Karnataka Governor Thaawarchand Gehlot: ಥಾವರ್​ಚಂದ್ ಗಹಲೋತ್ ಕರ್ನಾಟಕದ ನೂತನ ರಾಜ್ಯಪಾಲ; ವಜುಭಾಯ್ ವಾಲ ದಾಖಲೆ ಅವಧಿ ಅಂತ್ಯ

Karnataka Governor Thaawarchand Gehlot: ಮಧ್ಯಪ್ರದೇಶದ ದಲಿತ ಮುಖಂಡ ಹಾಗೂ ಕೇಂದ್ರ ಸಚಿವರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ವಜುಭಾಯ್ ವಾಲಾ ಅವರ ಸ್ಥಾನ ತುಂಬುತ್ತಿದ್ದಾರೆ. ಗೆಹ್ಲೋತ್ ಸೇರಿದಂತೆ ಇಂದು ಎಂಟು ನೂತನ ರಾಜ್ಯಪಾಲರ ನೇಮಕವಾಗಿದೆ.

ಥಾವರ್ ಚಂದ್ ಗೆಹ್ಲೋಟ್ (ವಿಕಿ ಚಿತ್ರ)

ಥಾವರ್ ಚಂದ್ ಗೆಹ್ಲೋಟ್ (ವಿಕಿ ಚಿತ್ರ)

 • Share this:
  ನವದೆಹಲಿ(ಜುಲೈ 06): ರಾಜ್ಯಸಭೆ ಅಧ್ಯಕ್ಷ ಹಾಗೂ ಕೇಂದ್ರ ಸಚಿವರಾಗಿದ್ದ ಥಾವರ್ ಚಂದ್ ಗಹಲೋತ್ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ಧಾರೆ. ರಾಷ್ಟ್ರಪತಿಗಳು ಇಂದು ಥಾವರ್ ಚಂದ್ರ ಗಹಲೋತ್ ಸೇರಿದಂತೆ ಎಂಟು ಮಂದಿ ರಾಜ್ಯಪಾಲರ ನೇಮಕ ಮತ್ತು ವರ್ಗಾವಣೆಗಳನ್ನ ಮಾಡಿ ಆದೇಶ ಹೊರಡಿಸಿದ್ದಾರೆ. ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾಗುವುದರೊಂದಿಗೆ ವಜುಭಾಯ್ ವಾಲಾ ಅವರ ದಾಖಲೆಯ ಅವಧಿ ಅಂತ್ಯಗೊಂಡಂತಾಗಿದೆ. ಗುಜರಾತ್​ನ ಮಾಜಿ ಸಚಿವ ವಜುಭಾಯ್ ವಾಲಾ ಅವರು ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ರಾಜ್ಯಪಾಲರಾದ ದಾಖಲೆ ಸ್ಥಾಪಿಸಿದ್ಧಾರೆ. ಇವರ ಅಧಿಕಾರಾವಧಿ ಮುಗಿದಿದ್ದರೂ ನೂತನ ರಾಜ್ಯಪಾಲರ ನೇಮಕಾತಿ ಆಗದೇ ಇದ್ದರಿಂದ ಅವರೇ ಎರಡು ವರ್ಷ ಹೆಚ್ಚುವರಿ ಕಾಲ ಮುಂದುವರಿದಿದ್ದರು. ಹೀಗಾಗಿ, ಹೆಚ್ಚು ಕಾಲ ಅವರು ರಾಜ್ಯಪಾಲರಾದ ದಾಖಲೆ ಮಾಡಿದ್ದಾರೆ.

  ಇನ್ನು, ಕೇಂದ್ರ ಸಚಿವ ಥಾವರ್ ಚಂದ್ ಗೆಹಲೋತ್ ಅವರನ್ನ ಕರ್ನಾಟಕ ರಾಜ್ಯಪಾಲರನ್ನಾಗಿ ಮಾಡುವ ನಡೆ ಕುತೂಹಲ ಮೂಡಿಸಿದೆ.  73 ವರ್ಷದ ಥಾವರ್ ಚಂದ್ ಈ ಹಿಂದೆ ಕರ್ನಾಟಕದ ಬಿಜೆಪಿ ಉಸ್ತುವಾರಿ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕರ್ನಾಟಕದ ರಾಜಕಾರಣವನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡು ಪೂರಕವಾಗಿ ಕೆಲಸ ಮಾಡುವ ನಿರೀಕ್ಷೆಯಲ್ಲಿ ಅವರನ್ನ ರಾಜ್ಯಪಾಲರಾಗಿ ಇಲ್ಲಿಗೆ ಕಳುಹಿಸಲಾಗಿರಬಹುದು ಎಂಬ ಅಭಿಪ್ರಾಯವಿದೆ.

  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೂತನ ರಾಜ್ಯಪಾಲ ಥಾವರ್ ಚಂದ್​ ಗಹಲೋತ್ ಅವರನ್ನ ಸ್ವಾಗತಿಸಿದ್ದಾರೆ. ವಜುಭಾಯ್ ವಾಲಾ ಅವರ ಅವಧಿ ಮುಗಿದಿದ್ದರೂ ಮುಂದುವರಿದ್ದರು. ಎರಡು ವರ್ಷ ಹೆಚ್ಚುವರಿ ಅವಧಿ ಕಳೆದಿದ್ದರು. ಈಗ ಗೆಹ್ಲೋತ್ ರಾಜ್ಯಪಾಲರಾಗಿ ನೇಮಕವಾಗಿದ್ದರಲ್ಲಿ ಏನು ವಿಶೇಷತೆ ಇಲ್ಲ. ನೂತನ ರಾಜ್ಯಪಾಲರನ್ನ ನಾನು ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ಧಾರೆ.

  ಇದನ್ನೂ ಓದಿ: ಸಿದ್ದರಾಮಯ್ಯ ಬಾದಾಮಿಯ ಇಮ್ಮಡಿ ಪುಲಿಕೇಶಿ: ಸಿದ್ದು ಮನೆ ಮುಂದೆ ಹುಲಿಯಾ ಅಭಿಮಾನಿಗಳ ದಂಡು

  ಥಾವರ್ ಚಂದ್ ಗಹಲೋತ್ ಮಧ್ಯಪ್ರದೇಶದ ದಲಿತ ಮುಖಂಡನಾಗಿದ್ದು ಆರೆಸ್ಸೆಸ್ ಹಿನ್ನೆಲೆಯವರಾಗಿದ್ಧಾರೆ. ಇವರು ಕೆಲ ಬಾರಿ ಕೇಂದ್ರ ಸಚಿವ ಸ್ಥಾನ ನಿರ್ವಹಿಸಿದ್ದಾರೆ. ಸದ್ಯ ಮೋದಿ ಕ್ಯಾಬಿನೆಟ್​ನಲ್ಲಿ ಇವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದರು. ರಾಜ್ಯಸಭಾ ಸದಸ್ಯರಾಗಿರುವ ಇವರು ಮೇಲ್ಮನೆಯಲ್ಲಿ ಸಭಾನಾಯಕನಾಗಿ ಕೆಲಸ ಮಾಡುತ್ತಿದ್ದರು. ಈಗ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಇವರು ಸದ್ಯದಲ್ಲೇ ರಾಜ್ಯಸಭಾ ಸ್ಥಾನ ಮತ್ತು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆ ಇದೆ.

  ನೂತನ ರಾಜ್ಯಪಾಲರಾಗಿ ನೇಮಕವಾದವರು:
  1) ಥಾವರ್ ಚಂದ್ ಗಹಲೋತ್, ಕರ್ನಾಟಕದ ರಾಜ್ಯಪಾಲರಾಗಿ ನೇಮಕ
  2) ಹರಿಬಾಬು ಕಂಭಂಪತಿ, ಮಿಝೋರಾಂ ರಾಜ್ಯಪಾಲರಾಗಿ ನೇಮಕ
  3) ಮಂಗುಭಾಯ್ ಚಗನ್​ಭಾಯ್ ಪಟೇಲ್, ಮಧ್ಯಪ್ರದೇಶ ರಾಜ್ಯಪಾಲರಾಗಿ ನೇಮಕ
  4) ರಾಜೇಂದ್ರನ್ ವಿಶ್ವನಾಥ್ ಅರ್ಲೇಕರ್, ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕ
  5) ಪಿ ಎಸ್ ಶ್ರೀಧರನ್ ಪಿಳ್ಳೈ, ಗೋವಾ ರಾಜ್ಯಪಾಲರಾಗಿ ವರ್ಗಾವಣೆ
  6) ಸತ್ಯದೇವ್ ನಾರಾಯಣ್ ಆರ್ಯ, ತ್ರಿಪುರಾ ರಾಜ್ಯಪಾರಾಗಿ ವರ್ಗಾವಣೆ
  7) ರಮೇಶ್ ಬಾಯಿಸ್, ಜಾರ್ಖಂಡ್ ರಾಜ್ಯಪಾಲರಾಗಿ ವರ್ಗಾವಣೆ
  8) ಬಂಡಾರು ದತ್ತಾತ್ರೇಯ, ಹರ್ಯಾಣ ರಾಜ್ಯಪಾಲರಾಗಿ ನೇಮಕ

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: