ಚಾಮರಾಜನಗರ (ಅಕ್ಟೋಬರ್ 8): ಅಕ್ರಮ ಸಂಬಂಧ ಹೊಂದಿರುವ ವಿಚಾರಕ್ಕೆ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಾ. ಆದರೆ, ಚಾಮರಾಜನಗರದಲ್ಲಿ ನಡೆದ ಘಟನೆ ಇದಕ್ಕಿಂತ ತುಂಬಾನೇ ಭಿನ್ನ. ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಗಂಡನಿಗೆ ಗೊತ್ತಾಗಿತ್ತು. ಗಂಡನಿಗೆ ತನ್ನ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಯಿತಲ್ಲ ಎನ್ನುವ ವಿಚಾರ ತಿಳಿದು ಹೆಂಡತಿ ಭಯ ಬಿದ್ದಿದ್ದಾಳೆ. ಅಷ್ಟೇ ಅಲ್ಲ, ಪ್ರಿಯಕರನ ಜೊತೆ ಸೇರಿ ಗಂಡನ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾಳೆ. ಘಟನೆಗೆ ಸಂಬಂಧಿಸಿ ಮಹಿಳೆ ಹಾಗೂ ಆಕೆಯ ಪ್ರಿಯಕರ ಅರೆಸ್ಟ್ ಆಗಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಗ್ರಾಮದಲ್ಲಿ ಘಟನೆ ನಡೆದಿದೆ. ರಾಘವಾಪುರದ ನಾಗರಾಜ್ ನಾಯಕ ಕೊಲೆಗೀಡಾದ ವ್ಯಕ್ತಿ. ಪದ್ಮ ಹಾಗೂ ಮಣಿಕಂಠ ಕೊಲೆ ಮಾಡಿದವರು. ಪದ್ಮ ತವರೂರು ತೊಂಡವಾಡಿಯಲ್ಲಿರುವ ಮಣಿಕಂಠ ಎಂಬಾತನ ಜೊತೆ ಪದ್ಮ ಅಕ್ರಮ ಸಂಬಂಧ ಹೊಂದಿದ್ದಳು. ನಾಗರಾಜನಾಯಕ ಇದನ್ನು ನೋಡಿದ್ದ. ಈ ವೇಳೆ ಪ್ರಿಯಕರ ಮಣಿಕಂಠನೊಂದಿಗೆ ಸೇರಿ ಕಲ್ಲು ಎತ್ತಿಹಾಕಿ ನಾಗರಾಜ ನಾಯಕನನ್ನು ಕೊಲೆ ಮಾಡಿದ್ದಳು.
ನಂತರ ಯಾರಿಗೂ ಗೊತ್ತಾಗದಂತೆ ಇಬ್ಬರೂ ಶವವನ್ನು ನಂಜನಗೂಡಿನ ಕಳಲೇ ಗ್ರಾಮದ ಬಳಿ ಕಬಿನಿ ನಾಲೆಗೆ ಎಸೆದು ಬಂದಿದ್ದರು. ನಂತರ ಗಂಡ ಕಾಣೆಯಾಗಿದ್ದಾನೆಂದು ಬೇಗೂರು ಪೊಲೀಸ್ ಠಾಣೆಯಲ್ಲಿ ಪದ್ಮ ದೂರು ನೀಡಿದ್ದಳು. ಸದ್ಯ, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ತಾನೆ ಕೊಲೆ ಮಾಡಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ