ಚಾಮರಾಜನಗರ: ದಲಿತರಿಂದ ದಲಿತರಿಗೆ ಬಹಿಷ್ಕಾರ - ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಕೂಲಿ ಕೆಲಸ ಮಾಡಿಕೊಂಡಿದ್ದ ಪುಟ್ಟಯ್ಯನಿಗೆ ದಂಡ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದೇ ಕಾರಣವನ್ನಿಟ್ಟುಕೊಂಡು ಪುಟ್ಟಯ್ಯನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿತ್ತು.

ಆತ್ಮಹತ್ಯೆಗೆ ಯತ್ನಿಸಿದ ಪುಟ್ಟಯ್ಯ

ಆತ್ಮಹತ್ಯೆಗೆ ಯತ್ನಿಸಿದ ಪುಟ್ಟಯ್ಯ

 • Share this:
  ಚಾಮರಾಜನಗರ(ಮೇ 8): ದಲಿತರಿಗೆ ಸವರ್ಣೀಯರು ಬಹಿಷ್ಕಾರ ಹಾಕುವ ಅಮಾನವೀಯ ಘಟನೆಗಳು ಅಲ್ಲಲ್ಲಿ  ನಡೆಯುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಗ್ರಾಮದಲ್ಲಿ ದಲಿತರೇ ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇಂತಹ ಒಂದು ಘಟನೆ ಚಾಮರಾಜನಗರ ತಾಲೋಕು ಅಮಚವಾಡಿಯಲ್ಲಿ ನಡೆದಿದೆ. ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

  ಅಮಚವಾಡಿ ಗ್ರಾಮದ ಪುಟ್ಟಯ್ಯ ಅಲಿಯಾಸ್ ಗಾರೆ ಪುಟ್ಟಯ್ಯ ಎಂಬುವವರೇ ಹೀಗೆ ಆತ್ಮಹತ್ಯೆಗೆ ಯತ್ನಿಸಿದ್ದು. ತೀವ್ರ ಅಸ್ವಸ್ಥನಾಗಿರುವ ಇವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

  ಎರಡು ವರ್ಷಗಳ ಹಿಂದೆ ಅಂಬೇಡ್ಕರ್ ಜಯಂತಿಗೆ ಪ್ರತಿ ಮನೆಯಿಂದ 200 ರೂಪಾಯಿ ಚಂದಾ ನೀಡಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ ಪುಟ್ಟಯ್ಯನ ಬಳಿ ಹಣವಿಲ್ಲದ ಕಾರಣ ಚಂದಾ ನೀಡುವುದು ಒಂದು ದಿನ ತಡವಾಗಿತ್ತು. ಮಾರನೇ ದಿನ ಚಂದಾ ನೀಡಲು ಹೋದ ಪುಟ್ಟಯ್ಯನಿಗೆ ಬೀದಿಯ ಯಜಮಾನರು ಚಂದಾ ನೀಡುವುದು ತಡವಾಗಿದ್ದರಿಂದ ಐದು ಸಾವಿರ ದಂಡ ವಿಧಿಸಿ, ಚಂದಾ ಹಾಗು ದಂಡದ ಹಣವನ್ನು ಒಟ್ಟಿಗೆ ನೀಡುವಂತೆ ತಾಕೀತು ಮಾಡಿದ್ದರು. ಆದರೆ ಕೂಲಿ ಕೆಲಸ ಮಾಡಿಕೊಂಡಿದ್ದ ಪುಟ್ಟಯ್ಯನಿಗೆ ಅಷ್ಟೊಂದು ಹಣವನ್ನು ಹೊಂದಿಸುವುದು ಕಷ್ಟವಾಗಿ ದಂಡ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದೇ ಕಾರಣವನ್ನಿಟ್ಟುಕೊಂಡು ಪುಟ್ಟಯ್ಯನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿತ್ತು.

  ಇದನ್ನೂ ಓದಿ: ಕೊರೋನಾದಿಂದ ಗುಣಮುಖರಾಗಿ ಬಂದ ಬಿಹಾರಿಗಳು; ಹೊಂಗಸಂದ್ರ ಪ್ರವೇಶಿಸಿದ್ದಕ್ಕೆ ಸ್ಥಳೀಯರ ಆಕ್ರೋಶ

  ಇದರಿಂದ ಮನನೊಂದ ಪುಟ್ಟಯ್ಯ ಮಂಡ್ಯ ಜಿಲ್ಲೆ ಮಳವಳ್ಳಿಗೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಪುಟ್ಟಯ್ಯ ಮನೆಯಲ್ಲಿ ಪಕ್ಕದ ಚೆನ್ನಪ್ಪನಪುರ ಗ್ರಾಮದ ದೇವರಗುಡ್ಡರನ್ನು ಕರೆಸಿ ಕಂಡಾಯ ಪೂಜೆ ಮಾಡಿಸಿದ್ದರು. ವಿಷಯ ತಿಳಿದ ಬೀದಿಯ ಯಜಮಾನರು ದೇವರಗುಡ್ಡರನ್ನು ಕಂಡಾಯ ಸಮೇತ ವಾಪಸ್ ಕಳಿಸಿದ್ದರು. ಇದರಿಂದ ಮನೆಯಲ್ಲಿ ಮಾಡಿದ್ದ ಅಡುಗೆ ಎಲ್ಲವೂ ವ್ಯರ್ಥವಾಗಿತ್ತು.

  ಈ ಎಲ್ಲಾ ಹಿನ್ನೆಲೆಯಲ್ಲಿ ಪುಟ್ಟಯ್ಯ ನಿನ್ನೆ  ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ್ದರಿಂದ ಕುಪಿತಗೊಂಡ ಯಜಮಾನರುಗಳು ನಿನ್ನೆ ರಾತ್ರಿ ಪುಟ್ಟಯ್ಯನ ಮನೆ ಬಳಿ ಬಂದು ಹೀನಾಮಾನವಾಗಿ ಬೈಯ್ದು ಮಾನಸಿಕವಾಗಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಎಲ್ಲಾ ಘಟನೆಗಳಿಂದ ಬೇಸತ್ತ ಪುಟ್ಟಯ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

  ವರದಿ: ಎಸ್.ಎಂ. ನಂದೀಶ್
  First published: