Farmers Protest: ಕೇಂದ್ರ-ರಾಜ್ಯ ಸರ್ಕಾರಗಳು ತಮ್ಮ ರೈತ ವಿರೋಧಿ ನಿಲುವಿಗೆ ಪ್ರತಿಫಲ ಉಣ್ಣಲೇಬೇಕು; ಸಿದ್ದರಾಮಯ್ಯ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಟ್ರಾಕ್ಟರ್ ಪರೇಡ್‌ಗೆ ಸಂಬಂಧಿಸಿದಂತೆ ಅಹಿತಕರ ಘಟನೆಗಳು ನಡೆದರೆ ಅದರ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ-ಯಡಿಯೂರಪ್ಪ.

ಸಿದ್ದರಾಮಯ್ಯ-ಯಡಿಯೂರಪ್ಪ.

 • Share this:
  ಬೆಂಗಳೂರು (ಜನವರಿ 26); ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ 2 ತಿಂಗಳಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ದೇಶದ ಹಲವೆಡೆ ಕೇಂದ್ರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಆದರೆ, ಎರಡು ತಿಂಗಳಾದರೂ ತಮ್ಮ ಬೇಡಿಕೆಗಳು ಈಡೇರದ ಪರಿಣಾಮ ದೆಹಲಿ ಹೋರಾಟಗಾರರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್​ ರ‍್ಯಾಲಿಯನ್ನು ಆಯೋಜಿಸಿದ್ದರು. ಅಲ್ಲದೆ, ಕೆಂಪುಕೋಟೆಯನ್ನು ವಶಕ್ಕೆ ಪಡೆದು ರೈತ ಬಾವುಟ ಹಾರಿಸಿದ್ದಾರೆ. ಆದರೆ, ಈ ವೇಳೆ ಹೋರಾಟದ ನಡುವೆ ಪೊಲೀಸರು ಲಾಠಿಚಾರ್ಚ್​ ನಡೆಸಿ ಅಶ್ರುವಾಯು ಸಿಡಿಸಿದ್ದಾರೆ. ಪರಿಣಾಮ ಓರ್ವ ಮೃತಪಟ್ಟಿದ್ದರೆ, 20 ಜನ ಗಾಯಗೊಂಡಿದ್ದಾರೆ.  ಪ್ರಸ್ತುತ ಈ ಸುದ್ದಿ ವಿಶ್ವದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಿಗೆ ತನ್ನ ಅಭಿಪ್ರಾಯವನ್ನು ಹೊರಹಾಕಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ದೆಹಲಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯೇ ಹೊಣೆ" ಎಂದು ಕಿಡಿಕಾರಿದ್ದಾರೆ.  ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ದೆಹಲಿಯಲ್ಲಿ ನಡೆಯುತ್ತಿರುವ ರೈತರ ಟ್ರಾಕ್ಟರ್ ಪರೇಡ್‌ಗೆ ಸಂಬಂಧಿಸಿದಂತೆ ಅಹಿತಕರ ಘಟನೆಗಳು ನಡೆದರೆ ಅದರ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ.  ರೈತ ಹೋರಾಟಗಾರರ ಆಕ್ರೋಶ ಸ್ಪೋಟಗೊಳ್ಳಲು ಅವಕಾಶ ನೀಡದೆ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ರೈತ ವಿರೋಧಿ ಕಾನೂನುಗಳನ್ನು ವಾಪಸು ಪಡೆಯಬೇಕೆಂದು ಆಗ್ರಹಿಸುತ್ತೇನೆ" ಎಂದು ಒತ್ತಾಯಿಸಿದ್ದಾರೆ.  ಮತ್ತೊಂದು ಟ್ವೀಟ್​ನಲ್ಲಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರ ವಿರುದ್ಧವೂ ಕಿಡಿಕಾರಿರುವ ಅವರು, "ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ತನ್ನ ರೈತ ವಿರೋಧಿ ನಿಲುವಿಗೆ ತಕ್ಕ ಪ್ರತಿಫಲವನ್ನು ಉಣ್ಣಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
  Published by:MAshok Kumar
  First published: