Male Mahadeshwara Hills: ಮಲೈ ಮಹದೇಶ್ವರ ಬೆಟ್ಟದಲ್ಲಿ ಸರಳ  ಶಿವರಾತ್ರಿ ರಥೋತ್ಸವ

ಸ್ಥಳೀಯ ಭಕ್ತರು, ಮಲೈಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನೌಕರವರ್ಗದವರು ಮಹದೇಶ್ವರನ ರಥ ಎಳೆದು ರಥಕ್ಕೆ ಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು.  ಉಘೇ ಉಘೇ ಮಾದಪ್ಪ ಎಂಬ ಜಯಘೊಷದೊಂದಿಗೆ ಮಹದೇಶ್ವರನ ರಥೋತ್ಸವ ಸಾಂಗವಾಗಿ ನೆರವೇರಿತು. 

ಶಿವರಾತ್ರಿ ರಥೋತ್ಸವ

ಶಿವರಾತ್ರಿ ರಥೋತ್ಸವ

  • Share this:
ಚಾಮರಾಜನಗರ (ಮಾ.14): ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ ಮಲೈ ಮಹದೇಶ್ವರ ಬೆಟ್ಟದಲ್ಲಿ  ಶಿವರಾತ್ರಿ ರಥೋತ್ಸವ ಕೋವಿಡ್-19 ಹಿನ್ನಲೆಯಲ್ಲಿ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿತು. ಪ್ರತಿ ವರ್ಷ ಎತ್ತ ನೋಡಿದರೂ ಜನಜಾತ್ರೆ, ಉಘೇ ಉಘೇ ಎಂಬ ಜಯಕಾರ ಬೆಟ್ಟದ ತುಂಬೆಲ್ಲ ಮಾರ್ದನಿಸುತ್ತಿತ್ತು.  ಆದರೆ ಈ ಬಾರಿ ಹೊರಗಿನ ಭಕ್ತರಿಲ್ಲದೆ ಮಾದಪ್ಪನ ರಥೋತ್ಸವ  ನಡೆಯಿತು. ಇದರೊಂದಿಗೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.  

ಶಿವರಾತ್ರಿ ಅಂಗವಾಗಿ ಮಾದಪ್ಪನ ಸನ್ನಿಧಿಯಲ್ಲಿ   ಕಳೆದ ನಾಲ್ಕು ದಿನಗಳಿಂದ ಎಣ್ಣೆಮಜ್ಜನ, ಅಮಾವಾಸ್ಯೆ ಪೂಜೆ ಸೇರಿದಂತೆ ವಿಶೇಷ ಪೂಜೆ, ಸಾಂಪ್ರದಾಯಿಕ ಸೇವೆಗಳು  ನಡೆದು ಕೊನೆಯ ದಿನವಾದ ಇಂದು ಶಿವರಾತ್ರಿ ರಥೋತ್ಸವ  ನಡೆಯಿತು. ಇತ್ತೀಚಿನ ದಿನಗಳಲ್ಲಿ  ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಮಾರ್ಗದರ್ಶನದಂತೆ ಮಾ. 9 ರಿಂದ ಮಾ.14 ರವರೆಗೆ ಹೊರಗಿನಿಂದ ಬರುವ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಅಲ್ಲದೆ  ಭಕ್ತರ ವಾಸ್ತವ್ಯ, ಪರ ಮಾಡುವುದಕ್ಕೂ ನಿರ್ಬಂಧ ಹೇರಲಾಗಿತ್ತು.

ಆದರೆ ಹಿಂದಿನಿಂದ ನಡೆದು ಬಂದಿರುವ  ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಉಂಟಾಂಗದಂತೆ ಸರಳ ಹಾಗೂ  ಸಾಂಪ್ರದಾಯಿಕವಾಗಿ ರಥೋತ್ಸವ ನೆರವೇರಿಸಲಾಯ್ತು. ಮಲೈ ಮಹದೇಶ್ವರ ಬೆಟ್ಟ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸ್ಥಳೀಯರು, ಪ್ರಾಧಿಕಾರದ ನೌಕರರು ಹಾಗೂ ಸೀಮಿತ ಸಂಖ್ಯೆಯ ಆಹ್ವಾನಿತ ದಾನಿಗಳು ಮಾತ್ರ ಶಿವರಾತ್ರಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

ಬೆಳಿಗ್ಗೆ 10.25 ಕ್ಕೆ ಸಲ್ಲುವ ಶುಭ ಮುಹೂರ್ತ ಹಾಗೂ ವೃಷಭ ಲಗ್ನದಲ್ಲಿ ರಥಾರೋಹಣ ನಡೆದು ನಂತರ ಹಸಿರು ಸೀರೆ ಉಟ್ಟ ಬೇಡಗಂಪಣ ಜನಾಂಗದ ಬಾಲಕಿಯರು ಮಹದೇಶ್ವರನಿಗೆ ಬೆಲ್ಲದಾರತಿ ಬೆಳಗುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪಗಳು ರಥೋತ್ಸವದಲ್ಲಿ ಪಾಲ್ಗೊಂಡು  ಗಮನ ಸೆಳೆದವು.

ಕೋಲಾರ: ಅದ್ದೂರಿಯಾಗಿ ನೆರವೇರಿದ ಪುರಾಣ ಪ್ರಸಿದ್ದ ಆವಣಿ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ

ಸ್ಥಳೀಯ ಭಕ್ತರು, ಮಲೈಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನೌಕರವರ್ಗದವರು ಮಹದೇಶ್ವರನ ರಥ ಎಳೆದು ರಥಕ್ಕೆ ಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು.  ಉಘೇ ಉಘೇ ಮಾದಪ್ಪ ಎಂಬ ಜಯಘೊಷದೊಂದಿಗೆ ಮಹದೇಶ್ವರ ನ ರಥೋತ್ಸವ ಸಾಂಗವಾಗಿ ನೆರವೇರಿತು.

ಮಹದೇಶ್ವರ ನಂಬಿದ ಭಕ್ತರನ್ನು ಕೈಬಿಡುವುದಿಲ್ಲ, ಬೇಡಿದ ವರವನ್ನು ಕರುಣಿಸುತ್ತಾನೆ ಎಂಬ ನಂಬಿಕೆ  ಭಕ್ತರದ್ದಾಗಿದೆ. ಪ್ರತಿ ವರ್ಷ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದ ಲಕ್ಷಾಂತರ ಮಂದಿ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ  ಪಾಲ್ಗೊಳ್ಳುತ್ತಿದ್ದರು. ಸಹಸ್ರಾರು ಭಕ್ತರು ಕಾಡುಮೇಡು ಸುತ್ತಿ ಕಾವೇರಿ ನದಿ ದಾಟಿ ಕಾಲ್ನಡಿಗೆಯಲ್ಲೇ ಮಾದಪ್ಪನ ಸನ್ನಿಧಿಗೆ ಬರುತ್ತಿದ್ದರು.

ಆದರೆ ಕೋವಿಡ್ -19 ಹಿನ್ನಲೆಯಲ್ಲಿ ಈ ಬಾರಿ ಜನಜಂಗುಳಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದ ಜಿಲ್ಲಾಡಳಿತ, ಸರಳ ಹಾಗೂ ಸಾಂಪ್ರದಾಯಿಕವಾಗಿ ಮಾತ್ರ ಜಾತ್ರಾ ಮಹೋತ್ಸವ ಆಚರಿಸಲು ನಿರ್ಧರಿಸಿ ಹೊರಗಿನ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಿತ್ತು.  ಹೊರಗಿನಿಂದ ಬರುವ ಭಕ್ತರನ್ನು ತಡೆಯಲು ತಾಳಬೆಟ್ಟ ಸೇರಿದಂತೆ  ಜಿಲ್ಲೆಯ ವಿವಿಧೆಡೆ ಪೊಲೀಸ್  ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿತ್ತು.

ಇಂದು ನಡೆದ ಮಹದೇಶ್ವರನ ರಥೋತ್ಸವದೊಂದಿಗೆ  ಕಳೆದ ನಾಲ್ಕು ದಿನಗಳಿಂದ ಮಹದೇಶ್ವರ ಬೆಟ್ಟದಲ್ಲಿ ನಡೆದ ಶಿವರಾತ್ರಿ ಜಾತ್ರೆಗೆ ತೆರೆಬಿದ್ದಿತು.
Published by:Latha CG
First published: