ಎಚ್ಡಿಕೆ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ಮೋದಿ; ರಾಜ್ಯಕ್ಕೆ 2 ತಂಡ ಕಳುಹಿಸಲು ಸಮ್ಮತಿ

news18
Updated:September 10, 2018, 1:33 PM IST
ಎಚ್ಡಿಕೆ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ಮೋದಿ; ರಾಜ್ಯಕ್ಕೆ 2 ತಂಡ ಕಳುಹಿಸಲು ಸಮ್ಮತಿ
news18
Updated: September 10, 2018, 1:33 PM IST
ನ್ಯೂಸ್ 18 ಕನ್ನಡ

ನವದೆಹಲಿ (ಸೆ.10): ಕೊಡಗು ಮತ್ತು ನೆರೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸಮೀಕ್ಷೆ ಮಾಡಲು ಕೂಡಲೇ ಕೇಂದ್ರ ಸರ್ಕಾರವು ಅಧಿಕಾರಿಗಳ ಎರಡು ತಂಡಗಳನ್ನು ಕಳುಹಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗವು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಒಳನಾಡಿನಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಬಗ್ಗೆ ಮನವರಿಕೆ ಮಾಡಿ, ಕೊಡಗು ಹಾಗೂ ನೆರೆಯ ಜಿಲ್ಲೆಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ 2000 ಕೋಟಿ ರೂ. ಗಳ ಪ್ಯಾಕೇಜ್ ಘೋಷಿಸಿ, ಅನುದಾನ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಪ್ರಧಾನ ಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಕೊಡಗು ಮತ್ತು ನೆರೆಯ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸತತ ಭಾರಿ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಜನ-ಜಾನುವಾರುಗಳು ಜೀವ ಕಳೆದುಕೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಆಗಸ್ಟ್ 2 ನೇ ವಾರದಲ್ಲಿ ಕಳೆದ 118 ವರ್ಷಗಳಲ್ಲೇ ದಾಖಲೆ ಮಳೆ ಸುರಿದಿದ್ದರಿಂದ ಅಪಾರ ನಷ್ಟ ಸಂಭವಿಸಿದ್ದು, ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಿಗೆ, ಮೂಲಸೌಕರ್ಯ, ಮನೆಗಳಿಗೆ ತೀವ್ರ ಹಾನಿಯುಂಟಾಗಿದೆ. ಅತಿವೃಷ್ಟಿಯಿಂದಾಗಿ ಈ ಜಿಲ್ಲೆಗಳಲ್ಲಿ ಒಟ್ಟು 3,705.87 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪುನರ್ವಸತಿ ಮತ್ತು ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೊಡಗು ಮತ್ತಿತರ ಜಿಲ್ಲೆಗಳಿಗೆ 2,000 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ನಿಯೋಗದ ಇತರ ಸದಸ್ಯರೊಂದಿಗೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಅಂತೆಯೇ ಕರ್ನಾಟಕದ ಒಳನಾಡಿನಲ್ಲಿ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಈ ಕುರಿತೂ ಸಹ ನಷ್ಟದ ಪ್ರಮಾಣ ಅಂದಾಜು ಮಾಡಲಾಗುತ್ತಿದ್ದು, ಈ ಕುರಿತು ನಾಳೆ ಸಂಪುಟ ಉಪಸಮಿತಿ ಸಭೆ ನಡೆಸಿ ಪ್ರಸ್ತಾವನೆಯನ್ನು ಅಂತಿಮಗೊಳಿಸಲಿದೆ. ಅದರಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನಿಯೋಗವು ಪ್ರಧಾನಿಯವರಿಗೆ ಮಾಹಿತಿ ನೀಡಿತು.

ಪ್ರಧಾನಿಗೆ ಡಾಮ್ ಮೊರೇಸ್ ಪುಸ್ತಕ ಉಡುಗೊರೆ

ನವದೆಹಲಿ, ಸೆಪ್ಟೆಂಬರ್ 20- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಖ್ಯಾತ ಪ್ರವಾಸಿ ಲೇಖಕ ಡಾಮ್ ಮೊರೇಸ್ ಅವರು ಬರೆದ “ದಿ ಓಪನ್ ಐಸ್: ಎ ಜರ್ನಿ ಥ್ರೂ ಕರ್ನಾಟಕ” ಎಂಬ ವಿಶಿಷ್ಟ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
Loading...

ಕರ್ನಾಟಕ ಸರ್ಕಾರದ ಪರವಾಗಿ ವಾರ್ತಾ ಇಲಾಖೆಯು ಈ ಪುಸ್ತಕವನ್ನು 1976ರಲ್ಲಿ ಪ್ರಕಟಿಸಿತ್ತು. ಇದರ ಲೇಖಕ ಡಾಮ್ ಮೊರೇಸ್ ಭಾರತದ ಪ್ರತಿಭಾನ್ವಿತ ಕವಿ, ಅಂಕಣಕಾರ ಹಾಗೂ ಪ್ರವಾಸಿ ಲೇಖಕರಾಗಿದ್ದರು, ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಈ ಕೃತಿಗೆ ಅಂತರರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಹಾಗೂ ಚಿತ್ರ ಕಲಾವಿದ ಪದ್ಮಭೂಷಣ ಮಾರಿಯೋ ಮಿರಾಂಡ ಅವರು ಚಿತ್ರಗಳನ್ನು ಒದಗಿಸಿದ್ದರು.

ಭೇಟಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಈಚೆಗೆ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ರಾಜ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ರಾಜ್ಯಕ್ಕೆ ಕೇಂದ್ರದಿಂದ ತಂಡ ಕಳುಹಿಸಿಕೊಡುವ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ. ಕಳೆದ 17 ವರ್ಷಗಳಲ್ಲಿ ಕರ್ನಾಟಕದಲ್ಲಿ 13 ವರ್ಷ ಬರ ಎದುರಿಸಿದೆ. 67 ಮಾನವ ಜೀವ ಹಾನಿಯಾಗಿದೆ. ಈ ಬಗ್ಗೆ ಪಟ್ಟಿ ಕಳುಹಿಸಿಕೊಡುವಂತೆ ಪ್ರಧಾನಿಗಳು ಕೇಳಿದ್ದಾರೆ. ಹೆಸರುಗಳನ್ನು ಕಳಿಸಿದರೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ನೀಡುವ ಭರವಸೆ ನೀಡಿದ್ದಾರೆ. ಪ್ರವಾಹಪೀಡಿತ ಸಂದರ್ಭದಲ್ಲಿ ಸಹಕರಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು.

ಪ್ರಧಾನಿಗಳ ಭೇಟಿಗೆ ಎರಡೂ ಪಕ್ಷದ ಸದನಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಆದರೂ ಬಿಜೆಪಿ ನಾಯಕರು ನಿಯೋಗದಲ್ಲಿ ಬಂರಲಿಲ್ಲ. ಯಡಿಯೂರಪ್ಪ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಆಹ್ವಾನ‌ ನೀಡಿದ್ದೆವು. ಪಿಎಂ ಕಚೇರಿಗೆ ಎಲ್ಲರ ಹೆಸರ ಕೊಟ್ಟಿದ್ದೆವು. ಪಿಎಂ ಕಚೇರಿಯಿಂದ ಯಡಿಯೂರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದರಾದ ಪ್ರತಾಪ ಸಿಂಹ, ಶೋಭಾ ಕರಂದ್ಲಾಜೆ, ನವೀನ್ ಕುಮಾರ್ ಕಟೀಲು, ಕೇಂದ್ರ ಸಚಿವರಾದ ಡಿವಿ ಸದಾನಂದಗೌಡ, ಅನಂತಕುಮಾರ್ ಹೆಗಡೆ ಹೆಸರಿತ್ತು. ಸಭೆಯಲ್ಲಿ ಬಿಜೆಪಿ ನಾಯಕರಿಗೆ ಕುರ್ಚಿ ಹಾಕಿ ಹೆಸರನ್ನು ನಮೂದಿಸಲಾಗಿತ್ತು. ಆದರೂ ಬಿಜೆಪಿ ನಾಯಕರು ನಿಯೋಗದಲ್ಲಿ ಬಂದಿರಲಿಲ್ಲ. ಯಡಿಯೂರಪ್ಪ ಬೆಂಗಳೂರಿನಲ್ಲಿ ಬ್ಯುಸಿ ಇರುವುದರಿಂದ ಬರಲಿಲ್ಲ ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಹೆಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಂದಾಯ ಸಚಿವ ಆರ್. ವಿ.ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಗ್ರಾಮೀಣಾಭಿ ವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ ಗಳೊಂದಿಗೆ ನಿಯೋಗದಲ್ಲಿ ಇದ್ದರು.

ಇದನ್ನು ಓದಿ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತ್ರತ್ವದ ನಿಯೋಗ ಪ್ರಧಾನಿ ಭೇಟಿಯ ಚಿತ್ರಪಟಗಳು

 

ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯ ಮಾಹಿತಿ

ಕರ್ನಾಟಕವು 2018ರ ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಅತಿ ಹೆಚ್ಚು ಹಾಗೂ ಅತಿ ಕಡಿಮೆ ಮಳೆಗೆ ಸಾಕ್ಷಿಯಾಗಿದೆ. ಇದರಿಂದಾಗಿ ಕರಾವಳಿ ಹಾಗೂ ಮಲೆನಾಡಿನ 7 ಜಿಲ್ಲೆಗಳಲ್ಲಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದ್ದು, ಒಳನಾಡಿನ 15 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದೆ.

ಕೊಡಗು ಹಾಗೂ ನೆರೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮೇ ತಿಂಗಳಿನಿಂದ ಆಗಸ್ಟ್ ವರೆಗೆ ಸತತವಾಗಿ ಭಾರಿ ಮಳೆಯಾಗುತ್ತಿದ್ದು, ಆಗಸ್ಟ್ 2ನೇ ವಾರದಲ್ಲಿ ಕಳೆದ 118 ವರ್ಷಗಳಲ್ಲಿಯೇ ಅತಿ ಹೆಚ್ಚು ಮಳೆ ದಾಖಲಾಗಿದೆ.

ಇದರಿಂದಾಗಿ ಈ ಭಾಗದ ಜಲಾಶಯಗಳಿಗೆ ಹಿಂದೆಂದೂ ಹರಿಯದಷ್ಟು ನೀರು ಹರಿದಿದೆ. ತಿಂಗಳುಗಳ ಕಾಲ ಸತತ ಭಾರಿ ಮಳೆ ಸುರಿದಿದ್ದರಿಂದ ಕೊಡಗು ಮತ್ತು ನೆರೆಯ ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಭಾರಿ ಭೂಕುಸಿತ ಹಾಗೂ ಪ್ರವಾಹ ಪರಿಸ್ಥಿತಿ ತಲೆದೋರಿತು. ಇದರಿಂದಾಗಿ ಮೇಲ್ಮೈ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಪರಿಸರದ ಮೇಲೆ ಹಾಗೂ ಭೌಗೋಳಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಭಾರಿ ಹಾನಿಯಾಗಿದ್ದು, ಭೂ ಕುಸಿತದಿಂದಾಗಿ ಕಾಫಿ ತೋಟಗಳು ಕೇವಲ ಮಣ್ಣಿನ ರಾಶಿಗಳಾಗಿ ಉಳಿದಿವೆ.

ಕಾಫಿ ಉದ್ಯಮದ ಅಂದಾಜಿನ ಪ್ರಕಾರ 2018-19ರಲ್ಲಿ ಕಾಫಿ ಉತ್ಪಾದನೆ ಶೇ. 20 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಏಕೆಂದರೆ ಭಾರತದ ಶೇ. 90 ರಷ್ಟು ಕಾಫಿ ಉತ್ಪಾದನೆ ಕೊಡಗು ಮತ್ತು ಕೇರಳದಲ್ಲಿ ಆಗುತ್ತಿದೆ. ಕಾಫಿ ಬೆಳೆ ನಷ್ಟವೇ ಸುಮಾರು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 275, ರಾಷ್ಟ್ರೀಯ ಹೆದ್ದಾರಿ 75 ಹಾಗೂ ರಾಷ್ಟ್ರೀಯ ಹೆದ್ದಾರಿ 234, ರಾಜ್ಯ ಹೆದ್ದಾರಿಗಳು, ಕೊಡಗಿನ ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಹಾಗೂ ಅರಣ್ಯ ರಸ್ತೆಗಳಿಗೆ ಭಾರಿ ಹಾನಿಯುಂಟಾಗಿದೆ. ಘಾಟಿ ಪ್ರದೇಶದಲ್ಲಿ ಹಲವೆಡೆಗಳಲ್ಲಿ ಭೂ ಕುಸಿತವಾಗಿದ್ದು, ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಸಂಚಯವಾಗಿರುವ ಮಣ್ಣು, ಕೆಸರು ತೆರವುಗೊಳಿಸಲು ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಪ್ರಕೃತಿಯ ಮುನಿಸಿನಿಂದ ಸಾವಿರಾರು ಜನ ಮನೆ, ಜೀವನೋಪಾಯ ಕಳೆದುಕೊಂಡಿದ್ದಾರೆ. ಪ್ಲಾಂಟೇಷನ್ ಕಾರ್ಮಿಕರು ಹಾಗೂ ಸಣ್ಣ ಮತ್ತು ಮಧ್ಯಮ ಭೂ ಹಿಡುವಳಿದಾರರಿಗೆ ಇದರಿಂದ ಅತಿ ಹೆಚ್ಚು ತೊಂದರೆಯಾಗಿದೆ. 65 ಜನರು ಪ್ರವಾಹ, ಭೂಕುಸಿತ, ಮನೆ ಕುಸಿತ ಮತ್ತು ಸಿಡಿಲು ಮಳೆಗೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ಯಶಸ್ವಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ 4300 ಜನರನ್ನು ರಕ್ಷಣೆ ಮಾಡಿದೆ.

55 ಪರಿಹಾರ ಕೇಂದ್ರಗಳಲ್ಲಿ ಸುಮಾರು 7300 ಜನರಿಗೆ ಆಶ್ರಯ ನೀಡಲಾಗಿದೆ. ಈ ಪರಿಹಾರ ಕೇಂದ್ರಗಳಲ್ಲಿ ಆಹಾರ, ವೈದ್ಯಕೀಯ ನೆರವು ಮತ್ತಿತರ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ 5 ಲಕ್ಷ ರೂಪಾಯಿ (ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂ. ಹೆಚ್ಚುವರಿ ಪರಿಹಾರ) ಪರಿಹಾರ ನೀಡಲಾಗಿದೆ.

ಪರಿಹಾರ ಕೇಂದ್ರದಲ್ಲಿರುವ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಅಗತ್ಯ ವೆಚ್ಚಗಳಿಗಾಗಿ 3800 ರೂಪಾಯಿ ನಗದು ನೀಡಲಾಗಿದೆ. ಜೊತೆಗೆ 10 ಕೆಜಿ ಅಕ್ಕಿ, 1 ಕೆಜಿ ಎಣ್ಣೆ, ಸಕ್ಕರೆ, ಉಪ್ಪು, ಬೇಳೆಗಳನ್ನು ಹಳ್ಳಿಗಳಿಗೆ ಜೀಪುಗಳ ಮೂಲಕ ವಿತರಿಸಲಾಗಿದೆ. ಶುದ್ಧ ಕುಡಿಯುವ ನೀರನ್ನು ಸಹ ಒದಗಿಸಲಾಗಿದೆ.

ರಾಜ್ಯ ಸರ್ಕಾರವು ಪರಿಹಾರ ಮತ್ತು ಪುನರ್ವಸತಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 49 ಕೋಟಿ ರೂ. ಹಾಗೂ ರಾಜ್ಯದ ಅನುದಾನ 200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಬರ ಪರಿಸ್ಥಿತಿ

ರಾಜ್ಯದಲ್ಲಿ ಸೆಪ್ಟೆಂಬರ್ 6ರವರೆಗೆ ಒಟ್ಟಾರೆಯಾಗಿ ಸರಾಸರಿ ವಾಡಿಕೆ ಮಳೆಯಾಗಿದ್ದರೂ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದರೆ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಜಿಲ್ಲಾವಾರು ಮಳೆಯ ಪರಿಸ್ಥಿತಿ

30 ಜಿಲ್ಲೆಗಳಲ್ಲಿ 4 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು, 10 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಹಾಗೂ 16 ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡುಬಂದಿದೆ.

176 ತಾಲ್ಲೂಕುಗಳ ಪೈಕಿ 23 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು, 64 ತಾಲ್ಲೂಕುಗಳಲ್ಲಿ ವಾಡಿಕೆ ಮಳೆ ಹಾಗೂ 89 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಕಂಡುಬಂದಿದೆ.

ಸೆಪ್ಟೆಂಬರ್ 2 ರವರೆಗೆ 104 ತಾಲ್ಲೂಕುಗಳಲ್ಲಿ ಸತತ 3 ವಾರಗಳ ಕಾಲ ಒಣ ಹವೆ ಕಂಡುಬಂದಿದೆ. ಮಳೆ ಕೊರತೆ ಹಾಗೂ ಸತತ 3 ವಾರಗಳ ಒಣ ಹವೆ ಪರಿಸ್ಥಿತಿ ಈ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಅಂದಾಜಿಸಲು ಅರ್ಹತೆ ಪಡೆದುಕೊಂಡಿವೆ. ಬರ ಪರಿಸ್ಥಿತಿಯ ಪರಿಣಾಮವನ್ನು ಅಳೆಯಲು ವಿವಿಧ ಮಾನದಂಡಗಳಾದ ಬಿತ್ತನೆ ಪ್ರದೇಶ, ತೇವಾಂಶ ಪ್ರಮಾಣ ಮತ್ತು ಇತರ ಅಂಶಗಳ ಅಧ್ಯಯನ ನಡೆಸಲಾಗುತ್ತಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ತೇವಾಂಶ ಕೊರತೆಯಿಂದಾಗಿ ಈ ಪ್ರದೇಶಗಳಲ್ಲಿ 15 ಲಕ್ಷ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ತೊಂದರೆಯಾಗಿದೆ. ಈವರೆಗೆ ಸಂಭವಿಸಿದ ನಷ್ಟದ ಮೌಲ್ಯ 8000 ಕೋಟಿ ರೂ. ಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಇದಲ್ಲದೆ ಕುಡಿಯುವ ನೀರು, ಮೇವು, ಗ್ರಾಮೀಣ ಉದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದ್ದು, ಆರ್ಥಿಕ ನಷ್ಟವನ್ನು ಅಂದಾಜಿಸಲಾಗುತ್ತಿದೆ.

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಹೊರ ತಂದಿರುವ ಬರ ನಿರ್ವಹಣೆ ಕೈಪಿಡಿ- 2016ರಲ್ಲಿ ವಿವರಿಸಿರುವಂತೆ 176 ತಾಲ್ಲೂಕುಗಳಲ್ಲಿ 86 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ ಸಂಬಂಧಿಸಿದ ಇಲಾಖೆಗಳು ಬರದ ತೀವ್ರತೆಯನ್ನು ಹಾಗೂ ಬೆಳೆ ನಾಶದ ಪ್ರಮಾಣವನ್ನು ಖಾತರಿಪಡಿಸಲು ಸಮೀಕ್ಷೆ ನಡೆಸುತ್ತಿವೆ.

ಎನ್ ಡಿ ಆರ್ ಎಫ್ ಅಡಿ ಆರ್ಥಿಕ ನೆರವಿಗಾಗಿ ಸೂಕ್ತ ಸಮಯದಲ್ಲಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ