ಲಾಕ್​ಡೌನ್​ ಹಿನ್ನಲೆ ಊರುಗಳತ್ತ ಮುಖ ಮಾಡಿದ ಮಂದಿ; ಸೋಂಕು ಹಿನ್ನಲೆ ಗ್ರಾಮಕ್ಕೆ ನಿರ್ಬಂಧ ವಿಧಿಸಿದ ಮುಖಂಡರು

ಉದ್ಯೋಗ ನಿಮಿತ್ತ ಬೆಂಗಳೂರು, ಮೈಸೂರು ಸೇರಿದಂತೆ ಬೇರೆ ಕಡೆ ಇರುವರು ಸದ್ಯಕ್ಕೆ ಗ್ರಾಮಕ್ಕೆ ಬರಬಾರದು ಎಂದು ಸೂಚನೆ ರವಾನಿಸಲು ಸಹ ನಿರ್ಧರಿಸಿದ್ದಾರೆ.

ಊರಿನ ಮುಖಂಡರು

ಊರಿನ ಮುಖಂಡರು

  • Share this:
ಚಾಮರಾಜನಗರ (ಏ.26):  ಕಳೆದ ವರ್ಷ ಸರಿಸುಮಾರು ಮೂರು ತಿಂಗಳ ಕಾಲ ಯಾವುದೇ ಕೊರೋನಾ ಪ್ರಕರಣ ಕಂಡುಬಾರದೆ ಹಸಿರು ವಲಯದ್ದು ಇಡೀ ದೇಶದ ಗಮನ ಸೆಳೆದಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಕೊರೋನಾ ಪ್ರಕರಣಗಳು ನಿರೀಕ್ಷೆಗು ಮೀರಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿದ್ದು ಜಿಲ್ಲೆಯ ಜನರಲ್ಲಿ ಆತಂಕ ತಂದಿಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ನಿತ್ಯ 200 ರಿಂದ 250 ಮಂದಿಗೆ ಕೋವಿಡ್ ಸೋಂಕು ತಗುಲುತ್ತಿದ್ದು ಜಿಲ್ಲಾಡಳಿತವನ್ನಷ್ಟೇ ಅಲ್ಲ,   ಜನರನ್ನು ಸಹ ನಿದ್ದೆಗೆಡಿಸಿದೆ. ಕೊರೋನಾ ತಡೆಗೆ ಕಳೆದ ಬಾರಿ ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಹಲವಾರು ರೀತಿಯ ನಿರ್ಬಂಧ ಹೇರಿಕೊಂಡು ಕೊರೋನಾ ಕಟ್ಟಿ ಹಾಕಿದ್ದ ಗ್ರಾಮಸ್ಥರು ಈ ಬಾರಿಯು ಅದೇ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕೊರೋನಾ ಎರಡನೇ ಅಲೆ ಎದುರಿಸಲು  ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೆಗಾಲ ಗ್ರಾಮಸ್ಥರು ಹಲವು ರೀತಿಯ ಸ್ವಯಂ ನಿರ್ಬಂಧ ಹಾಕಿಕೊಳ್ಳಲು ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ   ಕೊರೋನಾ ಕಟ್ಟಿ ಹಾಕಲು ಸಭೆ ನಡೆಸಿದ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ನಿವಾಸಿಗಳು ತುರ್ತು ಸಂದರ್ಭ ಹೊರತಾಗಿ ಗ್ರಾಮದಿಂದ ಯಾರೂ ಹೊರ ಹೋಗಬಾರದು, ಹಾಗೆಯೇ ಹೊರಗಿನಿಂದಲು ಗ್ರಾಮಕ್ಕೆ ಯಾರು ಬರಲು ಬಿಡಬಾರದು ಎಂದು ತೀರ್ಮಾನ ಕೈಗೊಂಡಿದ್ದಾರೆ

ಉದ್ಯೋಗ ನಿಮಿತ್ತ ಬೆಂಗಳೂರು, ಮೈಸೂರು ಸೇರಿದಂತೆ ಬೇರೆ ಕಡೆ ಇರುವರು ಸದ್ಯಕ್ಕೆ ಗ್ರಾಮಕ್ಕೆ ಬರಬಾರದು ಎಂದು ಸೂಚನೆ ರವಾನಿಸಲು ಸಹ ನಿರ್ಧರಿಸಿದ್ದಾರೆ. ಮಹಿಳಾ ಸಂಘಗಳ ಸದಸ್ಯೆಯರಿಗೆ  ನೀಡಿರುವ ಸಾಲ ವಸೂಲಾತಿಗೆ ಫೈನ್ಯಾನ್ಸ್ ಕಂಪನಿಗಳ ಪ್ರತಿನಿಧಿಗಳು ಹೊರಗಿನಿಂದ ನಿತ್ಯ ಗ್ರಾಮಕ್ಕೆ ಬರುವುದರಿಂದ  ಕೊರೋನಾ  ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ಅವರು ಕೊರೋನಾ ಕಡಿಮೆ ಆಗುವವರೆಗು ಗ್ರಾಮಕ್ಕೆ ಬರಬಾರದು ಎಂದು ಸಹ ನಿರ್ಬಂಧ ಹೇರಿದ್ದಾರೆ.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು, ಇದರಿಂದ ಕೊರೋನಾದಿಂದ ಜೀವ ರಕ್ಷಣೆ ದೊರೆಯುತ್ತದೆ, ಮನೆಗಳಲ್ಲಿ ಯಾರಿಗೇ ಆದರೂ   ಜ್ವರ, ಶೀತ ನೆಗಡಿ, ಕೆಮ್ಮಿನ ಲಕ್ಷಣ  ಕಾಣಿಸಿಕೊಂಡರೆ  ಹಿಂಜರಿಯದೆ ತಕ್ಷಣ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ತೀರ್ಮಾನ ಕೈಗೊಂಡಿದ್ದಾರೆ

ಗ್ರಾಮದಲ್ಲಿ ಎಲ್ಲಿಯು ಗುಂಪು ಸೇರಬಾರದು,  ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರು, ನ್ಯಾಯಪಂಚಾಯ್ತಿ ಸಭೆ ನಡೆಸಿ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದಾರೆ. ಈ ಬಗ್ಗೆ ಗ್ರಾಮದಲ್ಲಿ ಟಾಂಟಾಂ ಹಾಕಿಸಿದ್ದಾರೆ. ಧ್ವನಿವರ್ದಕದ ಮೂಲಕವೂ ಪ್ರಚಾರ ಮಾಡಿದ್ದಾರೆ.

ಇದನ್ನು ಓದಿ: ರಾಜಧಾನಿ ತೊರೆಯಲು ಮುಂದಾದ ವಲಸಿಗರು; ಮೆಜೆಸ್ಟಿಕ್​ನಲ್ಲಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆ

ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಗ್ರಾಮದ ಮುಖಂಡ ಮಹದೇವು, ನಮ್ಮೂರಿನಲ್ಲಿ ವ್ಯಕ್ತಿಯೊಬ್ಬರಿಗೆ  ಕೊರೋನಾ ಸೋಂಕು ತಗುಲಿರುವುದು ಗೊತ್ತಾಯಿತು. ಇದಲ್ಲದೆ ಗ್ರಾಮದಿಂದ ಹತ್ತಾರು ಮಂದಿ ನಿತ್ಯ ಕೊಳ್ಳೇಗಾಲ, ಚಾಮರಾಜನಗರ, ಮೈಸೂರು, ಮತ್ತಿತರ ಕಡೆ ಹೋಗಿ ಬರುತ್ತಾರೆ. ನಾವು ಎಚ್ಚೆತ್ತುಕೊಳ್ಳದೆ ಇದ್ದರೆ  ಗ್ರಾಮಸ್ಥರಿಗೆ  ಸುಲಭವಾಗಿ ಹರಡುವ ಎಲ್ಲಾ ಸಾಧ್ಯತೆಗಳಿದ್ದು ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ನಾವೇ ಏಕೆ ಸ್ವಯಂ ನಿರ್ಬಂಧ ಹಾಕಿಕೊಳ್ಳಬಾರದು ಎಂದು ಸಭೆ ನಡೆಸಿ  ಈ ತೀರ್ಮಾನ ಕೈಗೊಂಡಿದ್ದೇವೆ . ನಮ್ಮ ತೀರ್ಮಾನಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು

ಒಟ್ಟಿನಲ್ಲಿ ಕೊರೋನಾ ಹರಡದಂತೆ   ಸ್ವಯಂ ನಿರ್ಧಾರ ಕೈಗೊಳ್ಳುವ ಮೂಲಕ ಗ್ರಾಮಸ್ಥರು ಸಾಮಾಜಿಕ ಜವಬ್ದಾರಿ ಮೆರೆದಿದ್ದು, ಇತರರಿಗು ಮಾದರಿಯಾಗಿದ್ದಾರೆ

(ವರದಿ: ಎಸ್.ಎಂ.ನಂದೀಶ್)
Published by:Seema R
First published: