ಮೇಲ್ವರ್ಗದ ಜನರಿಂದ ದಲಿತರ ಪೂಜೆ; ಇದು ಚಾಮರಾಜನಗರದ ಕರಿಬಲಿ ಹಬ್ಬದ ಆಚರಣೆ

ದಲಿತರು ತಮ್ಮ ಮನೆಗಳಿಗೆ ಪ್ರವೇಶ ಮಾಡಿ ಪೂಜೆ ಸ್ವೀಕರಿಸುವವರೆಗೂ ಮೇಲ್ವರ್ಗದವರು ನೀರನ್ನು ಸಹ ಕುಡಿಯದೇ ಉಪವಾಸವಿರುತ್ತಾರೆ.  ಅವರು ತಮ್ಮ ಮನೆಗಳಿಗೆ ಬಂದು ಹೋದ ನಂತರವಷ್ಟೇ ಸವರ್ಣೀಯರು  ಹಬ್ಬದ ಇತರ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ

ಪೂಜೆಯ ದೃಶ್ಯ

ಪೂಜೆಯ ದೃಶ್ಯ

  • Share this:
ಚಾಮರಾಜ‌ಗರ : ಅಸ್ಪೃಶ್ಯತಾ ಆಚರಣೆ ಕೆಲವಡೆ ಇನ್ನೂ ಜೀವಂತವಾಗಿದೆ. ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ  ಪ್ರಕರಣಗಳು ನಡೆಯುತ್ತಲೇ ಇವೆ.  ಆದರೆ  ಚಾಮರಾಜನಗರ (Chamarajanagar) ಜಿಲ್ಲೆಯ ಹಳ್ಳಿಕೆರೆಹುಂಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸವರ್ಣೀಯರು ದಲಿತರನ್ನು ಪೂಜಿಸಿ ಸಾಮರಸ್ಯ ಮೆರೆಯುವ  ವಿಶಿಷ್ಟ  ಹಬ್ಬವನ್ನು (Festival) ಕಳೆದ ಎಂಟು ಶತಮಾನಗಳಿಂದ ಪ್ರತಿ  ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಸಂತೇಮರಹಳ್ಳಿ ಹೋಬಳಿಯಲ್ಲಿರುವ  ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ದಲಿತರು (Dalit Community)  ವಾಸ ಇಲ್ಲ.  ಆದರೆ ಪಕ್ಕದ  ಗಣಗನೂರು ಗ್ರಾಮದಿಂದ   ಹಳ್ಳಿಕೆರೆಹುಂಡಿ  ಗ್ರಾಮಕ್ಕೆ ಪ್ರತಿ ವರ್ಷ "ಕರಿಬಲಿ" ಎಂದು ಕರೆಯುವ ಹಬ್ಬದಂದು ಗ್ರಾಮಕ್ಕೆ ದಲಿತರು ಆಗಮಿಸುತ್ತಾರೆ.

ಈ ವೇಳೆ ಇಬ್ಬರು ದಲಿತರು ಮೈ ತುಂಬಾ ಕಪ್ಪು ಮಸಿ ಬಳಿದುಕೊಂಡು  ಸವರ್ಣೀಯರ ಎಲ್ಲಾ ಮನೆಗಳಿಗೆ  ತೆರಳುತ್ತಾರೆ. ಇವರೊಟ್ಟಿಗೆ ಇತರ ದಲಿತ ಸಮುದಾಯದ ಜನರು ಸಹ ಹೋಗುತ್ತಾರೆ.  ಕಪ್ಪು ಮಸಿ ಬಳಿದುಕೊಂಡು ವೇಷ ಧರಿಸಿ ಬರುವ ದಲಿತ  ದೇವರ ಸಮಾನ  ಎಂದು ಭಾವಿಸಿ ಗಂಧದಕಡ್ಡಿ ಹಚ್ಚಿ ಕೈ ಮುಗಿದು  ಅವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಅವರಿಗೆ ಹೂವಿನ ಹಾರ ಹಾಕಿ, ಹಣ್ಣು ಹಂಪಲು, ಧವಸ ಧಾನ್ಯ ನೀಡಿ ಸತ್ಕರಿಸುತ್ತಾರೆ.  ಕೆಲವರು ಎಳನೀರು ಕೊಡುತ್ತಾರೆ.

ಪೂಜೆ ಆಗುವವರೆಗೂ ಉಪವಾಸ
ದಲಿತರು ತಮ್ಮ ಮನೆಗಳಿಗೆ ಪ್ರವೇಶ ಮಾಡಿ ಪೂಜೆ ಸ್ವೀಕರಿಸುವವರೆಗೂ ಮೇಲ್ವರ್ಗದವರು ನೀರನ್ನು ಸಹ ಕುಡಿಯದೇ ಉಪವಾಸವಿರುತ್ತಾರೆ.  ಅವರು ತಮ್ಮ ಮನೆಗಳಿಗೆ ಬಂದು ಹೋದ ನಂತರವಷ್ಟೇ ಸವರ್ಣೀಯರು  ಹಬ್ಬದ ಇತರ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ

ಹಬ್ಬದ ಹಿನ್ನೆಲೆ ಹೀಗಿದೆ
12 ನೇ ಶತಮಾನದಲ್ಲಿ   ಬಸವಣ್ಣನ ಅನುಭವ ಮಂಟಪದಿಂದ ಗಂಗಾಧರೇಶ್ವರ, ಕೆಂಭಾವಿ ಭೋಗೇಶ್ವರ ಎಂಬ  ಶರಣರು  ಧರ್ಮ ಪ್ರಚಾರಕ್ಕೆಂದು  ದಕ್ಷಿಣ ಭಾಗಕ್ಕೆ ಆಗಮಿಸಿ  ಗಣಗನೂರಿನಲ್ಲಿ  ನೆಲೆಸಿದ್ದರು  ಎಂಬ ಐತಿಹ್ಯವಿದೆ.

ಹಳ್ಳಿಕೆರೆಹುಂಡಿ ಗಣಗನೂರು, ಗೊದ್ದಲೆಹುಂಡಿ, ಸೊತ್ತನಹುಂಡಿ ಹಾಗು ಸುತ್ತಮುತ್ತಲ ಗ್ರಾಮಗಳಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದ ಇವರನ್ನು ಹರಿಜನರು  ಎಂದು  ಭಾವಿಸಿದ ಮೇಲ್ವರ್ಗದವರು  ಅವರ ಮೇಲೆ  ಹಲ್ಲೆ ನಡೆಸಿದರೆಂದು,  ಇದರಿಂದ ಮನನೊಂದ ಈ ಶರಣರು  ಗಣಗನೂರಿನ ಬಾವಿಯೊಂದಕ್ಕೆ ಹಾರಿ  ಐಕ್ಯವಾದರೆಂದು ಪುರಾಣ ಇದೆ.

ಇದನ್ನೂ ಓದಿ: Hindu Muslim Religious Harmony: ಭಟ್ಕಳದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ; ಹನುಮಂತ ದೇವರ ಜಾತ್ರೆಗೆ ಮುಸ್ಲಿಂ ಕುಟುಂಬಕ್ಕೆ ಆಹ್ವಾನ

ಬಾವಿಗೆ ಹಾರಿ ಐಕ್ಯವಾದವರು ಶರಣರೆಂದು   ಸತ್ಯದ ಅರಿವಾದಾಗ ಗ್ರಾಮಸ್ಥರು ತಾವು  ಮಾಡಿದ ತಪ್ಪಿಗಾಗಿ  ಪ್ರಾಯಶ್ಚಿತ್ತವಾಗಿ  ಗ್ರಾಮದಲ್ಲಿ  ದಲಿತರನ್ನು ಪೂಜಿಸುವ ಹಬ್ಬವನ್ನು ಪ್ರತಿವರ್ಷ  ನಡೆಸಿಕೊಂಡು ಬರುತ್ತಿದ್ದಾರೆ.

ಸಾಮರಸ್ಯ ಮೂಡಿಸುವ ಆಚರಣೆ
"ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ "ಕರಿಬಲಿ" ಹಬ್ಬ ಆಚರಿಸಿರಲಿಲ್ಲ. ಈ ಬಾರಿ ಮತ್ತೆ ಈ ವಿಶಿಷ್ಟ ಹಬ್ಬ ಆಚರಿಸಿದ್ದೇವೆ, ಇಂತಹ ಆಚರಣೆಗಳು ಸೌಹಾರ್ದತೆಗೆ ಪೂಕರವಾಗಿರುತ್ತವೆ‌, ಜಾತಿಬೇಧ ದೂರ ಮಾಡುವ, ಎಲ್ಲಾ ಜನಾಂಗದಲ್ಲೂ ಸಾಮರಸ್ಯ ಮೂಡಿಸುವ ಈ ಆಚರಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ" ಎಂದು ಹಳ್ಳಿಕೆರೆಹುಂಡಿ ಭಾಗ್ಯರಾಜ್ ನ್ಯೂಸ್18 ಗೆ ತಿಳಿಸಿದರು.

ಇದನ್ನೂ ಓದಿ: Sri Rama Navami: ಶೋಭಾಯಾತ್ರೆಯಲ್ಲಿ ಭಾಗಿಯಾದ ಶ್ರೀರಾಮನ ಭಕ್ತರಿಗೆ ಮುಸ್ಲಿಮರಿಂದ ಪಾನೀಯ ವಿತರಣೆ

ದೇಶದ ಹಲವೆಡೆ ಅಸ್ಪೃಶ್ಯತಾ  ಆಚರಣೆ ಇನ್ನೂ ಜೀವಂತವಾಗಿದೆ, ದೇವಸ್ಥಾನಗಳಿಗೆ ಹಾಗೂ ಸವರ್ಣೀಯರ ಮನೆಗಳಿಗೆ ಪ್ರವೇಶ ನಿಷಿದ್ಧವಾಗಿದೆ, ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ.  ಆದರೆ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ದಲಿತರನ್ನು ದೇವರ ಸಮಾನ ಎಂದು ಭಾವಿಷಿ  ಪ್ರತಿವರ್ಷ ಅವರಿಗೆ ಪೂಜೆ ಸಲ್ಲಿಸುವ  ಮೂಲಕ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರು ಸಾಮರಸ್ಯ ಮೆರೆಯುತ್ತಿದ್ದಾರೆ
Published by:guruganesh bhat
First published: