ಚಾಮರಾಜನಗರದಲ್ಲಿ ಕೊರೋನಾ ವಾರಿಯರ್ ಕುಟುಂಬಕ್ಕೆ ಇನ್ನೂ ಸಿಗದ ಪರಿಹಾರ

ಕೊರೋನಾ ವಾರಿಯರ್ ಕುಟುಂಬ

ಕೊರೋನಾ ವಾರಿಯರ್ ಕುಟುಂಬ

 ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 28 ಅಂಗನವಾಡಿ ಕಾರ್ಯಕರ್ತೆಯರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಕೇವಲ 3 ಮಂದಿಗೆ ಮಾತ್ರ  ಪರಿಹಾರ ಸಿಕ್ಕಿದೆ

  • Share this:

ಚಾಮರಾಜನಗರ (ಏ.20) ಕೋವಿಡ್ -19 ಮೊದಲನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟ  ಬಹುತೇಕ ಕೊರೊನಾ ವಾರಿಯರ್ಸ್  ಕುಟುಂಬಗಳಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ವಿಮಾ ಪರಿಹಾರ ಇನ್ನೂ  ಸಿಕ್ಕಿಲ್ಲ. ಇದೇ ರೀತಿ  ಕೊರೋನಾ ವಾರಿಯರ್  ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಚಾಮರಾಜನಗರ ತಾಲೂಕು ಗೂಳೀಪುರದ ಅಂಗನವಾಡಿ ಕಾರ್ಯಕರ್ತೆ  ರತ್ನಮ್ಮ ಎಂಬುವರು 2020 ರ ನವೆಂಬರ್ ನಲ್ಲಿ ಕೋವಿಡ್-19 ತುತ್ತಾಗಿ ಸಾವನ್ನಪ್ಪಿದ್ದರೂ ಅವರ  ಕುಟುಂಬಕ್ಕೆ  ಇದುವರೆಗೆ ಯಾವುದೇ ರೀತಿಯ ಪರಿಹಾರ ದೊರಕದೆ  ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.  ಕಾಗಲವಾಡಿ ಗ್ರಾಮದ ನಂಜುಂಡಸ್ವಾಮಿ ವಿಕಲಚೇತನರಾಗಿದ್ದು ಅವರ ಪತ್ನಿ ಬಿ.ರತ್ನಮ್ಮ ಗೂಳೀಪುರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಇದೇ ಸ್ಥಳದಲ್ಲೇ ಅವರನ್ನು ಕೋರನಾ ಸಂಬಂಧಿತ ಕೆಲಸಗಳಿಗು  ನಿಯೋಜಿಸಲಾಗಿತ್ತು. ಆದರೆ ಅವರಿಗೂ ಸಹ ಕೊರೋನಾ ಸೋಂಕು ತಗುಲಿ ನವೆಂಬರ್ ನಲ್ಲಿ ಮೃತಪಟ್ಟಿದ್ದರು


ರತ್ನಮ್ಮ, ವಿಕಲಚೇತನರಾಗಿರುವ ತಮ್ಮ ಪತಿಗೆ ನಂಜುಂಡಸ್ವಾಮಿಗೆ ಆಸರೆಯಾಗಿದ್ದರು. ಪತ್ನಿಯ ಸಾವಿನಿಂದ ದಿಕ್ಕುತೋಚದಂತಾದ ನಂಜುಂಡಸ್ವಾಮಿ ಎರಡು ಬಾರಿ ಡಿಪ್ರೆಷನ್ ಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಬೆನ್ನ ಮೂಳೆ ಸಮಸ್ಯೆ ಹಾಗೂ ಸೋಡಿಯಂ ಕೊರತೆಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ತೀವ್ರ ಅನಾರೋಗ್ಯಕ್ಕೀಡಾಗಿರುವ ಅವರು ಸರ್ಕಾರ ಕೊರೋನಾ ವಾರಿಯರ್ಸ್ ಮೃತಪಟ್ಟರೆ ವಿಮಾ ಪರಿಹಾರ ನೀಡುವುದಾಗಿ ಘೋಷಿಸಿದ್ದ ಹಿನ್ನಲೆಯಲ್ಲಿ  ಮಹಿಳಾ ಮತ್ತು ಮಕ್ಕಳ  ಅಭಿವದ್ಧಿ ಇಲಾಖೆಗೆ  ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು.


ರತ್ನಮ್ಮ ಕೊರೋನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಗ್ಗೆ ಚಾಮರಾಜನಗರ ತಾಲೂಕು ತಹಸೀಲ್ದಾರ್ ಅವರು ದೃಢೀಕರಣ ನೀಡಬೇಕು. ಇದಕ್ಕಾಗಿ ವಿಕಲಚೇತನ ನಂಜುಂಡಸ್ವಾಮಿ ಕಚೇರಿಯಿಂದ ಕಚೇರಿಗೆ ಅಲೆದು ಅಲೆದು ಹೈರಾಣಾಗಿದ್ದಾರೆ.  ಅರ್ಜಿ ಸಲ್ಲಿಸಿದ ನಾಲ್ಕು ತಿಂಗಳಾದರೂ ಅವರಿಗೆ ವಿಮೆಪರಿಹಾರ ದೊರಕದೆ ಭ್ರಮ ನಿರಸನಗೊಂಡಿದ್ದಾರೆ.


ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾಯ್ತು.  ಕೇಳಿದರೆ ಆ ಕಚೇರಿ ಈ ಕಚೇರಿ ಎಂದು ಅಲೆದಾಡಿಸುತ್ತಿದ್ದಾರೆ. ಮೊದಲೇ ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದು ಅಲೆದು ಅಲೆದು ಸಾಕಾಗಿ ಹೋಗಿದೆ ಎಂದು ನಂಜುಂಡಸ್ವಾಮಿ ಬೇಸರ ವ್ಯಕ್ತಪಡಿಸಿದರು


ನಮ್ಮ ಜೀವ ಒತ್ತೆ ಇಟ್ಟು ಕೆಲಸ ಮಾಡಿದ್ದೇವೆ,  ಕೊರೋನಾ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿರುವ ಕಾರ್ಯಕರ್ತೆಯ ಕುಟುಂಬಕ್ಕೆ ಇನ್ನೂ ಪರಿಹಾರ ನೀಡದಿರುವುದರಿಂದ ಅಭದ್ರತೆ ಕಾಡುತ್ತಿದೆ. ಕೋವಿಡ್ ನಿಂದ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರಿಗೆ 30 ಲಕ್ಷ ರೂಪಾಯಿ ವಿಮಾ ಪರಿಹಾರ ನೀಡುವುದಾಗಿ ಸರ್ಕಾರ ಆದೇಶವನ್ನೇ ಹೊರಡಿಸಿದೆ. ಆದರೆ ಈ  ಆದೇಶ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಚಾಮರಾಜನಗರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿರ ಸಂಘದ ಅಧ್ಯಕ್ಷೆ ಸುಜಾತಾ ತಿಳಿಸಿದ್ದಾರೆ. ಇದೇ ರೀತಿ  ಆದರೆ ನಾವು ಯಾವ ಭರವಸೆ ಇಟ್ಟುಕೊಂಡು ಕೆಲಸ ಮಾಡಬೇಕು ನಮ್ಮ ಕುಟುಂಬಗಳ ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ


ಇದನ್ನು ಓದಿ: ರಾಹುಲ್​ ಗಾಂಧಿಗೆ ಕೊರೋನಾ ಸೋಂಕು ದೃಢ


ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 28 ಅಂಗನವಾಡಿ ಕಾರ್ಯಕರ್ತೆಯರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಕೇವಲ 3 ಮಂದಿಗೆ ಮಾತ್ರ  ಪರಿಹಾರ ಸಿಕ್ಕಿದೆ. ಉಳಿದವರ ಕುಟುಂಬಗಳು ಸಂಕಷ್ಟದಲ್ಲಿವೆ ಕೂಡಲೇ ಸರ್ಕಾರ ತುರ್ತು ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ


ಈ ಬಗ್ಗೆ ನ್ಯೂಸ್ 18 ಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜು,  ಮೃತ ರತ್ನಮ್ಮ ಅವರ ಕುಟುಂಬಕ್ಕೆ ನೀಡಬೇಕಾದ ಪರಿಹಾರ ಕಡತ ತಯಾರಾಗಿದ್ದು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತಿದ್ದೇವೆ, ಮೂರ್ನಾಲ್ಕು ದಿನದಲ್ಲಿ ಪರಿಹಾರ ಮಂಜೂರಾಗಲಿದೆ  ಎಂದು ತಿಳಿಸಿದ್ದಾರೆ.


 (ವರದಿ: ಎಸ್.ಎಂ.ನಂದೀಶ್)

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು