• Home
  • »
  • News
  • »
  • state
  • »
  • ಬಿಳಿಗಿರಿರಂಗನ ಮೇಲೆ ಈ ಮುಸ್ಲಿಂ ವ್ಯಕ್ತಿಗೆ ಎಲ್ಲಿಲ್ಲದ ಭಕ್ತಿ; ದೇವರ ಮೇಲಿನ ಭಕ್ತಿಗೆ ಜಾತಿಧರ್ಮದ ಹಂಗಿಲ್ಲವೆಂದು ಸಾರಿದ ಮುಜೀಬ್

ಬಿಳಿಗಿರಿರಂಗನ ಮೇಲೆ ಈ ಮುಸ್ಲಿಂ ವ್ಯಕ್ತಿಗೆ ಎಲ್ಲಿಲ್ಲದ ಭಕ್ತಿ; ದೇವರ ಮೇಲಿನ ಭಕ್ತಿಗೆ ಜಾತಿಧರ್ಮದ ಹಂಗಿಲ್ಲವೆಂದು ಸಾರಿದ ಮುಜೀಬ್

ಮುಸ್ಲಿಂ ವ್ಯಕ್ತಿ ಮುಜೀಬ್

ಮುಸ್ಲಿಂ ವ್ಯಕ್ತಿ ಮುಜೀಬ್

ದೇಗುಲದಲ್ಲಿ ನಡೆಯುತ್ತಿರುವ ಸಂಪ್ರೋಕ್ಷಣಾ ಕಾರ್ಯಕ್ರಮಕ್ಕೆ ಮುಜೀಬ್ ಅವರಿಗೆ ದೇವಾಲಯದ ವತಿಯಿಂದ ಆಹ್ವಾನ ನೀಡಲಾಗಿತ್ತು. ಈ ಆಹ್ವಾನದ ಮೇರೆಗೆ ಅವರು ಬೆಟ್ಟಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಬಿಳಿಗಿರಿ ರಂಗನಾಥಸ್ವಾಮಿಯನ್ನು ಆರಾಧಿಸಿದ್ದಾರೆ.

  • Share this:

ಚಾಮರಾಜನಗರ ( ಏ.03): ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಅನ್ನೋದು ಹಳೇ ಗಾದೆ. ಆದರೆ ಗೋಕುಲಾಷ್ಠಮಿಗೆ ಅಲ್ಲದಿದ್ದರೂ ಬಿಳಿಗಿರಿ ರಂಗನಾಥ ಸ್ವಾಮಿಗೆ ಸಂಬಂಧ ಇದೆ ಅಂತ ಸಾರಿ ಹೇಳುತ್ತಿದೆ ಇಲ್ಲೊಂದು ಘಟನೆ. ಹೌದು ಚಾಮರಾಜನಗರ ಜಿಲ್ಲೆ  ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಸಂಪ್ರೋಕ್ಷಣೆ ಕಾರ್ಯಕ್ರಮದಲ್ಲಿ  ಮುಸ್ಲಿಂ ವ್ಯಕ್ತಿಯೊಬ್ಬರು ಭಾಗಿಯಾಗುವ ಮೂಲಕ ದೇವರ ಮೇಲಿನ ಭಕ್ತಿಗೆ ಹಾಗೂ  ಸೇವೆಗೆ ಜಾತಿ- ಧರ್ಮದ ಹಂಗಿಲ್ಲ ಎಂಬುದನ್ನು ಸಾರಿದ್ದಾರೆ. ಇದಕ್ಕೆ ಅವರ ಜೀವನದಲ್ಲಿ ನಡೆದಿದ್ದ ಮರೆಯಲಾರದ ಘಟನೆಯೊಂದು ಕಾರಣವಾಗಿದೆ.


1986 ರಲ್ಲಿ  ಯಳಂದೂರು ತಾಲೋಕು ತಹಶಿಲ್ದಾರ್ ಆಗಿದ್ದ ಮುಜೀಬ್ ಅವರನ್ನು ಭೇಟಿ ಮಾಡಿದ  ದೇಗುಲದ ಅರ್ಚಕರು ಬಿಳಿಗಿರಿರಂಗನ ಮೂರ್ತಿ ಅಲುಗಾಡುತ್ತಿದೆ ಎಂದು ತಿಳಿಸುತ್ತಾರೆ‌. ಕೂಡಲೇ ಈ ಬಗ್ಗೆ ಕ್ರಮಕೈಗೊಂಡ ಮುಜೀಬ್ ಅವರು  ಮುಜರಾಯಿ ಇಲಾಖೆಗೆ ಪತ್ರ ಬರೆದು ಬಿಳಿಗಿರಿರಂಗನಾಥಸ್ವಾಮಿಯ  ನೂತನ ಮೂರ್ತಿ ಮಾಡಿಸಲು ಮುಂದಾಗುತ್ತಾರೆ. ಅಲ್ಲದೆ ಹೊಸ ಮೂರ್ತಿಯನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ  ಪುನರ್ ಪ್ರತಿಷ್ಠಾಪಿಸಲು  ಕ್ರಮ ವಹಿಸುತ್ತಾರೆ. ತಾಲೂಕು  ಆಡಳಿತದ ಮುಖ್ಯಸ್ಥರಾಗಿರುವುದರಿಂದ ದೇವರ ಪುನರ್ ಪ್ರತಿಷ್ಟಾಪನೆ ಪೂಜೆಗೆ ನೀವೇ ಕೂರಬೇಕೆಂದು ಅರ್ಚಕರು, ಆಗಮಿಕರು ತಿಳಿಸಿ ಹೋಗುತ್ತಾರೆ.


Viral: ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸಂಚಾರಿ ಪೊಲೀಸರಿಗೆ ಡಿಕ್ಕಿ ಹೊಡೆದ ಭೂಪ..!


ಈ ಸಂದರ್ಭದಲ್ಲಿ ಹುಟ್ಟಿನಿಂದ ಮುಸ್ಲಿಂ ಆಗಿ ಹಿಂದೂ ದೇವರ ಪೂಜೆಯ ನೇತೃತ್ವ ವಹಿಸಬಹುದೇ, ಪೂಜೆಗೆ ಕುಳಿತುಕೊಳ್ಳಬಹುದೇ ಎಂಬ ಜಿಜ್ಞಾಸೆ ಮುಜೀಬ್ ಅವರನ್ನು ಕಾಡುತ್ತದೆ. ಇದೇ ಯೋಚನೆಯಲ್ಲಿರುವಾಗ ತಮ್ಮ ಮನೆ ಬಾಗಿಲ ಮುಂದೆ ಇಬ್ಬರು ಬ್ರಾಹ್ಮಣ ವ್ಯಕ್ತಿಗಳು ನಿಂತಂತೆ ಹಾಗೂ ಏಕಾಏಕಿ ಅವರಿಬ್ಬರೂ ಒಂದು ದೇಹವಾಗಿ ಮಾರ್ಪಾಡಾದಂತೆ ಭಾಸವಾಗುತ್ತದೆ. ’ನಿನ್ನ ಸೇವೆಗಾಗಿ 1000 ವರ್ಷದಿಂದ ಕಾಯುತ್ತಿದ್ದೇನೆ, ಕಾರ್ಯ ನಿರ್ವಹಿಸು’ ಎಂದು ಹೇಳಿ ಆ ದೇಹ  ಬೃಹಾದಾಕಾರದ ಆಕೃತಿಯಾಗಿ ಬೆಳೆದು ಅಂತರ್ಧಾನವಾಗಿತ್ತು ಎಂದು ಅಂದಿನ ಘಟನೆಯನ್ನು ಮುಜೀಬ್ ವಿವರಿಸಿದರು.


ಈ ಘಟನೆಯ ಬಳಿಕ ಮುಜೀಬ್, ಬಿಳಿಗಿರಿರಂಗನ ನಾಥಸ್ವಾಮಿ ಮೂರ್ತಿ ಪ್ರತಿಷ್ಟಾಪನಾ ಪೂಜೆಯ ನೇತೃತ್ವ ವಹಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಅಂದಿನಿಂದ ಅವರು ಬಿಳಿಗಿರಿರಂಗನ ಪರಮ ಭಕ್ತರೂ ಆಗಿದ್ದಾರೆ


ಸಂಪ್ರೋಕ್ಷಣೆ ಕಾರ್ಯಕ್ರಮದಲ್ಲಿ ಭಾಗಿ


ಶಿಥಿಲಗೊಂಡಿದ್ದ ಬಿಳಿಗಿರಿರಂಗನನಾಥ ಸ್ವಾಮಿಯ ದೇವಾಲಯವನ್ನು ಇದೀಗ 5 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ದೇಗುಲದಲ್ಲಿ ನಡೆಯುತ್ತಿರುವ ಸಂಪ್ರೋಕ್ಷಣಾ ಕಾರ್ಯಕ್ರಮಕ್ಕೆ ಮುಜೀಬ್ ಅವರಿಗೆ ದೇವಾಲಯದ ವತಿಯಿಂದ ಆಹ್ವಾನ ನೀಡಲಾಗಿತ್ತು. ಈ ಆಹ್ವಾನದ ಮೇರೆಗೆ ಅವರು ಬೆಟ್ಟಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಬಿಳಿಗಿರಿ ರಂಗನಾಥಸ್ವಾಮಿಯನ್ನು ಆರಾಧಿಸಿದ್ದಾರೆ.


ಬೆಂಗಳೂರು ಮೂಲದ ಮುಜೀಬ್  ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. 'ಹೃದಯ ತೆರೆದಿಟ್ಟುಕೊಂಡರೆ ಎಲ್ಲ ಧರ್ಮದ ದೇವರುಗಳು ಭಗವಂತನೇ, ಇಂದಿಗೂ 1986 ರಲ್ಲಿ ನಡೆದ ಘಟನೆ ನೆನೆಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಯಳಂದೂರು ತಾಲೂಕು ಕಂಡರೇ ನನಗೆ ಪ್ರೀತಿ ಹೆಚ್ಚು, ಅದೇ ರೀತಿ ಇಲ್ಲಿ ಜನರು ಆದರ ತೋರಿದ್ದಾರೆ, ಭಗವಂತನ ಆಶೀರ್ವಾದವೂ ನನ್ನ ಮೇಲಿದೆ' ಎನ್ನುತ್ತಾರೆ ಮುಜೀಬ್.

Published by:Latha CG
First published: