ಚಾಮರಾಜನಗರ (ಅ. 29): ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಚಾಮರಾಜನಗರದ ಗಾಳೀಪುರ ಬಡಾವಣೆಯ (ಹಾಲಿ ವಾಸ ಚಾಮರಾಜನಗರ ತಾಲೋಕು ಸರಗೂರು) ಶಮೀವುಲ್ಲಾ ಅಲಿಯಾಸ್ ಡಾಮ್ಟೆ ಅಲಿಯಾಸ್ ಸಲ್ಮಾನ್ ಅಲಿಯಾಸ್ ಪ್ರೀತಂ ಎಂಬ ಆರೋಪಿಗೆ ಐಪಿಸಿ ಕಲಂ 366ರ ಅನ್ವಯ 5 ವರ್ಷ ಸಾದಾ ಸಜೆ ಮತ್ತು 50 ಸಾವಿರ ರೂ. ದಂಡ, ಐಪಿಸಿ ಕಲಂ 376(ಎನ್) ಅನ್ವಯ 10 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ ಹಾಗೂ ಪೋಕ್ಸೋ ಕಾಯ್ದೆ ಕಲಂ 4 ರ ಅನ್ವಯ 7 ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ, ಪೋಕ್ಸೋ ಕಾಯ್ದೆ ಕಲಂ 6 ರ ಅನ್ವಯ 10 ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ಹಾಗೂ1 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್ ಪುರ ಅವರು ತೀರ್ಪು ನೀಡಿದ್ದಾರೆ.
ಆರೋಪಿ ಶಮೀವುಲ್ಲಾ ಸ್ಟವ್ ಮತ್ತು ಮಿಕ್ಸಿ ರಿಪೇರಿ ಕೆಲಸ ಮಾಡುತ್ತಿದ್ದು, ಈತ ಚಾಮರಾಜನಗರ ತಾಲೂಕಿನ ಕೋಟಂಬಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ಪ್ರೀತಿಸುವುದಾಗಿ ಹಾಗೂ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ 2018ರ ಜುಲೈ 24 ರಂದು ತಮಿಳುನಾಡಿನ ತಮಿಳುಪುರ ಎಂಬ ಗ್ರಾಮಕ್ಕೆ ತನ್ನ ಮೋಟಾರ್ ಬೈಕ್ ನಲ್ಲಿ ಕರೆದೊಯ್ದಿದ್ದ.
ಅಂದು ರಾತ್ರಿ ಬಾಲಕಿಯ ಇಷ್ಟಕ್ಕೆ ವಿರುದ್ದವಾಗಿ ದೈಹಿಕ ಸಂಪರ್ಕ ಮಾಡಿದ್ದ. ನಂತರ ತಮಿಳುಪುರದಿಂದ ಹೊರಟು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಖಾಸಗಿ ಲಾಡ್ಜ್ ವೊಂದರಲ್ಲಿ ಬಲವಂತವಾಗಿ ಇರಿಸಿ ಎರಡು ದಿನಗಳ ಕಾಲ ಬಾಲಕಿಯ ಇಷ್ಟಕ್ಕೆ ವಿರುದ್ದವಾಗಿ ಅತ್ಯಾಚಾರ ಮಾಡಿದ್ದ. ಗ್ರಾಮಕ್ಕೆ ವಾಪಸ್ ಬಂದು ಬಾಲಕಿ ನಡೆದ ವಿಷಯ ತಿಳಿಸಿದ್ದಳು. ಈ ಬಗ್ಗೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಅಂದಿನ ಡಿವೈಎಸ್ಪಿ ಅವರು ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಟಿ.ಹೆಚ್. ಲೋಲಾಕ್ಷಿ ವಾದ ಮಂಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ