ಚಾಮರಾಜನಗರ (ಡಿ. 17): ಪಕ್ಷಿಗಳ ಸಂತತಿ ಸಂರಕ್ಷಣೆ, ಅಧ್ಯಯನ ಸೇರಿದಂತೆ ಪಕ್ಷಿ ವೀಕ್ಷಣೆಯನ್ನು ಉತ್ತೇಜಿಸುವ ಮತ್ತು ಹುಲಿ, ಆನೆ ಕೇಂದ್ರಿತ ಪ್ರವಾಸೋದ್ಯಮದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಳೆದ 6 ವರ್ಷಗಳಿಂದ ಹಕ್ಕಿ ಹಬ್ಬ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ 7ನೇ ಹಕ್ಕಿ ಹಬ್ಬವನ್ನು ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ. ಹುಲಿರಕ್ಷಿತಾರಣ್ಯದಲ್ಲಿ 2021 ರ ಜನವರಿ 5 ರಿಂದ 7 ರವರೆಗೆ ಮೂರು ದಿನಗಳ ಕಾಲ ಹಕ್ಕಿ ಹಬ್ಬ ಆಯೋಜಿಸಲಾಗಿದೆ. ಈ ಹಕ್ಕಿ ಹಬ್ಬದಲ್ಲಿ ಸಂವಾದ, ಉಪನ್ಯಾಸ, ಹಕ್ಕಿಗಳ ವೀಕ್ಷಣೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ದೇಶದ ವಿವಿಧೆಡೆಯಿಂದ ಹಕ್ಕಿ ವೀಕ್ಷಕರು, ಆಧ್ಯಯನಕಾರರು, ಸಂಶೋಧಕರು, ಪಕ್ಷಿಗಳ ಛಾಯಾಗ್ರಾಹಕರು ಭಾಗವಹಿಸಲಿದ್ದಾರೆ.
ಈಗಾಗಲೇ ರಂಗನತಿಟ್ಟು, ದಾಂಡೇಲಿ ,ಬಳ್ಳಾರಿ, ಮಂಗಳೂರು, ಚಿಕ್ಕಬಳ್ಳಾಪುರ ಮತ್ತು ಕಾರವಾರದಲ್ಲಿ ಆಯೋಜಿಸಲಾಗಿದ್ದ ಹಕ್ಕಿ ಹಬ್ಬ ಯಶಸ್ವಿಯಾಗಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಬೆಸೆಯುವ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದಲ್ಲಿ ಮೊದಲ ಬಾರಿಗೆ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ. ಹಕ್ಕಿ ಹಬ್ಬದಲ್ಲಿ ಅಪರೂಪದ ಹಕ್ಕಿಗಳ ವೀಕ್ಷಣೆ ಹಾಗೂ ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಅರಣ್ಯ ಇಲಾಖೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಸಹಯೋಗಲ್ಲಿ ಹಕ್ಕಿಗಳ ಹಬ್ಬ ನಡೆಯಲಿದೆ. ಹಕ್ಕಿಗಳ ಕುರಿತು ಆಸಕ್ತರಿಗೆ ಹಾಗೂ ಅಧ್ಯಯನಶೀಲರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದೊಂದಿಗೆ ಬಿಆರ್‌ಟಿ ಹುಲಿರಕ್ಷಿತಾರಣ್ಯದ 7 ಮಾರ್ಗಗಳಲ್ಲಿ ಸಂಚರಿಸಿ ಹಕ್ಕಿ ವೀಕ್ಷಿಸಲು ಸಹ ವ್ಯವಸ್ಥೆ ಕಲ್ಪಿಸಲಾಗುವುದು.
ನಕ್ಸಲ್ ಬಾಧಿತ ಗ್ರಾಮದಲ್ಲಿ ಮಾದರಿ ಗ್ರಾಮಸ್ಥರು; ಹತ್ತನೇ ತರಗತಿ ಪಾಸ್ ಆದವರೇ ಅಭ್ಯರ್ಥಿಗಳು
ವಿವಿಧೆಡೆಯಿಂದ ಹಕ್ಕಿಗಳ ಬಗ್ಗೆ ಆಸಕ್ತಿ ಉಳ್ಳವರು ಈ ಹಕ್ಕಿ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಸ್ಥಳೀಯರಲ್ಲೂ ಪರಿಸರ-ಹಕ್ಕಿಗಳ ಕುರಿತು ಜಾಗೃತಿ ಮೂಡಿಸುವುದು ಹಕ್ಕಿ ಹಬ್ಬದ ಉದ್ದೇಶವಾಗಿದೆ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.
ಪಕ್ಷಿಗಳು ಸೋಲಿಗರ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಕಾಡಿನಲ್ಲಿ ವಾಸಿಸುವ ನಾವು ಕಾಡಿನಲ್ಲಿ ಸಂಚರಿಸಬೇಕಾದರೆ ಕ್ರೂರ ಮೃಗಗಳ ಇರುವಿಕೆ ಬಗ್ಗೆ ಪಕ್ಷಿಗಳು ನಮಗೆ ಅಲರಾಂ ಕಾಲ್ ( ಮುನ್ಸೂಚನೆ ) ನೀಡುತ್ತವೆ. ಈ ಮುನ್ಸೂಚನೆಯನ್ನು ಅನುಸರಿಸಿ ನಾವು ಮುಂದುವರಿಯುತ್ತೇವೆ. ಶುಭಶಕುನ ಹಾಗೂ ಅಪಶಕುನದ ಬಗ್ಗೆ ಮುನ್ಸೂಚನೆ ನೀಡುವ ಪಕ್ಷಿಗಳನ್ನು ದೇವರೆಂದೆ ಭಾವಿಸುತ್ತೇವೆ. ಹಾಡುಕೆ ಎಂಬ ನಮ್ಮ ಜನಪದ ಹಾಡಿನಲ್ಲಿ ಪಕ್ಷಿಗಳ ವರ್ಣನೆ ಮಾಡುತ್ತೇವೆ. ಅವುಗಳನ್ನು ಆರಾಧಿಸುತ್ತೇವೆ ಎಂದು ಸೋಲಿಗರ ಮುಖಂಡರೂ ಆದ ಸಂಶೋಧಕ ಡಾ.ಮಾದೇಗೌಡ ನ್ಯೂಸ್ 18 ಗೆ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ