• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮುಂದಿನ ಒಂದೂವರೆ ತಿಂಗಳು ದೇಶದಲ್ಲಿ ರಸಗೊಬ್ಬರ ಬೆಲೆ ಏರಿಕೆ ಇಲ್ಲ; ಕೇಂದ್ರ ಸಚಿವ ಸದಾನಂದ ಗೌಡ

ಮುಂದಿನ ಒಂದೂವರೆ ತಿಂಗಳು ದೇಶದಲ್ಲಿ ರಸಗೊಬ್ಬರ ಬೆಲೆ ಏರಿಕೆ ಇಲ್ಲ; ಕೇಂದ್ರ ಸಚಿವ ಸದಾನಂದ ಗೌಡ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಕಳೆದ ವರ್ಷ ಕೊರೋನಾ ಲಾಕ್ಡೌನ್ ನ ಪರಿಣಾಮ ನಗರ ಪ್ರದೇಶದಲ್ಲಿದ್ದ ಜನ ತಮ್ಮ ಊರಿಗೆ ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ಪರಿಣಾಮ ಶೇಕಡಾ 17 ರಷ್ಟು ಹೆಚ್ಚುವರಿ ಯೂರಿಯಾ ಮಾರಾಟವಾಗಿದೆ

  • Share this:

ಪುತ್ತೂರು (ಏ. 9): ಮುಂದಿನ ಒಂದೂವರೆ ತಿಂಗಳವರೆಗೆ ರಸಗೊಬ್ಬರ ಬೆಲೆಯಲ್ಲಿ ಯಾವುದೇ ಏರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದ್ದಾರೆ.  ಮಾಧ್ಯಮಗಳ ಜೊತೆ ಮಾತನಾಡಿದ ಅವರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ತಯಾರಿಸಲು ಬೇಕಾದ ಪ್ರಮುಖ ಕಚ್ಛಾವಸ್ತುಗಳಾದ ಫಾಸ್ಟೆಟಿಕ್, ಫಾಸ್ಪರಸ್, ಡಿ.ಎ.ಪಿ, ಎನ್.ಪಿ.ಕೆ ಮೊದಲಾದ ವಸ್ತುಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದ್ದು, ಇದರಿಂದಾಗಿ ಭಾರತೀಯ ಉತ್ಪಾದನೆಯ ಮೇಲೆಯೂ ಪ್ರಬಾವ ಬೀರಿದೆ. ಭಾರತ ಶೇಕಡಾ 90 ಕಚ್ಛಾ ವಸ್ತುಗಳನ್ನು ವಿದೇಶಗಳಿಂದಲೇ ಆಮದು ಮಾಡುತ್ತಿದ್ದು, ಈ ಕಾರಣಕ್ಕಾಗಿಯೇ ಬೆಲೆ ಏರಿಕೆಯಾಗುತ್ತಿದೆ.  ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದ್ದರೂ, ಕೇಂದ್ರ ಸರಕಾರ ಹೆಚ್ಚಿನ ಸಬ್ಸಿಡಿ ನೀಡುವ ಮೂಲಕ ರೈತರ ಮೇಲೆ ಇದರ ಪರಿಣಾಮ ಬೀರದಂತೆ ಮಾಡುತ್ತಿದ್ದು, ಈ ವರ್ಷ 1.20 ಲಕ್ಷ ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ನೀಡಲಾಗಿದೆ ಎಂದರು.


ಕಳೆದ ವರ್ಷ ಕೊರೋನಾ ಲಾಕ್ಡೌನ್ ನ ಪರಿಣಾಮ ನಗರ ಪ್ರದೇಶದಲ್ಲಿದ್ದ ಜನ ತಮ್ಮ ಊರಿಗೆ ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ಪರಿಣಾಮ ಶೇಕಡಾ 17 ರಷ್ಟು ಹೆಚ್ಚುವರಿ ಯೂರಿಯಾ ಮಾರಾಟವಾಗಿದೆ. ಅಲ್ಲದೆ ಶೇಕಡಾ 42 ರಷ್ಟು ಫಾಸ್ಪೇಟಿಕ್ ಕೂಡಾ ಬಳಕೆಯಾಗಿದ್ದು, ಈ ಎಲ್ಲವನ್ನೂ ಕೇಂದ್ರ ಸರಕಾರ ಸಬ್ಸಿಡಿ ಮೂಲಕವೇ ರೈತರಿಗೆ ನೀಡಿದೆ. ಹೆಚ್ಚುತ್ತಿರುವ ರಸಗೊಬ್ಬರ ಬೆಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯು ಇದೀಗ ರಸಗೊಬ್ಬರ ತಯಾರಿಸುವ ಘಟಕಗಳಾದ ಇಫ್ಕೋ, ಎಂಸಿಎಫ್, ಟಿಪ್ಕೋ, ಐಪಿಎಲ್,ಎನ್.ಎಫ್.ಎಲ್ ಸೇರಿದಂತೆ ಹಲವು ಘಟಕ ಪರಿಶೀಲನೆಯನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಈ ಘಟಕಗಳು ತಮಗೆ ಬೇಕಾದ ಕಚ್ಛಾವಸ್ತುಗಳನ್ನು ಹೆಚ್ಚುವರಿಯಾಗಿ ಹಿಂದಿನ ಬೆಲೆಗೆ ಖರೀದಿಸಿರುವ ಬಗ್ಗೆ ತಿಳಿದು ಬಂದ ಹಿನ್ನಲೆಯಲ್ಲಿ ರಸಗೊಬ್ಬರದ ಬೆಲೆಯಲ್ಲಿ ಯಾವುದೇ ಏರಿಕೆ ಮಾಡದಂತೆ ಸೂಚಿಸಲಾಗಿದೆ. ಈ ವಸ್ತುಗಳು ಸುಮಾರು ಒಂದೂವರೆ ತಿಂಗಳಿಗೆ ಬೇಕಾಗುವಷ್ಟಿದ್ದು, ಇದರಿಂದಾಗಿ ದೇಶದಲ್ಲಿ ಒಂದೂವರೆ ತಿಂಗಳ ಕಾಲ ರಸಗೊಬ್ಬರ ಬೆಲೆಯಲ್ಲಿ ಏರಿಕೆಯಾಗುವುದಿಲ್ಲ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು. ಅಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಕಚ್ಛಾವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲೂ ಕೆಲವು ತಂತ್ರಗಳನ್ನೂ ಅಳವಡಿಸಿಕೊಂಡಿದ್ದು, ಈ  ಬಾರಿ ಪ್ರತಿ ಟನ್ ಗೆ 30 ಡಾಲರ್ ನಷ್ಟು ಕಡಿಮೆಗೆ ಖರೀದಿಸಲಾಗಿದೆ ಎಂದರು.


ಅಮೇರಿಕಾ, ಬ್ರಿಟನ್ ಹಾಗೂ ಯೂರೋಪ್ ದೇಶಗಳಲ್ಲಿ ಈ ತಿಂಗಳಿಗೆ ಅಲ್ಲಿನ ಕೃಷಿ ಚಟುವಟಿಕೆಗಳು ಮುಕ್ತಾಯವಾಗುತ್ತಿದ್ದು, ಇದರಿಂದಾಗಿ ಆ ಭಾಗದಲ್ಲಿ ರಸಗೊಬ್ಬರಗಳ ಬೇಡಿಕೆ ಕುಸಿಯುವ ಹಿನ್ನಲೆಯಲ್ಲಿ ಕಚ್ಛಾವಸ್ತುಗಳ ಬೆಲೆಯಲ್ಲಿ ಸ್ವಾಭಾವಿಕವಾಗಿಯೇ ಇಳಿಕೆ ಕಂಡು ಬರಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ


ಕೊರೋನಾ ನಿಯಂತ್ರಣಕ್ಕೆ ಕೇಂದ್ರದಿಂದ ಪರಿಣಾಮಕಾರಿ ಕ್ರಮ


ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆ ಆತಂಕ ಮೂಡಿಸುವಂತಹ ಸ್ಥಿತಿಯಲ್ಲಿದ್ದು, ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮರಣಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂದ ಅವರು ಈ ಕುರಿತು ಕೇಂದ್ರ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದರು. ದೇಶದಲ್ಲಿ ಈಗಾಗಲೇ 7 ರಿಂದ 8 ಕೋಟಿ ಕೊರೊನಾ ಲಸಿಕೆಗಳನ್ನು ವಿತರಿಸಲಾಗಿದ್ದು, ಎಲ್ಲಾ ರಾಜ್ಯಗಳಿಗೂ ಬೇಕಾದ ಲಸಿಕೆಗಳನ್ನು ಪೂರೈಸಲಾಗಿದೆ. ಈ ನಡುವೆ ಕೆಲವು ರಾಜ್ಯಗಳು ಲಸಿಕೆ ವಿತರಣೆಯಲ್ಲಿ ಕೇಂದ್ರ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪಗಳನ್ನು ಮಾಡುತ್ತಿರುವುದು ರಾಜಕೀಯ ಪ್ರೇರಿತ ಎಂದ ಅವರು ಕೊರೊನಾ ತಡೆಗೆ ಜನರೇ ಮುತುವರ್ಜಿ ವಹಿಸಬೇಕು ಎಂದರು.


ಕೊರೋನಾ ತಡೆಗೆ ಲಾಕ್ಡೌನ್ ಪರಿಹಾರವಲ್ಲ ಎಂದ ಅವರು ದೇಶದ ಆರ್ಥಿಕತೆಯನ್ನು ಮನದಲ್ಲಿಟ್ಟು ಇತರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಮತ್ತೆ ದೇಶದಲ್ಲಿ ಲಾಕ್ಡೌನ್ ಹೇರಿಕೆಯಾದಲ್ಲಿ ಕೊರೊನಾದಿಂದ ಸಾಯುವವರ ಸಂಖ್ಯೆಗಿಂತ ಆನ್ನವಿಲ್ಲದೆ ಸಾಯುವವರ ಸಂಖ್ಯೆ ಹೆಚ್ಚಾಗಬಹುದು ಎಂದ ಅವರು ರಾತ್ರಿ ಕರ್ಫೂ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಅಲ್ಲದೆ ರಾತ್ರಿ ಸಮಯದಲ್ಲಿ ಕೆಲವು ಆಟೋಟಗಳು ಜಾಸ್ತಿಯಾಗಿದ್ದು, ಇದರಿಂದಲೂ ಕೊರೊನಾ ಹೆಚ್ಚಾಗಿ ಹರಡುವ ಸಾಧ್ಯತೆಯಿರುವ ಕಾರಣಕ್ಕಾಗಿ ರಾತ್ರಿ ಕರ್ಫೂವನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಪುತ್ತೂರಿನ ಮಠಂದಬೆಟ್ಟು ಮಹಿಷಮರ್ಧಿನಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

First published: