ಸಣ್ಣ, ಮಧ್ಯಮ ಕೈಗಾರಿಕೆಗೆ 3 ಲಕ್ಷ ಕೋಟಿ ಹಂಚಿಕೆಯಿಂದ ಕೋಟ್ಯಂತರ ಜನರಿಗೆ ಅನುಕೂಲ; ಸಚಿವ ಜಗದೀಶ ಶೆಟ್ಟರ್

Karnataka Coronavirus Updates: ಚೀನಾದಿಂದ ಆಚೆ ಬರುವ ಕಂಪೆನಿಗಳನ್ನು ಸೆಳೆಯಲು ಟಾಸ್ಕ್ ಫೋರ್ಸ್ ರಚಿಸಲಾಗಿದೆ. ನಮ್ಮ ರಾಜ್ಯ, ನಮ್ಮ ದೇಶದ ಹಲವು ಕೈಗಾರಿಕೋದ್ಯಮಿಗಳು ಚೀನಾದಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಅಂಥವರಿಗೂ ನಮ್ಮಲ್ಲೇ ಕೈಗಾರಿಕೆ ಸ್ಥಾಪಿಸಲು ಪೂರಕ ವಾತಾವರಣ ರೂಪಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.

news18-kannada
Updated:May 13, 2020, 6:20 PM IST
ಸಣ್ಣ, ಮಧ್ಯಮ ಕೈಗಾರಿಕೆಗೆ 3 ಲಕ್ಷ ಕೋಟಿ ಹಂಚಿಕೆಯಿಂದ ಕೋಟ್ಯಂತರ ಜನರಿಗೆ ಅನುಕೂಲ; ಸಚಿವ ಜಗದೀಶ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್.
  • Share this:
ಬೆಂಗಳೂರು: ನಾವು ನಿರೀಕ್ಷೆ ಮಾಡಿದ ರೀತಿ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಘೋಷಣೆ ಮಾಡಿದೆ. ದೊಡ್ಡ ದೊಡ್ಡ ರಾಷ್ಟ್ರಗಳೇ ಕೋವಿಡ್ -19ನಿಂದ ಕಠಿಣ ಪರಿಸ್ಥಿತಿಯಲ್ಲಿವೆ. ಆದರೆ ಮೋದಿಯವರು ಉತ್ತಮ ರೀತಿಯಲ್ಲಿ ಪರಿಸ್ಥಿತಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. 

ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಪ್ಯಾಕೇಜ್ ಹಂಚಿಕೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರಧಾನಿ ಮೋದಿ ಅವರು ಇಡೀ ದೇಶದ ಜನತೆಯನ್ನು ಹುರಿದುಂಬಿಸಿ, ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳು ನಿಲ್ಲುವ ಪರಿಸ್ಥಿತಿಯಲ್ಲಿದೆ. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 20 ಲಕ್ಷ ಘೋಷಣೆ ಮಾಡಿದ್ದು, ನಮ್ಮ‌ ದೇಶದ ಇತಿಹಾಸ ಎಂದು ಹೇಳಿದರು.

ನಿರ್ಮಲಾ ಸೀತಾರಾಮನ್ ಅವರು ಕೆಲವು ಘೋಷಣೆಗಳನ್ನು ಮಾಡಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ರಿಲೀಫ್ ಕೊಟ್ಟಿದೆ. ನಾನು ಕೇಂದ್ರ ಸರ್ಕಾರಕ್ಕೆ ಲಿಖಿತ ಪತ್ರ ಬರೆದಿದ್ದೆ. ಅದಕ್ಕೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಮೂರು ಲಕ್ಷ ಕೋಟಿ ರೂಪಾಯಿಯನ್ನು ಸಣ್ಣ ಕೈಗಾರಿಕೆಗಳಿಗೆ ಕೊಟ್ಟಿದ್ದು, ದೊಡ್ಡ ರಿಲೀಪ್ ಸಿಕ್ಕಿದೆ. ಕೋಟ್ಯಾಂತರ ಕಾರ್ಮಿಕರು ಈ ವಲಯದ ಮೇಲೆ ಅವಲಂಬಿತರಾಗಿದ್ದಾರೆ ಎಂದು ಹೇಳಿದರು.

ಸಣ್ಣ ಕೈಗಾರಿಕೆಗಳಿಗೆ ಒಂದು ವರ್ಷದ ನಂತರ ರೀ ಪೇಮೆಂಟ್ ಮಾಡಲು ಅವಕಾಶ ನೀಡಲಾಗಿದೆ. ಅಕ್ಟೋಬರ್ 31ರವರೆಗೆ ಸಾಲ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. 25 ಲಕ್ಷ ವ್ಯಾಪ್ತಿಯನ್ನು ಒಂದು ಕೋಟಿಗೆ ಹೆಚ್ಚಿಸಿದ್ದಾರೆ. 25 ಕೋಟಿ ವಹಿವಾಟನ್ನು ನೂರು ಕೋಟಿಗೆ ಹೆಚ್ಚಿಸಿದೆ. ಇದರ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ತೆಗೆದುಕೊಂಡಿದೆ.  ಅಕ್ಟೋಬರ್ 31 ರವರೆಗೆ ಎಂ‌ಎಸ್ಎಂಇ ಕೈಗಾರಿಕೆಗಳು ಸಾಲ ಪಡೆಯಬಹುದು. ಈ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ. ಇದೇ ಮೊದಲ ಸಲ ಕೈಗಾರಿಕಾ ಸಾಲಕ್ಕೆ ಕೇಂದ್ರ ಸರ್ಕಾರ ಜವಾಬ್ದಾರಿ ವಹಿಸಿಕೊಂಡಿದೆ. 200 ಕೋಟಿವರೆಗೆ ಗ್ಲೋಬಲ್ ಟೆಂಡರ್ ರದ್ದು ಮಾಡಲಾಗಿದ್ದು, ಇದರಿಂದ ದೇಶೀಯ ಕಂಪೆನಿಗಳಿಗೆ ಅನುಕೂಲವಾಗಲಿದೆ. ಸಣ್ಣ, ಮಧ್ಯಮ‌ ಕೈಗಾರಿಕೆಗಳು ಉಳಿದು ಬದುಕಲು‌ ಈ ಪ್ಯಾಕೇಜ್ ಪೂರಕವಾಗಿದೆ.  ಎಂಎಸ್ಎಂಇ ವಲಯಕ್ಕೆ 3 ಲಕ್ಷ ಕೋಟಿ ಸಾಲದ ನೆರವು ಕೊಟ್ಟಿರುವುದರಿಂದ ದೇಶದ 45 ಲಕ್ಷ ಎಂಎಸ್ಎಂಇ ವಲಯಗಳಿಗೆ ಅನುಕೂಲವಾಗಲಿದೆ ಎಂದು ಶೆಟ್ಟರ್ ಹೇಳಿದರು.

ಇದನ್ನು ಓದಿ: Nirmala Sitharaman Speech: ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ.ಹಂಚಿಕೆ​, ತೆರಿಗೆದಾರರಿಗೆ ಬಂಪರ್ ಗಿಫ್ಟ್

ಇತ್ತೀಚಿನ ಬೆಳವಣಿಗೆ ನೋಡಿದಾಗ ಚೈನಾದ ವಿರುದ್ಧ ಆಕ್ರೋಶ ಮಡುಗಟ್ಟಿದೆ. ಪೂರ್ವ ಮತ್ತು ಯುರೋಪಿಯನ್ ದೇಶಗಳು ಚೀನಾದ ಮೇಲೆ ಸಿಟ್ಟಾಗಿವೆ. ಚೀನಾದಿಂದ ಹೊರ ಬರುವ ಕಂಪೆನಿಗಳಿಗೆ ಆ ದೇಶಗಳು ನೆರವು ಘೋಷಿಸಿವೆ. ನಮ್ಮ ರಾಜ್ಯದಲ್ಲೂ ಈ ಪದ್ಧತಿ ಅನುಸರಿಸುತ್ತಿದ್ದೇವೆ. ಚೀನಾದಿಂದ ಹೊರ ಬರುವ ಕಂಪೆನಿಗಳ ಸ್ವಾಗತಿಸಲು ನಮ್ಮ ರಾಜ್ಯವೂ ಮುಂದಾಗಿದೆ. ನಮ್ಮ ಮುಖ್ಯಮಂತ್ರಿಗಳು ಕೈಗಾರಿಕೋದ್ಯಮಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಚೀನಾದಿಂದ ಆಚೆ ಬರುವ ಕಂಪೆನಿಗಳನ್ನು ಸೆಳೆಯಲು ಟಾಸ್ಕ್ ಫೋರ್ಸ್ ರಚಿಸಲಾಗಿದೆ. ನಮ್ಮ ರಾಜ್ಯ, ನಮ್ಮ ದೇಶದ ಹಲವು ಕೈಗಾರಿಕೋದ್ಯಮಿಗಳು ಚೀನಾದಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಅಂಥವರಿಗೂ ನಮ್ಮಲ್ಲೇ ಕೈಗಾರಿಕೆ ಸ್ಥಾಪಿಸಲು ಪೂರಕ ವಾತಾವರಣ ರೂಪಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.
First published: May 13, 2020, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading