 1996ರ ಫಲಿತಾಂಶ ಪುನರಾವರ್ತನೆ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಚಂದ್ರಬಾಬು ನಾಯ್ಡು ಬಂದ ಮೇಲೆ ರಾಷ್ಟ್ರ ರಾಜಕಾರಣ ಬದಲಾಗಿದೆ. ಈಗ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಲು ಚಂದ್ರಬಾಬು ನಾಯ್ಡು ಕೋಆರ್ಡಿನೇಟರ್ ರೀತಿ ಕೆಲಸ ಮಾಡುತ್ತಿದ್ದಾರೆ. ದೇವೇಗೌಡರ ಅನುಭವ, ಹಿರಿತನವನ್ನು ಉಪಯೋಗಿಸಿಕೊಂಡು ಎಲ್ಲರನ್ನೂ ಒಂದಾಗಿಸುವ ಯೋಜನೆ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕದ ಉಪಚುನಾವಣೆ, ಹಾಗೂ ಅದಕ್ಕೂ ಮುನ್ನ ನಡೆದ ಅನೇಕ ಚುನಾವಣೆ, ಉಪಚುನಾವಣೆಗಳಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ಸ್ಪರ್ಧಿಸಿ ಗೆಲುವು ಸಾಧಿಸಿವೆ. ಈ ಹಿನ್ನೆಲೆಯಲ್ಲಿ 2019ರ ಮಹಾಚುನಾವಣೆಗೆ ಬಿಜೆಪಿಯೇತರ ಮಹಾಮೈತ್ರಿಕೂಟ ರಚನೆಗೆ ಹೆಚ್ಚಿನ ಆಸಕ್ತಿ ಬಂದಿದೆ. ಕೆಲ ರಾಜ್ಯಗಳಲ್ಲಿ ಮಹಾಮೈತ್ರಿಗೆ ಅಪಸ್ವರ, ಒಡಕು ಮೂಡುವ ಸೂಚನೆ ಇದೆಯಾದರೂ ರಾಹುಲ್ ಗಾಂಧಿ, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಮೊದಲಾದವರು ತೋರುತ್ತಿರುವ ಆಸಕ್ತಿಯು ಮಹಾ ಒಗ್ಗಟ್ಟಿನ ದಾರಿಯನ್ನು ಸುಗಮಗೊಳಿಸುವ ಸಾಧ್ಯತೆ ಇದೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ