• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • N Mahesh: ಆನೆ ಬಿಟ್ಟು ಕಮಲ ಹಿಡಿದ ಶಾಸಕ ಎನ್.ಮಹೇಶ್; ಸಿಎಂ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

N Mahesh: ಆನೆ ಬಿಟ್ಟು ಕಮಲ ಹಿಡಿದ ಶಾಸಕ ಎನ್.ಮಹೇಶ್; ಸಿಎಂ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ಎನ್​ ಮಹೇಶ್

ಎನ್​ ಮಹೇಶ್

ಮೂರು ಬಾರಿ ಸೋತರೂ ಧೃತಿಗೆಡದೆ ಕಳೆದ ಇಪ್ಪತ್ತು ವರ್ಷಗಳಿಂದ  ತಮ್ಮ ಹೋರಾಟದ ಮೂಲಕವೇ  ಬಿಎಸ್ಪಿಯನ್ನು ಸಂಘಟಿಸಿದ್ದ ಎನ್ ಮಹೇಶ್ ಆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದರು. 

  • Share this:

ಚಾಮರಾಜನಗರ( ಆ.05): ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬ ಮಾತಿದೆ. ಅದರಂತೆ ತಮ್ಮ ಸುಧೀರ್ಘ ಹೋರಾಟದ ಉದ್ದಕ್ಕೂ ಬಿಜೆಪಿ ಸಿದ್ದಾಂತಗಳನ್ನು ವಿರೋಧಿಸಿಕೊಂಡೇ ಬಂದಿದ್ದ ಕೊಳ್ಳೇಗಾಲದ ಬಿಎಸ್ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್  ಇಂದು ಅದೇ ಕಮಲಪಾಳಯಕ್ಕೆ ಸೇರಿದ್ದಾರೆ.


ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ  ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆ ಮೂಲಕ  ಕಳೆದ ಎರಡು ವರ್ಷಗಳಿಂದ ಉಂಟಾಗಿದ್ದ ರಾಜಕೀಯ ಹೊಯ್ದಾಟಕ್ಕೆ ಕೊನೆ ಹಾಡಿದ್ದಾರೆ.




ಮೂರು ಬಾರಿ ಸೋತರೂ ಧೃತಿಗೆಡದೆ ಕಳೆದ ಇಪ್ಪತ್ತು ವರ್ಷಗಳಿಂದ  ತಮ್ಮ ಹೋರಾಟದ ಮೂಲಕವೇ  ಬಿಎಸ್ಪಿಯನ್ನು ಸಂಘಟಿಸಿದ್ದ ಎನ್ ಮಹೇಶ್ ಆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದರು.  ಕೊನೆಗೂ 2018 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಗೆಲವು ಸಾಧಿಸುವ ಮೂಲಕ ವಿಧಾನಸಭೆಯಲ್ಲಿ ಬಿಎಸ್ಪಿ ಖಾತೆ ತೆರೆದಿದ್ದರು.


ಇದನ್ನೂ ಓದಿ:IMA Fraud Case: ಮಾಜಿ ಸಚಿವ ರೋಷನ್ ಬೇಗ್​ ಮನೆ ಮೇಲೆ ED ದಾಳಿ


ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರೂ ಆಗಿದ್ದ ಎನ್ ಮಹೇಶ್,  ಕೆಲ ತಿಂಗಳ ನಂತರ ಬಿಎಸ್ಪಿ ಹೈಕಮಾಂಡ್ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ  ನೀಡಿದ್ದರು.  2019 ರ ಜುಲೈ 23 ರಂದು ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭ ಬಂದಾಗ  ಮಹೇಶ್ ಸದನಕ್ಕೆ ಗೈರು ಹಾಜರಾಗಿದ್ದರು. ಸದನಕ್ಕೆ ಹಾಜರಾಗಿ ಮೈತ್ರಿ ಸರ್ಕಾರದ ಪರ ಮತ ಚಲಾಯಿಸುವಂತೆ ಸ್ವತಃ ಬಿಎಸ್ಪಿ ಅಧಿನಾಯಕಿ ಮಾಯಾವತಿ ಟ್ವೀಟ್ ಮಾಡಿ ಸೂಚಿಸಿದ್ದರು. ಆದರೆ ಅಂದು ತಾವು ಆಶ್ರಮವೊಂದರಲ್ಲಿ ಧ್ಯಾನದಲ್ಲಿದ್ದ ಕಾರಣ ಹಾಗೂ   ನೆಟ್ ವರ್ಕ್ ಸಮಸ್ಯೆಯಿಂದ ಮಾಯಾವತಿ ಅವರ ಸೂಚನೆ ತಮಗೆ ಗೊತ್ತಾಗಲಿಲ್ಲ ಎಂಬ ಕಾರಣವನ್ನು ಮಹೇಶ್ ನೀಡಿದ್ದರು. ಆ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪರೋಕ್ಷವಾಗಿ ಸಹಕಾರ ನೀಡಿದ್ದರು.


ಈ ಹಿನ್ನಲೆಯಲ್ಲಿ ಹಾಗೂ  ಪಕ್ಷದ ಆದೇಶ ಉಲ್ಲಂಘಿಸಿದ ಆರೋಪದ ಮೇರೆಗೆ ಅವರನ್ನು ಬಿಎಸ್ಪಿಯಿಂದ ಉಚ್ಛಾಟಿಸಲಾಗಿತ್ತು. ಅಂದಿನಿಂದಲು ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ ಬಿಜೆಪಿ ಸೇರುವ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ,  ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷದವರೊಡನೆ ಒಡನಾಟ ಹೊಂದಿದ್ದೇನೆ ಎಂದಷ್ಟೇ ಹೇಳಿಕೊಂಡು ಬರುತ್ತಿದ್ದರು.


ಈ ನಡುವೆ ಅವರು ಕಾಂಗ್ರೆಸ್​ನತ್ತವೂ ಕೂಡ ತಮ್ಮ ಚಿತ್ತ ಹರಿಸಿದ್ದರು. ಆದರೆ ಅಲ್ಲಿ ಕೊಳ್ಳೇಗಾಲ ಕ್ಷೇತ್ರಕ್ಕೆ ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಬಾಲರಾಜು  ಅವರ ನಡುವೆಯೇ ಪೈಪೋಟಿ ಇರುವುದರಿಂದ ತಮಗೆ ಅಲ್ಲಿ ಭವಿಷ್ಯವಿಲ್ಲ ಎಂದರಿತ ಮಹೇಶ್ ತಮ್ಮ  ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸೇರುವುದೇ ಸೂಕ್ತ ಎಂದು ಮಾನಸಿಕವಾಗಿ ತೀರ್ಮಾನಕ್ಕೆ ಬಂದಿದ್ದರು.  ಇನ್ನು ಈ ಭಾಗದಲ್ಲಿ ನೆಲೆಕಳೆದುಕೊಂಡಿರುವ ಜೆಡಿಎಸ್ ಸೇರುವುದು ಸಹ ಕಷ್ಟವೇ  ಆಗಿತ್ತು.  ಮತ್ತೆ ಬಿಎಸ್ಪಿಗೆ ಹೋಗಲು  ಸಹ ಯಾವುದೇ ದಾರಿಗಳು ಅವರಿಗೆ ಉಳಿದಿರಲಿಲ್ಲ.


ಇದನ್ನೂ ಓದಿ:Kitchen Tips: ತರಕಾರಿ-ಹಣ್ಣುಗಳನ್ನು ತಂಬಾ ದಿನಗಳ ಕಾಲ ಫ್ರೆಶ್ ಆಗಿ ಇಡಲು ಹೀಗೆ ಮಾಡಿ...!


ಈ ಹಿನ್ನಲೆಯಲ್ಲಿ ಇತ್ತೀಚೆಗೆ ಜಿಲ್ಲೆಯ ಕೆಲವು ಕಡೆ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಅಭಿಪ್ರಾಯವನ್ನೂ ಸಂಗ್ರಹಿಸಿದ್ದರು. ಕೊನೆಗೆ ಎಲ್ಲವನ್ನು ಅಳೆದು ತೂಗಿ ಬಿಜೆಪಿ ಸೇರುವುದೇ ಸೇಫ್ ಎಂಬ ತೀರ್ಮಾನಕ್ಕೆ ಬಂದರು.  ಕೊಳ್ಳೇಗಾಲ ವಿಧಾನಸಭಾ  ಕ್ಷೇತ್ರದಲ್ಲಿ ಮಹೇಶ್ ಬಿಜೆಪಿ ಟಿಕೇಟ್ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ ಇದಕ್ಕೆ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಒಪ್ಪುವುದು ಅಷ್ಟಕಷ್ಟೇ. ಹಾಗಾಗಿ   ಎನ್ ಮಹೇಶ್, ಲೋಕಸಭಾ ಕ್ಷೇತ್ರದ ಮೇಲೂ ಕಣ್ಣಿಟ್ಟು ಬಿಜೆಪಿಗೆ ಸೇರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


ಬೇಷರತ್ತಾಗಿ ಬಿಜೆಪಿ ಸೇರ್ಪಡೆಯಾಗಿರುವುದಾಗಿ ಎನ್ ಮಹೇಶ್ ಹೇಳಿದ್ದಾರೆ. ಆದರೆ  ಅವರ ರಾಜಕೀಯ ಲೆಕ್ಕಾಚಾರವೇ ಬೇರೆಯಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಒಂದು ಛಾನ್ಸ್ ಸಿಗಬಹುದು ಎಂದು ಅವರ ಬೆಂಬಲಿಗರು ನಿರೀಕ್ಷೆಯಲ್ಲಿದ್ದಾರೆ. ಆದರೆ ಬಿಜೆಪಿಯಲ್ಲಿಯೇ ಸಚಿವ ಸ್ಥಾನ ಸಿಗದೆ  ಸಾಕಷ್ಟು ಮಂದಿ ಅಸಮಧಾನಿತರಿದ್ದು ಇದರ ನಡುವೆ ಮಹೇಶ್ ಗೆ ಅಷ್ಟು ಸುಲಭವಾಗಿ ಸಚಿವಗಿರಿ ಸಿಗುವುದಿಲ್ಲ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದಾಗಿದ್ದು ಸಚಿವಗಿರಿ ಸಿಗಬಹುದು ಸಿಗದೆ ಇರಬಹುದು.


ಹಳೇ ಮೈಸೂರು ಭಾಗದಲ್ಲಿ ಸಂಸದ ಶ್ರೀನಿವಾಸಪ್ರಸಾದ್ ಹೊರತುಪಡಿಸಿದರೆ ಬಿಜೆಪಿಯಲ್ಲಿ ಬಲಗೈ ಸಮುದಾಯದ ಪ್ರಬಲ ನಾಯಕರು ಇಲ್ಲ.  ಆ ಸ್ಥಾನವನ್ನು ಮಹೇಶ್ ಅವರಿಂದ ತುಂಬಿ ಪಕ್ಷ ಬಲಪಡಿಸಿಕೊಳ್ಳುವ ಬಿಜೆಪಿಯ ಇರಾದೆಯೂ ಇಲ್ಲಿ ಅಡಗಿದೆ.

Published by:Latha CG
First published: