ಚಾಮರಾಜನಗರ (ಮಾ.11): ಜಿಲ್ಲೆಯ ಬಿ.ಆರ್.ಟಿ. (ಬಿಳಿಗಿರಿರಂಗನಾಥಸ್ವಾಮಿ ದೇವಾಲಯ) ಹುಲಿಸಂರಕ್ಷಿತ ಪ್ರದೇಶ, ಪೂರ್ವ ಹಾಗು ಪಶ್ಚಿಮಘಟ್ಟಗಳನ್ನು ಬೆಸೆಯುವ ಜೀವ ವೈವಿಧ್ಯತೆಯ ತಾಣ. ಅದ್ಬುತವಾದ ಬೆಟ್ಟ ಶ್ರೇಣಿಯನ್ನು ಒಳಗೊಂಡಿರುವ ಈ ಅರಣ್ಯ ಹುಲಿ, ಆನೆ, ಚಿರತೆ, ಕಾಡೆಮ್ಮೆ, ಜಿಂಕೆ, ಸಾಂಬಾರ್, ತರಕರಡಿ, 280ಕ್ಕು ಹೆಚ್ಚು ಪ್ರಭೇಧದ ಪಕ್ಷಿಗಳು ಸೇರಿದಂತೆ ಅಪರೂಪದ ಪ್ರಾಣಿಪಕ್ಷಿಗಳ ಆವಾಸ ಸ್ಥಾನವಾಗಿದೆ.
ನಿತ್ಯಹರಿದ್ವರ್ಣ ಹಾಗೂ ಅಪರೂಪದ ಶೋಲಾ ಕಾಡು ಸೇರಿದಂತೆ ಎಲ್ಲಾ ಬಗೆಯ ಕಾಡುಗಳನ್ನು ಹೊಂದಿರುವ ಬಿ.ಆರ್.ಟಿ.ಯಲ್ಲಿ ಸುಂದರ ಕಣಿವೆಗಳು, ಎರಡು ಸಾವಿರ ವರ್ಷಗಳಿಗು ಹೆಚ್ಚು ಹಳೆಯದಾದ ದೊಡ್ಡಸಂಪಿಗೆ ಮರ, ಅತಿಎತ್ತರ ಪ್ರದೇಶದಲ್ಲಿರುವ ಹೊನ್ನಮೇಟಿ ಕಲ್ಲು, ವಿಶಾಲವಾದ ಹುಲ್ಲುಗಾವಲನ್ನು ಒಳಗೊಂಡ ಜೋಡಿಗೆರೆ, ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ, ಕೆ.ಗುಡಿ ಸಫಾರಿ ವಲಯ ಹೀಗೆ ಹತ್ತು ಹಲವು ಮನಸೂರೆಗೊಳ್ಳುವ ಪ್ರದೇಶಗಳು ಇವೆ.
ಬಿ.ಆರ್.ಟಿ. ಹುಲಿಸಂರಕ್ಷಿತ ಪ್ರದೇಶವನ್ನು ಕೋರ್ ಜೋನ್, ಬಫರ್ ಜೋನ್ ಎಂದು ವಿಂಗಡಿಸಲಾಗಿದ್ದು ಇಲ್ಲಿನ ಕೆ.ಗುಡಿಯಲ್ಲಿ ಮಾತ್ರ ಪ್ರವಾಸೋದ್ಯಮ ಚಟುವಟಿಕೆಗಳು ನಡೆಯುತ್ತಿವೆ. ಕೆ.ಗುಡಿ ಸಫಾರಿ ವಲಯ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹೊರತುಪಡಿಸಿ ಬಿ.ಆರ್.ಟಿ.ಯ ಬಹುತೇಕ ಪ್ರದೇಶಗಳಿಗೆ ಪ್ರವಾಸಿಗರು ಹೋಗಲು ನಿರ್ಬಂಧವಿದೆ.
ಈ ಹಿನ್ನಲೆಯಲ್ಲಿ ಇಲ್ಲಿನ ವೈವಿಧ್ಯಮಯ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸಬೇಕು, ಈ ಅರಣ್ಯ ಪ್ರದೇಶದ ಅಪರೂಪದ ಭೂದೃಶ್ಯ ಹಾಗೂ ಸುಂದರತಾಣಗಳನ್ನು ಕಣ್ತುಂಬಿಕೊಳ್ಳುವುದರಿಂದ ಪ್ರವಾಸಿಗರು ವಂಚಿತರಾಗಬಾರದು, ಆ ಮೂಲಕ ಪರಿಸರ ಪ್ರವಾಸೋದ್ಯಮ ಉತ್ತೇಜಿಸಬೇಕು ಎಂಬ ದೃಷ್ಟಿಯಿಂದ ಅರಣ್ಯ ಇಲಾಖೆ ವರ್ಚುವಲ್ ರಿಯಾಲಿಟಿ ವಿಡಿಯೋವೊಂದನ್ನು ಸಿದ್ದಪಡಿಸಿದೆ.
ವಿಶ್ವದ ಅತ್ಯಂತ ದುಬಾರಿ ಔಷಧಿಗೆ ಅನುಮೋದನೆ ನೀಡಿದ ಯುಕೆ; ಪ್ರತಿ ಡೋಸ್‌ಗೆ 18 ಕೋಟಿ ರೂ. ವೆಚ್ಚ..!
ವಿಶಿಷ್ಟ ಕ್ಯಾಮೆರಾ ಬಳಿಸಿ 360 ಡಿಗ್ರಿ ಕೋನದಲ್ಲಿ ಅರಣ್ಯ ಪ್ರದೇಶದ ಸುಂದರ ತಾಣ ಹಾಗು ಪ್ರವಾಸಿಗರು ಭೇಟಿ ನೀಡಲಾಗದ ಅಪರೂಪದ ಭೂದೃಶ್ಯಗಳನ್ನು ಸೆರೆಹಿಡಿಯಲಾಗಿದೆ. 10 ನಿಮಿಷಗಳ ಈ ವಿಡಿಯೋವನ್ನು ವರ್ಚುವಲ್ ರಿಯಾಲಿಟಿ ಎಕ್ವಿಪ್ಮೆಂಟ್ ( ವಿ.ಆರ್. ಹೆಡ್ ಸೆಟ್) ನ್ನು ಕಣ್ಣಿಗೆ ಹಾಕಿಕೊಂಡು ವೀಕ್ಷಿಸುವ ಮೂಲಕ ಸ್ವತಃ ಸ್ಥಳದಲ್ಲೇ ನಿಂತು ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುವ ಹಾಗು ಅರಣ್ಯವನ್ನು ಸುತ್ತಾಡಿದ ಅನುಭವ ಪಡೆಯಬಹುದಾಗಿದೆ. ಈ ವರ್ಚುವಲ್ ವಿಡಿಯೋ ವೀಕ್ಷಿಸುವ ಉಪಕರಣವನ್ನು ಕೆ.ಗುಡಿ ಸಫಾರಿ ಕೇಂದ್ರದಲ್ಲಿ ಇಡಲಾಗಿದೆ ವಿಡಿಯೋ ವೀಕ್ಷಣೆಗೆ 50 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅರಣ್ಯದ ಕೋರ್ ಜೋನ್ ಹಾಗು ಬಫರ್ ಜೋನ್ ನಲ್ಲಿರುವ ಸುಂದರ ತಾಣಗಳಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ಪ್ರವಾಸಿಗರಿಂದ ಸಾಕಷ್ಟು ಬೇಡಿಕೆ ಬರುತ್ತಿತ್ತು. ಆದರೆ ಕಾನೂನು ಪ್ರಕಾರ ಸಫಾರಿ ವಲಯ ಹೊರತುಪಡಿಸಿ ಉಳಿದ ಸ್ಥಳಗಳಿಗೆ ಪ್ರವಾಸಿಗರಿಗೆ ಅವಕಾಶ ನೀಡಲು ಸಾಧ್ಯವಿಲ್ಲ, ಈ ಹಿನ್ನಲೆಯಲ್ಲಿ 360 ಡಿಗ್ರಿ ಕೋನದ ಕ್ಯಾಮೆರಾ ಬಳಸಿ ಅರಣ್ಯ ಪ್ರದೇಶದ ಅಪರೂಪದ ದೃಶ್ಯಗಳನ್ನು ಸೆರೆಹಿಡಿದು ವರ್ಚುವಲ್ ರಿಯಾಲಿಟಿ ತಂತ್ರಜ್ಷಾನದ ಮೂಲಕ ಪ್ರವಾಸಿಗರಿಗೆ ಯಾಕೆ ತೋರಿಸಬಾರದು ಎಂದು ಚಿಂತನೆ ನಡೆಸಿ ಈ ವಿಡಿಯೋ ತಯಾರಿಸಲಾಗಿದೆ ಎಂದು ಬಿ.ಆರ್.ಟಿ. ಉಪ ಅರಣ್ಯಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ