ಮಹದಾಯಿ ಹೋರಾಟಕ್ಕೆ ಮಣಿದ ಕೇಂದ್ರ; ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ

ಮಹದಾಯಿ ನದಿ ನೀರು ಹಂಚಿಕೆ ವ್ಯಾಜ್ಯ ನ್ಯಾಯಮಂಡಳಿಯು ಕಳೆದ ವರ್ಷ ನೀಡಿದ ತೀರ್ಪಿನಲ್ಲಿ ರಾಜ್ಯಕ್ಕೆ 13.4 ಟಿಎಂಸಿ ನೀರನ್ನು ಹಂಚಿಕೆ ಮಾಡಿತು. ತಮ್ಮ ಪಾಲಿಗೆ ನೀಡಲಾಗಿರುವ ನೀರನ್ನು ಕೊಡಿ ಎಂಬುದು ಮಹದಾಯಿ ಹೋರಾಟಗಾರರ ಬೇಡಿಕೆಯಾಗಿದೆ.

ಮಹದಾಯಿ

ಮಹದಾಯಿ

 • Share this:
  ನವದೆಹಲಿ(ಅ. 23): ಬರಪೀಡಿತ ಉತ್ತರ ಕರ್ನಾಟಕದ ಕೆಲ ಭಾಗಗಳಿಗೆ ಮಹದಾಯಿ ನೀರು ಹರಿಸಬೇಕೆಂದು ರೈತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿಯುವಂತಿದೆ. ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಹಸಿರು ನಿಶಾನೆ ತೋರಿದೆ. ಅ. 17ರಂದು ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಒಪ್ಪಿಗೆ ಪತ್ರ ಬಂದಿದೆ ಎಂದು ಮೂಲಗಳು ತಿಳಿಸಿವೆ.

  ಕುಡಿಯುವ ನೀರಿನ ಯೋಜನೆಗೆ ಅಗತ್ಯ ತಯಾರಿ ಮಾಡಿಕೊಳ್ಳಬಹುದು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಸರ ಇಲಾಖೆ ಬರೆದ ಪತ್ರದಲ್ಲಿ ಉಲ್ಲೇಖಿಸಿ ಅನುಮತಿ ನೀಡಲಾಗಿದೆ.

  ಮಹದಾಯಿ ಯೋಜನೆಯಲ್ಲಿ ಜಲ ವಿದ್ಯುತ್ ಮತ್ತು ನೀರಾವರಿ ಯೋಜನೆಗಳೂ ಒಳಗೊಂಡಿವೆ. ಕೇಂದ್ರ ಪರಿಸರ ಇಲಾಖೆ ಸದ್ಯಕ್ಕೆ ಅನುಮತಿ ನೀಡಿರುವುದು ಕುಡಿಯುವ ನೀರಿನ ಯೋಜನೆಗೆ ಮಾತ್ರವಾಗಿದೆ.

  ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ; ಡಿಸಿಗಳ ಜೊತೆ ಸಿಎಂ ಬಿಎಸ್​ ಯಡಿಯೂರಪ್ಪ ವಿಡಿಯೋ ಸಂವಾದ

  ಮಹದಾಯಿ ನದಿ ನೀರು ಹಂಚಿಕೆ ವ್ಯಾಜ್ಯ ನ್ಯಾಯಮಂಡಳಿಯು ಕಳೆದ ವರ್ಷ ನೀಡಿದ ತೀರ್ಪಿನಲ್ಲಿ ರಾಜ್ಯಕ್ಕೆ 13.4 ಟಿಎಂಸಿ ನೀರನ್ನು ಹಂಚಿಕೆ ಮಾಡಿತು. ತಮ್ಮ ಪಾಲಿಗೆ ನೀಡಲಾಗಿರುವ ನೀರನ್ನು ಕೊಡಿ ಎಂಬುದು ಮಹದಾಯಿ ಹೋರಾಟಗಾರರ ಬೇಡಿಕೆಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಬರಬೇಕಿದೆ. ಈಗ ಪರಿಸರ ಇಲಾಖೆಯ ಅನುಮತಿಯಷ್ಟೇ ಸಿಕ್ಕಿದೆ.

  ಸಿಎಂ ಸ್ವಾಗತ:

  ಕುಡಿಯುವ ನೀರಿನ ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಟ್ಟಿರುವುದು ಶೇ. 90ರಷ್ಟು ದಾರಿ ಸುಗಮವಾದಂತಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಎಂ, ಬಿಜೆಪಿ ಅಧಿಕಾರಕ್ಕೆ ಬಂದರೆ ಕಳಸಾ ಬಂಡೂರಿ ವಿವಾದವನ್ನು ಇತ್ಯರ್ಥಪಡಿಸುವ ಭರವಸೆ ನೀಡಿದ್ದೆವು. ಅದರಂತೆ ಪ್ರಧಾನಿಯವರು ಯೋಜನೆ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಪರಿಸರ ಇಲಾಖೆ ಅನುಮತಿ ನೀಡಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ. ಯೋಜನೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

   ಇದನ್ನೂ ಓದಿ: ಬೆಂಗಳೂರು ಹನಿಟ್ರಾಪ್ ದಂಧೆ; ದುಡ್ಡು ಮಾಡಲು ಮಗಳನ್ನೇ ಬಳಸಿಕೊಂಡ ಅಪ್ಪ-ಅಮ್ಮ!

  ಏನಿದು ಮಹದಾಯಿ ಸಮಸ್ಯೆ?:
  ಮಹದಾಯಿ ನದಿ ನೀರು ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ  ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿ ನೀರನ್ನು ನಾಲೆಗಳ ಮುಖಾಂತರ ಸ್ವಲ್ಪ ಭಾಗವನ್ನು ತಿರುಗಿಸಿಕೊಂಡು ಕೆಲ ಜಿಲ್ಲೆಗಳಿಗೆ ಕುಡಿಯಲು ಬಳಕೆ ಮಾಡಿಕೊಳ್ಳುತ್ತೇವೆಂಬುದು ಕರ್ನಾಟಕದ ಒತ್ತಾಯ. ಆದರೆ, ಇದಕ್ಕೆ ಗೋವಾ ರಾಜ್ಯ ಒಪ್ಪುತ್ತಿಲ್ಲ. 2018ರ ಆಗಸ್ಟ್ ತಿಂಗಳಲ್ಲಿ ಮಹದಾಯಿ ನದಿ ನೀರು ವ್ಯಾಜ್ಯ ನ್ಯಾಯಮಂಡಳಿ ಈ ಸಮಸ್ಯೆಗೆ ಒಂದು ಪರಿಹಾರ ಒದಗಿಸಿತು. ಅದರಂತೆ ಮಹದಾಯಿ ನದಿ ನೀರನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ಹಂಚಿಕೆ ಮಾಡಿ ತೀರ್ಪು ನೀಡಿತು. ಅದರಂತೆ ಗೋವಾಗೆ 24 ಟಿಎಂಸಿ, ಕರ್ನಾಟಕಕ್ಕೆ 13.4 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 1.3 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತು. ಕರ್ನಾಟಕದ ಪಾಲಿಗೆ ಬಂದಿರುವ 13.5 ಟಿಎಂಸಿ ನೀರಿನ ಪೈಕಿ 5.5 ಟಿಎಂಸಿ ನೀರನ್ನು ಕುಡಿಯಲು ಬಳಕೆ ಮಾಡಬೇಕು. 4 ಟಿಎಂಸಿ ಅಡಿ ನೀರನ್ನು ವಿದ್ಯುತ್ ಯೋಜನೆಗೆ ಬಳಕೆ ಮಾಡಬಹುದು. ಕುಡಿಯುವ ನೀರಗೆ ಮಲಪ್ರಭ ಜಲಾಶಯದಿಂದ ಕಳಸಾ ಬಂಡೂರಿ ನಾಲೆಗಳ ಮೂಲಕ 5.5 ಟಿಎಂಸಿ ನೀರನ್ನು ಬರಪೀಡಿತ ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳಿಗೆ ಹರಿಸುವುದು ಯೋಜನೆಯ ಆಶಯ.

  ಇದನ್ನೂ ಓದಿ: ಮಹದಾಯಿ ಸಮಸ್ಯೆ ಕಗ್ಗಂಟಾಗಲು ಏನು ಕಾರಣ? ಸಿಎಂ, ರಾಜ್ಯಪಾಲರು ಮೀನ ಮೇಷ ಎಣಿಸುತ್ತಿರುವುದೇಕೆ?

  ನ್ಯಾಯಮಂಡಳಿ ನೀಡಿದ ಈ ಹಂಚಿಕೆ ನ್ಯಾಯವು ಅನುಷ್ಠಾನಕ್ಕೆ ಬರಬೇಕಾದರೆ ಕೇಂದ್ರ ಸರ್ಕಾರವು ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಆದರೆ, ಕಾರಣಾಂತರಗಳಿಂದ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶ್ ಮಾಡುತ್ತಿಲ್ಲ. ಇದು ಮಹದಾಯಿ ಹೋರಾಟಗಾರರನ್ನು ಹತಾಶೆಗೊಳಿಸಿದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಹೆಚ್​ಡಿಕೆ ನೇತೃತ್ವದ ಮೈತ್ರಿ ಸರ್ಕಾರಗಳು ಕೇಂದ್ರದ ಮೇಲೆ ಹೊಣೆ ಹಾಕಿ ಕೈಚೆಲ್ಲಿ ಕೂತಿದ್ದವು. ಆಗ ಯಡಿಯೂರಪ್ಪ ತಾವು ಅಧಿಕಾರಕ್ಕೆ ಬಂದರೆ ಕ್ಷಣಮಾತ್ರದಲ್ಲೇ ಮಹದಾಯಿ ಯೋಜನೆ ಸಮಸ್ಯೆಗೆ ಪರಿಹಾರ ಒದಗಿಸುತ್ತೇನೆಂದು ಅನೇಕ ಬಾರಿ ಹೇಳಿಕೊಂಡಿದ್ದರು. ಈಗ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ನ್ಯಾಯಮಂಡಳಿ ಕೊಟ್ಟಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಕರ್ನಾಟಕಕ್ಕೆ ಅವಕಾಶ ಸಿಗದಂತಾಗಿದೆ.

  (ವರದಿ: ಧರಣೀಶ್ ಬೂಕನಕೆರೆ)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
  First published: