ನೆರೆ ಬಗ್ಗೆ ಕೇಂದ್ರದ ನಿರ್ಲಕ್ಷ್ಯ; ಕೇಂದ್ರವನ್ನು ಖಂಡಿಸಿ ಕಾಂಗ್ರೆಸ್ ಬೃಹತ್ ಧರಣಿ; ಜೆಡಿಎಸ್​ನಿಂದಲೂ ಪ್ರತಿಭಟನೆ ಸಾಧ್ಯತೆ?

ಒಂದೆಡೆ ಬರ ಮತ್ತೊಂದೆಡೆ ಪ್ರವಾಹ ಉತ್ತರ ಕರ್ನಾಟಕದ ಜನರ ಬದುಕನ್ನು ಅಕ್ಷರಶಃ ಕಸಿದಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ಕುರಿತು ಗಮನ ಹರಿಸುತ್ತಿಲ್ಲ. ಅಲ್ಲದೆ, ಈಶ್ವರಪ್ಪನಂತವರು ಸಾರ್ವಜನಿಕ ಜೀವನದಲ್ಲೇ ಬದುಕಲು ಅನರ್ಹರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

news18-kannada
Updated:September 18, 2019, 3:55 PM IST
ನೆರೆ ಬಗ್ಗೆ ಕೇಂದ್ರದ ನಿರ್ಲಕ್ಷ್ಯ; ಕೇಂದ್ರವನ್ನು ಖಂಡಿಸಿ ಕಾಂಗ್ರೆಸ್ ಬೃಹತ್ ಧರಣಿ; ಜೆಡಿಎಸ್​ನಿಂದಲೂ ಪ್ರತಿಭಟನೆ ಸಾಧ್ಯತೆ?
ಬಿಜೆಪಿ ವಿರುದ್ಧ ಪ್ರತಿಭಟನಾ ನಿತರ ಕಾಂಗ್ರೆಸ್​ ನಾಯಕರು.
  • Share this:
ಬೆಂಗಳೂರು (ಸೆಪ್ಟೆಂಬರ್.18); ಉತ್ತರ ಕರ್ನಾಟಕ ಭಾಗ ತೀವ್ರ ನೆರೆಗೆ ತುತ್ತಾಗಿ ಸುಮಾರು ಒಂದು ತಿಂಗಳೇ ಕಳೆದಿದೆ. ಈ ಪ್ರವಾಹದಲ್ಲಿ ಸುಮಾರು 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ, ಸಾವಿರಾರು ಜನರು ಮನೆ ಮಠ ಹಾಗೂ ಬದುಕನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ, ಈ ವರೆಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಪರಿಣಾಮ ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಪಿಸಲೂ ಸಹ ರಾಜ್ಯ ಸರ್ಕಾರದ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ನೆರೆ ಪೀಡಿತರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸದ ಹಾಗೂ ರೈತರ ಸಾಲ ಮನ್ನಾ ಮಾಡದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಇಂದು ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ನಡೆಸಿದೆ. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬೃಹತ್ ಧರಣಿ ಸತ್ಯಾಗ್ರಹವನ್ನು ನಡೆಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ಧ ಟೀಕಾಪ್ರಹಾರವನ್ನೇ ನಡೆಸಿದ್ದಾರೆ.

ಪ್ರತಿಭಟನಾ ಧರಣಿ ನೇತೃತ್ವವಹಿಸಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ನೆರೆ ಸಂತ್ರಸ್ಥರ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ರಾಜ್ಯ ಸರ್ಕಾರ 10 ಸಾವಿರ ರೂ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದಾರೆ ಆದರೆ, ಈವರೆಗೆ ಹಣ ಬಿಡುಗಡೆಯಾಗಿಲ್ಲ. ಗಂಜಿ ಕೇಂದ್ರ ಮುಚ್ಚಲಾಗಿದೆ. ಈವರೆಗೆ ಈ ಭಾಗದ ಶಾಲಾ-ಕಾಲೇಜುಗಳನ್ನು ತೆರೆದಿಲ್ಲ. ಪರಿಣಾಮ ಅಲ್ಲಿನ ಜನ ಈಗಲೂ ನೀರಿನಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ಜಿ. ಪರಮೇಶ್ವರ್ ನೇತೃತ್ವದಲ್ಲಿ ದೆಹಲಿಯಲ್ಲಿ ಮೂಲ ಕಾಂಗ್ರೆಸ್ಸಿಗರಿಂದ ರಹಸ್ಯ ಸಭೆ? ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿದ್ದರಾಮಯ್ಯ ಬಲ ಕುಂದಿಸಲು ತಂತ್ರ?

ಪಾತ್ರ ಪಗಡೆಗಳು ಪುಸ್ತಕಗಳು ಚರಾಸ್ಥಿಗಳು ಸಂಪೂರ್ಣ ನಾಶವಾಗಿದೆ. ಇಲ್ಲಿ ಹಲವಾರು ಅವಿಭಕ್ತ ಕುಟುಂಬಗಳಿವೆ ಆದರೆ, ಇವೆಲ್ಲವನ್ನೂ ಒಂದು ಕುಟುಂಬ ಒಂದು ಮನೆ ಎಂದು ಪರಿಗಣಿಸಲಾಗಿದೆ. ಇವರಿಗೆ ಈವರೆಗೆ ಯಾವುದೇ ಸಹಾಯ ಧನ ಸಿಕ್ಕಿಲ್ಲ. ಕೇಂದ್ರದಿಂದ ಒಂದು ರುಪಾಯಿ ಹಣ ಬಿಡುಗಡೆ ಆಗಿಲ್ಲ. ಕೇಂದ್ರ ನಾಯಕರು ಬಂದ್ರು ಹೋದ್ರು ಆದರೂ ಪರಿಹಾರ ಹಣ ಬಂದಿಲ್ಲ. ಇನ್ನೂ ಈ ಕುರಿತು ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಎದುರು ತುಟಿ ಬಿಚ್ಚುತ್ತಿಲ್ಲ.

ಮತ್ತೊಂದೆಡೆ ಬೀಕರ ಬರದಿಂದ ಕುಡಿಯಲೂ ಸಹ ನೀರಿಲ್ಲದ ಪರಿಸ್ಥಿತಿ ಇದೆ ಅಲ್ಲೂ ಕೂಡ ಪರಿಹಾರ ಕಾರ್ಯ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಈಶ್ವರಪ್ಪ ಕುರಿತು ಕಿಡಿಕಾರಿರುವ ಅವರು, “ಸಾರ್ವಜನಿಕ ಜೀವನದಲ್ಲಿ ಬದುಕಲಿಕ್ಕೇ ಅವರು ನಾಲಾಯಕ್” ಎಂದು ಅಭಿಪ್ರಾಯಪಟ್ಟಿದ್ದಾರೆ.

ನೆರೆ ಪರಿಹಾರಕ್ಕಾಗಿ ಜೆಡಿಎಸ್ ಸಹ ಹೋರಾಟ ರೂಪಿಸಲಿದೆ; ಹೆಚ್.ಡಿ. ದೇವೇಗೌಡಕೇಂದ್ರದಿಂದ ಈವರೆಗೆ ನೆರೆ ಪರಿಹಾರ ಬರದಿದ್ದನ್ನು ಖಂಡಿಸಿ ಇಂದು ಕಾಂಗ್ರೆಸ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಧರಣಿ ನಡೆಸಿದೆ. ಇದರಿಂದ ಎಚ್ಚೆತ್ತಿರುವ ಜೆಡಿಎಸ್ ರಾಜ್ಯ ಘಟಕವೂ ಸಹ ಪ್ರತಿಭಟನೆಗೆ ಮುಂದಾಗಿದೆ.

ಈ ಕುರಿತು ತಿಳಿಸಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, “ನಾವು ಹೋರಾಟ ಮಾಡೋದ್ರಲ್ಲಿ ಹಿಂದೆ ಬಿಳೊಲ್ಲ. ನಮ್ಮ ಪಕ್ಷದ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ. ಆ ನಂತರವೂ ನೆರೆ ಪರಿಹಾರ ಸಿಗದಿದ್ದಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಅಂತ ತೀರ್ಮಾನ ಮಾಡ್ತೀವಿ. ಹೋರಾಟದ ವಿಚಾರದಲ್ಲಿ ಯಾವುದೇ ದಾಕ್ಷಣ್ಯ ನನಗೆ ಇಲ್ಲ.ನಾನು ಹೋರಾಟ ಮಾಡೋದನ್ನ ಯಾರಿಂದ ಕಲಿಯಬೇಕಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಸಂಜೆಯೊಳಗೆ ಸಂಚಾರಿ ನಿಯಮ ದಂಡ ಪ್ರಮಾಣ ಇಳಿಕೆಗೆ ಆದೇಶ; ಸಚಿವ ಲಕ್ಷ್ಮಣ ಸವದಿ

First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading