HOME » NEWS » State » CHANDAN SHETTY CLARIFIES ON HIS LOVE PROPOSAL AT YUVA DASARA AS MINISTER SOMANNA EXPRESS SHOCK VS

ಯುವ ದಸರಾದಲ್ಲಿ ಲವ್ ಪ್ರೊಪೋಸಲ್ ವಿವಾದ: ವಿ. ಸೋಮಣ್ಣ ಕೋಪ; ಇದು ಜಸ್ಟ್ ಮನರಂಜನೆ ಎಂದ ಚಂದನ್ ಶೆಟ್ಟಿ

ತಾಯಿ ಚಾಮುಂಡೇಶ್ವರಿಯು ಆರು ತಿಂಗಳಲ್ಲಿ ಇವರಿಗೆ ಶಿಕ್ಷೆ ನೀಡುತ್ತದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ; ನನಗೆ ತಪ್ಪೆಂದು ಗೊತ್ತಿರಲಿಲ್ಲ. ನಾನು ಎಂಗೇಜ್ಮೆಂಟ್ ಮಾಡಿಕೊಳ್ಳಲಿಲ್ಲ. ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.

news18-kannada
Updated:October 5, 2019, 12:20 PM IST
ಯುವ ದಸರಾದಲ್ಲಿ ಲವ್ ಪ್ರೊಪೋಸಲ್ ವಿವಾದ: ವಿ. ಸೋಮಣ್ಣ ಕೋಪ; ಇದು ಜಸ್ಟ್ ಮನರಂಜನೆ ಎಂದ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ
  • Share this:
ಮೈಸೂರು(ಅ. 05): ನಿನ್ನೆ ರಾತ್ರಿ ಯುವ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡರಿಗೆ ಲವ್ ಪ್ರೊಪೋಸಲ್ ಮಾಡಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಸರಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಕೆಂಡಾಮಂಡಲವಾಗಿದ್ದಾರೆ. ಸುಸಂಸ್ಕೃತ ವ್ಯಕ್ತಿಯಾಗಿರುವ ಚಂದನ್ ಶೆಟ್ಟಿ ಯುವ ದಸರಾ ವೇದಿಕೆಯನ್ನು ಈ ರೀತಿ ದುರುಪಯೋಗ ಮಾಡಿಕೊಳ್ಳುತ್ತಾನೆಂದು ತಾನು ಭಾವಿಸಿರಲಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.

ನಾಡಿನ ಅಧಿದೇವತೆಯ ನಾಡಹಬ್ಬದ ವೇದಿಕೆಯಲ್ಲಿ ಇಂಥದ್ದು ಆಗಬಾರದಿತ್ತು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರಿಗೂ ಆ ಚಾಮುಂಡಿ ದೇವಿಯೇ ಆರು ತಿಂಗಳಲ್ಲಿ ಶಿಕ್ಷೆ ನೀಡುತ್ತಾಳೆ ಎಂದೂ ಸೋಮಣ್ಣ ಶಪಿಸಿದ್ದಾರೆ.

ಇದನ್ನೂ ಓದಿ: ಯುವ ದಸರಾ ವೇದಿಕೆಯಲ್ಲೇ ನಿವೇದಿತಾ-ಚಂದನ್ ಶೆಟ್ಟಿ ನಿಶ್ಚಿತಾರ್ಥ; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ; ಉಸ್ತುವಾರಿ ಸೋಮಣ್ಣಗೂ ತರಾಟೆ

ನಾನೂ ಸಹ ನಿನ್ನೆ ರಾತ್ರಿ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಅರಮನೆ ಕಾರ್ಯಕ್ರಮಕ್ಕೆ ಹೊರಡಲು ಮುಂದಾದಾಗ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಪೋಷಕರು ನನ್ನನ್ನು ತಡೆದು ಇನ್ನೂ ಸ್ವಲ್ಪ ಸಮಯ ಇರುವಂತೆ ಒತ್ತಾಯಿಸಿದರು. ಆದರೆ, ನಾನು ಅರಮನೆ ಕಾರ್ಯಕ್ರಮಕ್ಕೆ ಹೋಗಲೇಬೇಕದ್ದರಿಂದ ಅಲ್ಲಿಂದ ನಿರ್ಗಮಿಸಿದೆ. ನಾನು ಹೊರಟ ನಂತರ ಈ ಘಟನೆ ನಡೆದಿರುವುದು ನನ್ನ ಗಮನಕ್ಕೆ ಬಂತು. ಚಂದನ್ ಶೆಟ್ಟಿ ಈ ಸಾಂಪ್ರದಾಯಿಕ ವೇದಿಕೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿದ್ದು ಹೇಯವಾದ ಕೃತ್ಯ ಎಂದು ಸಚಿವ ಸೋಮಣ್ಣ ಖಂಡಿಸಿದ್ದಾರೆ.

ದಸರಾ ವೇದಿಕೆ ದುರುಪಯೋಗಪಡಿಸಿಕೊಂಡಿದ್ದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಂದ ಕಾರಣ ಕೇಳಿ ಪೊಲೀಸ್ ಇಲಾಖೆ ನೋಟೀಸ್ ನೀಡುತ್ತದೆ. ಮೈಸೂರು ಜಿಲ್ಲಾ ಅಧೀಕ್ಷಕ ಹಾಗೂ ಯುವ ದಸರಾ ಉಪ ಸಮಿತಿಯ ಕಾರ್ಯಾಧ್ಯಕ್ಷ ರಿಷ್ಯಂತ್ ಅವರು ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ವಿ. ಸೋಮಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನ: ತಹಶೀಲ್ದಾರರ ಖಾಸಗಿ ಕಾರ್ಯಕ್ರಮ; ವಿಡಿಯೋ ಮಾಡಿದ ನಾಲ್ವರು ಬಿಜೆಪಿ ಕಾರ್ಯಕರ್ತರ ಬಂಧನ

ಚಂದನ್ ಶೆಟ್ಟಿ ಸ್ಪಷ್ಟನೆ:ನಿನ್ನೆಯ ಘಟನೆ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆಯೇ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರು ಸ್ಪಷ್ಟನೆಗೆ ಮುಂದಾಗಿದ್ದಾರೆ. ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ತಾನು ಎಂಗೇಜ್ಮೆಂಟ್ ಮಾಡಿಕೊಳ್ಳಲಿಲ್ಲ. ನಿವೇದಿತಾ ಗೌಡ ಅವರಿಗೆ ಲವ್ ಪ್ರೊಪೋಸ್ ಮಾಡಿ ಉಂಗುರ ತೊಡಿಸಿದೆ ಅಷ್ಟೇ. ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದರೆ ನಿಶ್ಚಿತಾರ್ಥವಾಗಿರುತ್ತಿತ್ತು. ಆದರೆ, ನಾನು ಮಾತ್ರ ರಿಂಗ್ ಹಾಕಿದೆ. ಆ ಸಂದರ್ಭದಲ್ಲಿ ಅದು ತಪ್ಪು ಎಂದು ತನಗೆ ಗೊತ್ತಾಗಲಿಲ್ಲ. ತಪ್ಪಾಗಿದ್ದರೆ ತಾನು ಕ್ಷಮೆ ಕೇಳುತ್ತೇನೆ ಎಂದು ಚಂದನ್ ಶೆಟ್ಟಿ ಹೇಳಿದ್ಧಾರೆ.

ಸರ್ಕಾರಿ ವೇದಿಕೆಯಲ್ಲಿ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡಬಾರದು ಎಂದು ನನಗೆ ಗೊತ್ತಿರಲಿಲ್ಲ. ಅದು ನನ್ನ ವೈಯಕ್ತಿಕ ನಿರ್ಧಾರ ಆಗಿತ್ತು. ಪ್ರೇಕ್ಷಕರಿಗೆ ಮನರಂಜನೆ ಒದಗಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಯುವ ದಸರಾ ಉಪ ಸಮಿತಿಯ ಅನುಮತಿ ಕೇಳಿರಲಿಲ್ಲ. ಯಾರಿಗೂ ನಾನು ಮಾಹಿತಿ ನೀಡಿರಲಿಲ್ಲ. ಈ ಘಟನೆಯಲ್ಲಿ ಸರ್ಕಾರದ ಪಾತ್ರ ಯಾವುದೂ ಇಲ್ಲ. ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ನ್ಯೂಸ್18 ಕನ್ನಡಕ್ಕೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

(ವರದಿ: ಪುಟ್ಟಪ್ಪ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 5, 2019, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories