ದೇವಾಲಯದ ಖಾಲಿ ಜಮೀನನ್ನು ಹಸಿರಾಗಿಸಿದ ಗ್ರಾಮಸ್ಥರು; ಇವರ ಕಾರ್ಯ ಶ್ಲಾಘನೀಯ

ಕೆಲಸೂಪುರದ ಗ್ರಾಮಸ್ಥರು  ದೇವಾಲಯಕ್ಕೆ ಸೇರಿದ  ಜಮೀನಿನಲ್ಲಿ ಮನರೇಗಾ ಯೋಜನೆ ಬಳಸಿಕೊಂಡು ನೂರಾರು ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿ ಮೆರೆಯುವ ಮೂಲಕ ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

ಗಿಡಿಮರ ಬೆಳೆಸುತ್ತಿರುವ ಗ್ರಾಮಸ್ಥರು

ಗಿಡಿಮರ ಬೆಳೆಸುತ್ತಿರುವ ಗ್ರಾಮಸ್ಥರು

  • Share this:
ಚಾಮರಾಜನಗರ (ಅ. 23) ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ ಅನ್ನೋ ಮಾತಿದೆ. ಇದನ್ನು ಅರಿತ  ಜಿಲ್ಲೆಯ ಕೆಲಸೂಪುರದ ಗ್ರಾಮಸ್ಥರು  ದೇವಾಲಯಕ್ಕೆ ಸೇರಿದ  ಜಮೀನಿನಲ್ಲಿ ಮನರೇಗಾ ಯೋಜನೆ ಬಳಸಿಕೊಂಡು ನೂರಾರು ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿ ಮೆರೆಯುವ ಮೂಲಕ ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕೆಲಸೂಪುರ ಗ್ರಾಮದ ಹೊರವಲಯದ ಕೆರೆಯಂಚಿನಲ್ಲಿ ಗ್ರಾಮದ ದೇವಾಲಯಕ್ಕೆ ಸೇರಿದ 28 ಎಕರೆ ಕೊಡುಗೆ ಜಮೀನು ಖಾಲಿ ಬಿದ್ದಿತ್ತು. ಇಲ್ಲೇಕೆ ಮರಗಿಡಗಳನ್ನು ಬೆಳೆಸಬಾರದು ಎಂದು ಚಿಂತಿಸಿದ ಗ್ರಾಮಸ್ಥರು ಒಟ್ಟಾಗಿ ಸೇರಿ ಇಲ್ಲಿ ಹೆಬ್ಬೇವು, ಕಹಿಬೇವು, ಹುಣಸೆ, ಹೊಂಗೆ, ನೇರಳೆ , ಸಿಲ್ವರ್ ಓಕ್ ಹೀಗೆ 750ಕ್ಕು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಈ ಮೊದಲು ಈ ಜಮೀನಿನಲ್ಲಿ ನೀಲಗಿರಿ ಮರಗಳನ್ನು ಬೆಳೆಸಲಾಗಿತ್ತು. ಆದರೆ ನೀಲಗಿರಿ ಮರಗಳು ಇರುವುದರಿಂದ ಪಕ್ಕದಲ್ಲಿದ್ದ ಕೆರೆ ಬಹುಬೇಗ ಬತ್ತಿ ಹೋಗುತ್ತಿತ್ತು. ಹಾಗಾಗಿ ಈ ನೀಲಗಿರಿ  ಮರಗಳನ್ನು ಕಡಿದು  ಬಹಿರಂಗ ಹರಾಜು ಹಾಕಿ ಅದರಿಂದ ಬಂದ ಹಣವನ್ನು ಗ್ರಾಮದ ದೇವಾಲಯ ನಿರ್ಮಾಣ ಸೇರಿದಂತೆ ಗ್ರಾಮಾಭಿವೃದ್ಧಿಗೆ ಬಳಸಿಕೊಂಡಿದ್ದರು. ನಂತರ ಈ ಜಮೀನು ಖಾಲಿ ಬಿದ್ದಿತ್ತು.

ಶುದ್ದಗಾಳಿ ಹಾಗು ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಚಿಂತನೆ ನಡೆಸಿದೆವು. ಇದಕ್ಕಾಗಿ ಭೂಮಿ  ಸಮತಟ್ಟು ಮಾಡಿ  ಹೊಸಗಿಡಗಳನ್ನು ನೆಡಲು ಸಾಮಾಜಿಕ ಅರಣ್ಯ ವಿಭಾಗದಿಂದ  ಮನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ.  ಯಾರಾದರು, ಸೌದೆ ಇತರೆ ಉದ್ದೇಶಗಳಿಗೆ ಈ ಗಿಡಮರಗಳನನ್ನು ಕಡಿದರೆ ಅಥವಾ ಜಾನುವಾರುಗಳನ್ನು ಬಿಟ್ಟು ಹಾಳು ಮಾಡಿದರೆ ಅಂತಹವರಿಗೆ ದಂಡ ವಿಧಿಸುವುದಾಗಿ ಗ್ರಾಮದಲ್ಲಿ ಡಂಗೂರವನ್ನು ಸಾರಿಸಿದ್ದಾರೆ. ಈ ಮೂಲಕ ಮರಗಳ ರಕ್ಷಣೆಗೆ ಗ್ರಾಮಸ್ಥರು ಬದ್ಧವಾಗಿದ್ದಾರೆ. ಮಳೆ ಇಲ್ಲದ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ತಂದು ಹಾಕಿ ಗಿಡಗಳನ್ನು ಕಾಪಾಡುತ್ತಿದ್ದಾರೆ. ಈ  ಹಿನ್ನಲೆಯಲ್ಲಿ ಎಲ್ಲಾ ಗಿಡಗಳು ಯಾವುದೇ ತೊಡಕ್ಕಿಲ್ಲದೆ ಗ್ರಾಮಸ್ಥರ ರಕ್ಷಣೆಯಲ್ಲಿ  ಸಮೃದ್ಧವಾಗಿ ಬೆಳೆಯತೊಡಗಿವೆ.

ಇದನ್ನು ಓದಿ: ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತಿಲ್ಲ: ಸಂಕಷ್ಟದಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರು

ಒಂದು ಗಿಡವೂ ಹಾಳಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಹಾಗಾಗಿ ಗ್ರಾಮಸ್ಥರೆಲ್ಲಾ ಸೇರಿ, ಮಕ್ಕಳನ್ನು ಸಾಕುವಂತೆ ಗಿಡಗಳನ್ನು ಸಾಕುತ್ತಿದ್ದೇವೆ. ಈ ಗಿಡಗಳು ಬೆಳೆದು ಮುಂದಿನ ದಿನಗಳಲ್ಲಿ  ನೀಡುವ ಪ್ರತಿಫಲಕ್ಕೆ ಬೆಲೆ ಕಟ್ಟಲಾಗದು ಎನ್ನುತ್ತಾರೆ ಗ್ರಾಮಸ್ಥರು.

ನೆಟ್ಟಿರುವ ಗಿಡಗಳನ್ನು ಗ್ರಾಮಸ್ಥರು ಬಹಳ ಜತನದಿಂದ ಪೋಷಿಸುತ್ತಿದ್ದಾರೆ. ಇಡೀ ನೆಡುತೋಪು ಹಸಿರಿನಿಂದ ಕಂಗೊಳಿಸುತ್ತಿದೆ  ಈಗ ಈ ಎಲ್ಲಾ ಗಿಡಗಳಿಗೂ ಎರಡು ವರ್ಷವಾಗಿದ್ದು 10ನೇ ವರ್ಷಕ್ಕೆ ಆದಾಯ ತಂದು ಕೊಡುವ ನಿರೀಕ್ಷೆಯಿದೆ. ಹುಣಸೆ ಮತ್ತು ನೇರಳೆ ಫಲ ನೀಡಿದರೆ ಬೇವು ಮತ್ತು ಹೊಂಗೆ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಅಷ್ಟೇ ಅಲ್ಲ ಅಂತರ್ಜಲ ವೃದ್ಧಿಗು ಸಹಕಾರಿಯಾಗಲಿವೆ ಎಂಬುದು ಗ್ರಾಮಸ್ಥರ ಆಶಯವಾಗಿದೆ.
Published by:Seema R
First published: