ಚಾಮರಾಜನಗರ (ಜ.29): ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು (Minor Girl) ಪ್ರೀತಿ ಮಾಡುವಂತೆ ಪೀಡಿಸಿ, ತನ್ನ ಪ್ರೀತಿ (Love) ಒಪ್ಪಿಕೊಳ್ಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ (Threat) ಒಡ್ಡಿದ್ದ ಇಬ್ಬರು ಯುವಕರಿಗೆ ಚಾಮರಾಜನಗರ ನ್ಯಾಯಾಧೀಶರು ಜೈಲಿನ ದಾರಿ ತೋರಿಸಿದ್ದಾರೆ. ಚಾಮರಾಜನಗರ ತಾಲೂಕು ಉಡಿಗಾಲ ಗ್ರಾಮದ 23 ವರ್ಷದ ಚೇತನ್ ಹಾಗೂ 25 ವರ್ಷದ ಗುರುಪ್ರಸಾದ್ ಜೈಲು ಶಿಕ್ಷೆಗೆ ಗುರಿಯಾಗಿದ್ದು, ತಾವು ಮಾಡಿದ ತಪ್ಪಿಗೆ ಈ ಇಬ್ಬರು ಯುವಕರು ಕಂಬಿ ಎಣಿಸುವಂತಾಗಿದೆ.
ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು
ಚಾಮರಾಜನಗರ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿ. ಎಸ್. ಭಾರತಿ ಆರೋಪಿಗಳಿಗೆ ಐಪಿಸಿ ಸೆಕ್ಷನ್ 354(ಡಿ), 506, ಪೋಕ್ಸೋ ಕಾಯ್ದೆ 12 ಮತ್ತು 17 ಕಲಂ ಅಡಿ 22 ದಿನ ಜೈಲು ಶಿಕ್ಷೆ ಹಾಗೂ ತಲಾ 10,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ ದಂಡ ತೆರಲು ತಪ್ಪಿದಲ್ಲಿ ಮತ್ತೆ ಒಂದು ತಿಂಗಳು ಸಾದಾ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ದಂಡದ ಹಣ ತಲಾ 10,000 ರೂಪಾಯಿ ಜೊತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ 20,000 ಸೇರಿಸಿ ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಏನಿದು ಪ್ರಕರಣ?
ಚಾಮರಾಜನಗರ ತಾಲೂಕು ಉಡಿಗಾಲ ಗ್ರಾಮದ ಚೇತನ್ (23) ಹಾಗು ಗುರುಪ್ರಸಾದ್ (25) ಎಂಬ ಯುವಕರು 16 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದರು. ಆದರೆ ಆ ಬಾಲಕಿ ತಾನು ಎಸ್.ಎಸ್.ಎಲ್.ಸಿ. ಪಾಸು ಮಾಡಬೇಕು. ತನ್ನ ಪಾಡಿ ತನ್ನನ್ನು ಬಿಡುವಂತೆ ಹೇಳಿ ಪ್ರೀತಿಸಲು ನಿರಾಕರಿಸಿದ್ದಳು. 2019 ರ ಮೇ 8 ರಂದು ಬಾಲಕಿ ತನ್ನ ಅಜ್ಜಿ ಊರಿಗೆ ಹೋಗಿದ್ದಾಗ ಗುರುಪ್ರಸಾದ್ ಎಂಬಾತ ಬಾಲಕಿಗೆ ಫೋನ್ ಮಾಡಿ ನೀನು ಚೇತನ್ ನನ್ನು ಪ್ರೀತಿಸಿಬೇಕು. ಇಲ್ಲದಿದ್ದಲ್ಲಿ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಇದನ್ನು ಓದಿ: ಹೈಕಮಾಂಡ್ ನಿರ್ಧಾರಕ್ಕೆ Siddaramaiahಗೆ ಬೇಸರವಂತೆ: ಪರ್ಯಾಯ ನಾಯಕನ ಹುಡುಕಾಟದಲ್ಲಿದೆಯಾ Congress?
ಇದರಿಂತ ಹೆದರಿದ ಬಾಲಕಿ ಗ್ರಾಮಕ್ಕೆ ವಾಪಸ್ ಬಂದಿದ್ದಳು. ಈ ವೇಳೆ ಬಾಲಕಿಯನ್ನು ತನ್ನ ಮೋಟಾರ್ ಬೈಕಿ ನಲ್ಲಿ ಕೂರಿಸಿಕೊಂಡು ಕೆಲ ದೂರ ಹೋದ ಚೇತನ್ ಎಂಬಾತ ನೀನು ನನ್ನನ್ನೇ ಪ್ರೀತಿಸಬೇಕು ನನ್ನನ್ನೇ ಮದುವೆಯಾಗಬೇಕು. ಇಲ್ಲದಿದ್ದಲ್ಲಿ ನಿಮ್ಮ ಮನೆಯವರ ಪೈಕಿ ಯಾರನ್ನಾದರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಬೆದರಿದರೂ ಕಡೆಗೂ ಧೈರ್ಯ ಮಾಡಿದ ಬಾಲಕಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾಳೆ.
ಇದನ್ನು ಓದಿ: ಜ.31ರಿಂದ ನೈಟ್ ಕರ್ಫ್ಯೂ ರದ್ದು, ಅಂದಿನಿಂದಲೇ ಶಾಲೆಗಳೂ ಆರಂಭ
ಧೈರ್ಯ ಮಾಡಿ ದೂರು ನೀಡಿದ ಬಾಲಕಿ
ಈ ಬಗ್ಗೆ ಅಪ್ರಾಪ್ತ ಬಾಲಕಿ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಲೈಂಗಿಕ ಪೀಡನೆ ಹಾಗೂ ಕೊಲೆ ಬೆದರಿಕ್ಕೆ ದೃಢಪಟ್ಟ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 354(ಡಿ) , 506 ಹಾಗು ಪೋಕ್ಸೋ ಕಾಯ್ದೆ 11(4), 12 ಮತ್ತು 17 ರ ಕಲಂ ಅಡಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಭೀತಾದ ಹಿನ್ನಲೆಯಲ್ಲಿ ಚೇತನ್ ಹಾಗೂ ಆತನಿಗೆ ಸಹಕರಿಸಿದ ಗುರುಪ್ರಸಾದ್ ಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ವಾದ ಮಂಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ