Chamarajeshwara Jathre: ನವದಂಪತಿ ವಿರಹವೇದನೆ ದೂರ ಮಾಡುವ ಚಾಮರಾಜೇಶ್ವರ! 5 ವರ್ಷಗಳ ಬಳಿಕ ವಿಜೃಂಭಣೆಯ ರಥೋತ್ಸವ

ಆಷಾಢ ಮಾಸದಲ್ಲೂ ನವಜೋಡಿಗಳು ಒಂದೆಡೆ ಸೇರಲು ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವ ಒಂದು ಸುವರ್ಣಾವಕಾಶ ಕಲ್ಪಿಸುತ್ತದೆ. ಚಾಮರಾಜೇಶ್ವರನ ದರ್ಶನ ಪಡೆದು ತೇರಿಗೆ ಹಣ್ಣು ಧವನ ಎಸೆದು ಹರಕೆ ಹೊತ್ತರೆ ನವದಂಪತಿಗಳಿಗೆ  ಸಂತಾನ ಭಾಗ್ಯ , ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. 

ಚಾಮರಾಜೇಶ್ವರ ಜಾತ್ರೆ

ಚಾಮರಾಜೇಶ್ವರ ಜಾತ್ರೆ

  • Share this:
ಚಾಮರಾಜನಗರ: ಆಷಾಢ ಬಂತೆಂದೆರೆ ಸಾಕು ನವದಂಪತಿಗಳಿಗೆ (Newly Married Couple) ವಿರಹವೋ ವಿರಹ. ಒಂದು ತಿಂಗಳ (One Month) ಕಾಲ ಅಗಲಿರಬೇಕಾದ ಈ ನವವಿವಾಹಿತರ ವಿರಹವೇದನೆ ಹೇಳತೀರದು. ಆದರೆ ಈ ಪ್ರೇಮ (Love) ಸಂಕಟವನ್ನು, ವಿರಹ ವೇದನೆಯನ್ನು ಚಾಮರಾಜ‌ಗರದ (Chamarajanagar) ಸ್ವಾಮಿ ಚಾಮರಾಜೇಶ್ವರ (Swamy Chamarajeshwara) ದೂರ ಮಾಡುತ್ತಾನೆ. ಹೌದು ಆಷಾಡ ಮಾಸ ಎಂದರೆ ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅಲ್ಲದೇ ನವದಂಪತಿಗಳು ಸಂಪ್ರದಾಯದ ಪ್ರಕಾರ ಒಂದು ತಿಂಗಳ ಕಾಲ ಅಗಲಿರಬೇಕು. ಇಬ್ಬರು ಒಟ್ಟಾಗಿ ಬೆರೆಯುವಂತಿಲ್ಲ. ಈ ಅವಧಿಯಲ್ಲಿ ಅವರ ವಿರಹ ವೇದನೆ ಅನುಭವಿಸಿದವರಿಗೆ ಗೊತ್ತು. ಆದರೆ ಆಷಾಢ ಮಾಸದಲ್ಲು ನವಜೋಡಿಗಳು ಒಂದೆಡೆ ಸೇರಲು ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವ ಒಂದು ಸುವರ್ಣಾವಕಾಶ ಕಲ್ಪಿಸುತ್ತದೆ.

ಆಷಾಢ ಮಾಸದ ಹುಣ್ಣಿಮೆ ದಿನ ಚಾಮರಾಜೇಶ್ವರ ಜಾತ್ರೆ

ಪ್ರತಿ ವರ್ಷ ಆಷಾಡ ಮಾಸದ ಪೂರ್ಣಿಮೆಯ ದಿನ  ಶ್ರೀ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ಜರುಗುತ್ತದೆ. ಚಾಮರಾಜೇಶ್ವರ ರಥೋತ್ಸವಕ್ಕೆ 186 ವರ್ಷಗಳ ಸುದೀರ್ಘ ಇತಿಹಾಸವಿದೆ. 1836ರಲ್ಲಿನ ಆಷಾಡ ಶುದ್ಧ ಹುಣ್ಣಿಮೆಯ ಸೋಮವಾರ ಮೊದಲ ರಥೋತ್ಸವ ನಡೆಯಿತು. ಅಂದಿನಿಂದ ಪ್ರತಿವರ್ಷ ಆಷಾಡ ಮಾಸದ ಹುಣ್ಣಿಮೆಯ ದಿನ ಈ ರಥೋತ್ಸವ ನಡೆದುಕೊಂಡು ಬಂದಿದೆ. ಆದರೆ 2017 ರಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಯಿಂದ ರಥ ಸುಟ್ಟುಹೋಗಿತ್ತು.

ಐದು ವರ್ಷಗಳ ಬಳಿಕ ಅದ್ಧೂರಿ ಜಾತ್ರೆ

ಇದೀಗ ರೂ.1.20 ಕೋಟಿ  ವೆಚ್ಚದಲ್ಲಿ ನೂತನ ರಥ ನಿರ್ಮಿಸಲಾಗಿದ್ದು  ಐದು ವರ್ಷಗಳ ನಂತರ ಇಂದು ಚಾಮರಾಜೇಶ್ವರನ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಆಷಾಡ ಮಾಸದ ಪೂರ್ಣಿಮೆಯ ದಿನವಾದ ಇಂದು ಪೂರ್ವಾಷಾಡ ನಕ್ಷತ್ರದಲ್ಲಿ ಪೂರ್ವಾಹ್ನ 11 ರಿಂದ 11.30 ರ ಶುಭ ಕನ್ಯಾ ಲಗ್ನದಲ್ಲಿ ಚಾಮರಾಜೇಶ್ವರ ರಥಾರೋಹಣ ನಡೆದು ಮೈಸೂರು ರಾಜವಂಶಸ್ಥ  ಯದುವೀರ್ ಒಡೆಯರ್ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: Savadatti Yallamma: ಸವದತ್ತಿಯಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ, ಯಲ್ಲಮ್ಮನ ಹುಂಡಿಯಲ್ಲಿ 2.15 ಕೋಟಿ ಕಾಣಿಕೆ ಸಂಗ್ರಹ

ಮೈಸೂರು ಒಡೆಯರ್ ಉತ್ಸವ ಮೂರ್ತಿ ಮೆರವಣಿಗೆ

ಮೈಸೂರು ಮಹಾರಾಜರಾಗಿದ್ದ ಖಾಸಾ ಚಾಮರಾಜ ಒಡೆಯರ್ ಅವರ ಉತ್ಸವ ಮೂರ್ತಿ ಮುಂದೆ ಸಾಗಿತು. ಇದರ ಹಿಂದೆ ಗಣಪತಿ, ಸುಬ್ರಹ್ಮಣ್ಯ ಚಿಕ್ಕರಥಗಳು ಚಲಿಸಿದವು. ಇವುಗಳ ನಂತರ ಚಾಮರಾಜೇಶ್ವರ ದೊಡ್ಡ ರಥ, ಆನಂತರ ಕೆಂಪನಾಂಜಾಂಭ ರಥಗಳು ರಥದ ಬೀದಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಾಗಿ ಸ್ವಸ್ಥಾನ ಸೇರಿದವು ಚಾಮರಾಜನಗರಕ್ಕೆ ಅರಿಕುಠಾರ ಎಂಬ ಹೆಸರಿತ್ತು. ಆದರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆ ಚಾಮರಾಜ ಒಡೆಯರ್ ಅವರು ಇಲ್ಲಿ ಜನಿಸಿದ  ನೆನಪಿಗಾಗಿ ಇಲ್ಲಿಗೆ ಚಾಮರಾಜನಗರ ಎಂಬ ಹೆಸರು ನಾಮಕರಣ ಮಾಡಿ ಚಾಮರಾಜೇಶ್ವರ ದೇವಸ್ಥಾನ ನಿರ್ಮಿಸಿದರು.

ವಿಶೇಷತೆಯಿಂದ ಕೂಡಿದ ರಥೋತ್ಸವ

1836 ರಲ್ಲಿ ಆಷಾಡ ಶುದ್ಧ ಹುಣ್ಣಿಮೆಯ ದಿನ  ರಥೋತ್ಸವವನ್ನು ಆರಂಭಿಸಿದರು. ಒಡೆಯರ್ ಕಾಲದಲ್ಲಿ ಆರಂಭವಾದ ಈ  ರಥೋತ್ಸವ  2017 ರಿಂದ 2021 ರವರೆಗೆ ಹೊರತುಪಡಿಸಿ ಪ್ರತಿ ವರ್ಷ ಕಳೆಗಟ್ಟುತ್ತಾ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಆಷಾಡ ಮಾಸದಲ್ಲಿ ನಡೆಯುವ ಈ ರಥೋತ್ಸವ ಸಹಜವಾಗಿಯೇ  ವಿಶೇಷತೆಯಿಂದ ಕೂಡಿದೆ.

ಚಾಮರಾಜೇಶ್ವರನಿಗೆ ಪೂಜೆ ಸಲ್ಲಿಸುವ ದಂಪತಿಗಳು

ಜೇಷ್ಠ ಮಾಸದ ತನಕ ವಿವಾಹ ಮಹೋತ್ಸವಗಳ ಸಡಗರ ಮುಗಿದು ಆಷಾಡ ಮಾಸದ ನೆಪದಲ್ಲಿ ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ಅಗಲಿರಬೇಕಾದ ನವವಿವಾಹಿತರ ಈ ರಥೋತ್ಸವದ ದಿನ ಒಂದಡೆ ಸೇರಿ ಚಾಮರಾಜೇಶ್ವರನಿಗೆ ಹಣ್ಣುಧವನ ಎಸೆದು ನಮಿಸುತ್ತಾರೆ. ತಮ್ಮ ದಾಂಪತ್ಯ ಜೀವನ ಸುಖವಾಗಿರಲೆಂದು ಪ್ರಾರ್ಥಿಸುತ್ತಾರೆ.

ಕಂಕಣ ಭಾಗ್ಯ, ಸಂತಾನ ಭಾಗ್ಯ ಕರುಣಿಸುವ ಚಾಮರಾಜೇಶ್ವರ

ಶ್ರೀ ಚಾಮರಾಜೇಶ್ವರ ರಥೋತ್ಸವದಲ್ಲಿ  ಭಾಗವಹಿಸಿ ದೇವರ ದರ್ಶನ ಪಡೆದು  ತೇರಿಗೆ ಹಣ್ಣು ಧವನ ಎಸೆದು ಹರಕೆ ಹೊತ್ತರೆ ನವದಂಪತಿಗಳಿಗೆ  ಸಂತಾನ ಭಾಗ್ಯ , ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.  ನವದಂಪತಿಗಳ ಜಾತ್ರೆ ಎಂದೆ ಖ್ಯಾತಿಯಾಗಿರುವ ಚಾಮರಾಜೇಶ್ವರ ರಥೋತ್ಸವದಲ್ಲಿ ಸಾವಿರಾರು ನವವಿವಾಹಿತರು ಬಂದು ಸೇರುತ್ತಾರೆ. ಎಲ್ಲಿ ನೋಡಿದರು ನವದಂಪತಿಗಳದ್ದೇ ಕಲರವ. ದೇವರಿಗೆ ಒಟ್ಟಾಗಿ ಸೇರಿ ಹಣ್ಣು ಧವನ ಎಸೆದು ನಮಿಸುತ್ತಾರೆ. ಕೈಕೈ ಹಿಡಿದು ಸುತ್ತಾಡುತ್ತಾರೆ. ಖುಷಿಖುಷಿಯಾಗಿ ಅಡ್ಡಾಡುತ್ತಾರೆ. ಜಾತ್ರೆಯಲ್ಲಿ ಇಷ್ಟ ಬಂದ ಸಾಮಾಗ್ರಿ ಖರೀದಿಸುತ್ತಾ ಸಿಹಿತಿಂಡಿ ಮೆಲ್ಲುತ್ತಾ ಅಗಲಿಕೆಯ ಬೇಸರ ಮರೆಯುತ್ತಾರೆ. ಮನದ ಭಾವನೆಗಳನ್ನು ಪರಸ್ಪರ ಹಂಚಿಕೊಂಡು ಕಾಲ ಕಳೆಯುತ್ತಾರೆ.

ಇದನ್ನೂ ಓದಿ: Yellamma Devi: ಮಾಟ ಮಾಡಿದವರಿಗೆ ಶಿಕ್ಷೆ ಕೊಟ್ರೆ 50,001 ರೂಪಾಯಿ ಹುಂಡಿಗೆ ಹಾಕ್ತೀನಿ! ಯಲ್ಲಮ್ಮ ದೇವಿಗೆ ಭಕ್ತನ ಪತ್ರ

ವಿವಿಧ ಜಿಲ್ಲೆಗಳಿಂದ ಭಕ್ತರ ಆಗಮನ

ಈ ಜಾತ್ರೆಯಲ್ಲಿ ಕೇವಲ ಚಾಮರಾಜನಗರ  ಜಿಲ್ಲೆಯವರಷ್ಟೆ ಅಲ್ಲ ನಾಡಿನ ಇತರೆಡೆಗಳಿಂದಲು ನವವಿವಾಹಿತರು ಭಾಗವಹಿಸುತ್ತಾರೆ. ಪಂಚ ರಥಗಳು ರಥೋತ್ಸವಕ್ಕೆ ಮೆರಗು ನೀಡಿದರೆ  ಸ್ಥಳೀಯ ಜಾನಪದ ಕಲೆಗಳಾದ ನಂದಿಕಂಬ, ಗೊರವರ ಕುಣಿತ, ವೀರಗಾಸೆ ಮೊದಲಾದ ಜಾನಪದ ಕಲಾತಂಡಗಳು ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ. ಒಟ್ಟಾರೆ ಆಷಾಡದ ನಡುವೆಯು ನವದಂಪತಿಗಳು ಒಂದೆಡೆ ಸೇರಿ ಸಂಭ್ರಮಿಸಲು ಚಾಮರಾಜೇಶ್ವರ ಕೃಪೆ ತೋರುವುದು ಇಲ್ಲಿನ ವಿಶೇಷವಾಗಿದೆ.
Published by:Annappa Achari
First published: