Chamarajanagar oxygen tragedy: ಮೃತ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವಂತೆ ಹೈ ಕೋರ್ಟ್​ ಸೂಚನೆ

ಇವರ 13 ಮೃತರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ನಂತರ ಮೃತಪಟ್ಟ 11 ಜನರಿಗೆ ತಲಾ 2 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಉಚ್ಛ ನ್ಯಾಯಾಲಯ ನಿರ್ದೇಶ ನೀಡಿದೆ

ಕರ್ನಾಟಕ ಹೈಕೋರ್ಟ್ (ಚಿತ್ರ ಕೃಪೆ- ಗೂಗಲ್)

ಕರ್ನಾಟಕ ಹೈಕೋರ್ಟ್ (ಚಿತ್ರ ಕೃಪೆ- ಗೂಗಲ್)

  • Share this:
    ಬೆಂಗಳೂರು (ಜು. 6):  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ.2 ರಂದು ನಡೆದಿದ್ದ ಆಕ್ಸಿಜನ್ ದುರಂತ (Chamarajanagar oxygen tragedy) ಪ್ರಕರಣದಲ್ಲಿ ಸಾವನ್ನಪ್ಪಿದ್ದ 13 ಮೃತರಿಗೆ 5 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ (Karnataka High Court)​ ಸೂಚನೆ ನೀಡಿದೆ.  ಆಕ್ಸಿಜನ್​ ದುರಂತದಿಂದ 24 ಮಂದಿ ಸಾವನ್ನಪ್ಪಿದ್ದರು. ಈ ವೇಳೆ ಆಕ್ಸಿಜನ್ ಕೊರತೆಯಿಂದ ಬೆಳಗ್ಗೆ ರಾತ್ರಿ 13 ಮಂದಿ ಸಾವನ್ನಪ್ಪಿದ್ದರು. ಇವರ 13 ಮೃತರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ನಂತರ ಮೃತಪಟ್ಟ 11 ಜನರಿಗೆ ತಲಾ 2 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಉಚ್ಛ ನ್ಯಾಯಾಲಯ ನಿರ್ದೇಶ ನೀಡಿದೆ. ಇದೇ ವೇಳೆ ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಕೂಡ ನಡೆಯುತ್ತಿದ್ದು, ಆಯೋಗದ ವರದಿ ನಂತರ ಹೆಚ್ಚುವರಿ ಪರಿಹಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ. 

    ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಈ ಆಕ್ಸಿಜನ್​ ದುರಂತ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಸುದ್ದಿಯಾಗಿತ್ತು. ಅಲ್ಲದೇ ಈ ಪ್ರಕರಣ ಕುರಿತು ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅವರನ್ನು ನಿಯೋಜಿಸಿತ್ತು. ಆದರೆ ಮರುದಿನವೇ ಹೈಕೋರ್ಟ್ ಈ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸಿ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿತ್ತು. ಅದೇ ದಿನ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ನ್ಯಾಯಾಂಗ ತನಿಖೆ ಒಂದು ತಿಂಗಳ ಒಳಗೆ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರನ್ನು ನೇಮಿಸಿತ್ತು.

    ಇದನ್ನು ಓದಿ: ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದಿಲ್ಲ; ಅವಧೂತ ವಿನಯ್​ ಗುರೂಜಿ ಸ್ಪಷ್ಟನೆ

    ಮೈಸೂರಿನಲ್ಲಿನ ಆಮ್ಲಜನಕ ಸಿಲಿಂಡರ್ ಮರುಪೂರಣ ಘಟಕದಿಂದ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿ. ಆಸ್ಪತ್ರೆಯ ಆಡಳಿತ ಜಾಗರೂಕರಾಗಿದ್ದರೆ, ಪೂರೈಕೆದಾರರು ಸಮಯೋಚಿತವಾಗಿ ಮರುಪೂರಣಗೊಳಿಸಿದ್ದರೆ ಸಾಕಷ್ಟು ಆಮ್ಲಜನಕ ಸಂಗ್ರಹಿಸಬಹುದಿತ್ತು. ಅದನ್ನು ಮಾಡದೆ ಇರುವುದು ಅಮೂಲ್ಯ ಜೀವಗಳ ಹಾನಿಗೆ ಕಾರಣವಾಗಿದೆ ಎಂದು ಹೈಕೋರ್ಟ್‌ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ವರದಿಯನ್ನು ನೀಡಿದ್ದರು.

    ಇದಕ್ಕೂ ಮುನ್ನ ಕೂಡ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕೊಂಡಿದ್ದ ನ್ಯಾಯಾಪೀಠ, ಮೃತ ಸಂತ್ರಸ್ಥರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ  ಸೂಚನೆ  ನೀಡಿತ್ತು.  ಹೈಕೋರ್ಟ್ ಸೂಚನೆ ನೀಡಿದ ಮೇರೆಗೆ ಸರ್ಕಾರ  ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಆದರೆ,  ಘಟನೆ ನಡೆದು ಎರಡು ತಿಂಗಳಾದರೂ ಸರ್ಕಾರ  ಮೃತರ ಕುಟುಂಬದವರಿಗೆ ಕನಿಷ್ಟ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಸರ್ಕಾರದ ಸಚಿವರಾಗಲಿ,  ಅಧಿಕಾರಿಗಳಾಗಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ  ಸಂಕಷ್ಟ ಆಲಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

    ಜಿಲ್ಲಾಧಿಕಾರಿಗಳ ನಡುವಿನ ಕಚ್ಚಾಟಕ್ಕೂ ಕಾರಣವಾಗಿತ್ತು ಘಟನೆ

    ಈ ಆಕ್ಸಿಜನ್ ಪೂರೈಕೆ ವಿಚಾರವೂ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಎಂ ಡಿ ರವಿ ಹಾಗೂ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನಡುವಿನ ಕಚ್ಚಾಟಕ್ಕೂ ಕಾರಣವಾಗಿತ್ತು. ಎರಡು ಜಿಲ್ಲಾಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿತ್ತು. ಅಲ್ಲದೇ ಈ ಘಟನೆಗೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹೊಣೆ ಎನ್ನಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಹೈ ಕೋರ್ಟ್​ ಬಳಿಕ ರೋಹಿಣಿ ಸಿಂಧೂರಿಗೆ ಕ್ಲೀನ್ ​ಚಿಟ್​ ನೀಡಿತ್ತು. ಅಲ್ಲದೇ, ನ್ಯಾಯಾಂಗ ತನಿಖೆಯಲ್ಲಿ ಜಿಲ್ಲಾಧಿಕಾರಿ ಎಂ ಡಿ ರವಿ ಅವರ ವೈಫಲ್ಯವೇ ಕಾರಣ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು.
    Published by:Seema R
    First published: