ಮೂಲಭೂತ ಸೌಕರ್ಯ‌ ಕಲ್ಪಿಸುವಂತೆ ಪ್ರಧಾನಿಗೆ ಸಿಡಿ ರವಾನೆ ಚಳವಳಿ: ರಾಜಕೀಯ ಪ್ರೇರಿತ ನಾಟಕ ಎಂದ ಸ್ಥಳೀಯ ಶಾಸಕ

ರಸ್ತೆ ಹಾಗೂ ಸೇತುವೆಯನ್ನು ನಿರ್ಮಿಸುವಂತೆ ಕುಗ್ರಾಮವಾದ ಕಮಿಲದ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಕಾಡಿ ಬೇಡಿದರೂ, ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ

ಗ್ರಾಮಸ್ಥರು

ಗ್ರಾಮಸ್ಥರು

  • Share this:
ಪುತ್ತೂರು(ನವೆಂಬರ್​ 14): ಕಳೆದ 30 ವರ್ಷಗಳಿಂದ ಸಮರ್ಪಕ ರಸ್ತೆ ಸಂಪರ್ಕ ಹಾಗೂ ಸೇತುವೆ ಸಂಪರ್ಕವಿಲ್ಲದೆ ಕಂಗಾಲಾಗಿದ್ದ ಗ್ರಾಮದ ಜನರೀಗ ತಮ್ಮ ಸಮಸ್ಯೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತರಲು ಮುಂದಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ನಿವಾಸಿಗಳು ಇದೀಗ ಪ್ರಧಾನಿಗೆ ಸಿಡಿ ರವಾನೆ ಎನ್ನುವ ವಿನೂತನ ಪ್ರತಿಭಟನೆಗೆ ಗ್ರಾಮದ ಜನ ಮುಂದಾಗಿದ್ದಾರೆ. ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಭಾಗದ ಜನರ ಅತ್ಯಂತ ಅವಶ್ಯಕತೆಯ ರಸ್ತೆಯು ದುರಸ್ತಿಯಾಗದೆ 30 ವರ್ಷಗಳು ಕಳೆದಿವೆ. ಕುಗ್ರಾಮವೆಂದು ಗುರುತಿಸಿಕೊಂಡಿರುವ ಈ ಗ್ರಾಮದ ಜನ ತಮ್ಮ ಪ್ರಮುಖ ಅವಶ್ಯಕತೆಗಳಾದ ಸೇತುವೆ, ರಸ್ತೆ ದುರಸ್ತಿ ಮುಂತಾದ ಮೂಲಭೂತ ಸಮಸ್ಯೆಗಳನ್ನು ಒದಗಿಸುವಂತೆ ಸಲ್ಲಿಸಿದ ಮನವಿಗೆ ಲೆಕ್ಕವೇ ಇಲ್ಲ. ತಮ್ಮ ಮನವಿಗೆ ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದಲೂ ಸ್ಪಂದನೆ ದೊರಕದ ಹಿನ್ನಲೆಯಲ್ಲಿ ಇದೀಗ ಈ ಗ್ರಾಮದ ಜನ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.

ಗ್ರಾಮದ  ರಸ್ತೆಯ ದುರಾವಸ್ಥೆ ಹಾಗೂ ಸೇತುವೆಯ ತೂಗುಯ್ಯಾಲೆಯ ವಿಡಿಯೋ ಚಿತ್ರೀಕರಣದ ಸಿಡಿ ತಯಾರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಳುಹಿಸಲು ಇಲ್ಲಿನ ಜನ ಆರಂಭಿಸಿದ್ದಾರೆ. ಈಗಾಗಲೇ 50 ಕ್ಕೂ ಮಿಕ್ಕಿದ ವಿಡಿಯೋ ಸಿಡಿಗಳನ್ನು ಗ್ರಾಮಸ್ಥರು ಪ್ರಧಾನಿ ಕಛೇರಿಗೆ ಕಳುಹಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಸಿಡಿಗಳು ಪ್ರಧಾನಿ ಕಛೇರಿಗೆ ಸದ್ಯದಲ್ಲೇ ತಲುಪಲಿದೆ.

ರಸ್ತೆ ಹಾಗೂ ಸೇತುವೆಯನ್ನು ನಿರ್ಮಿಸುವಂತೆ ಕುಗ್ರಾಮವಾದ ಕಮಿಲದ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಕಾಡಿ ಬೇಡಿದರೂ, ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ : ಬಿಹಾರ ಸರ್ಕಾರ ರಚನೆ ಬಳಿಕ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರ ಜತೆ ಚರ್ಚೆ; ಸಿಎಂ ಬಿಎಸ್​ ಯಡಿಯೂರಪ್ಪ

ಈ ನಡುವೆ ಸುಳ್ಯ ಶಾಸಕ ಎಸ್. ಅಂಗಾರ ಗ್ರಾಮಸ್ಥರ ಈ ಪ್ರತಿಭಟನೆ ಹಾಗೂ ಹೋರಾಟ ರಾಜಕೀಯ ಪ್ರೇರಿತ ಎನ್ನುವ ಆರೋಪವನ್ನೂ ಮಾಡಿದ್ದಾರೆ. ಬಳ್ಪ-ಕಮಿಲ ರಸ್ತೆಯ ದುರಸ್ಥಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೂಡಲೇ ರಸ್ತೆ ದುರಸ್ಥಿ ಆರಂಭಗೊಳ್ಳಲಿದೆ. ಈ ನಡುವೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ತಾವೇ ಈ ರಸ್ತೆಯ ದುರಸ್ಥಿಗೆ ಕಾರಣ ಎನ್ನುವುದನ್ನು ಜನರ ಮುಂದೆ ಬಿಂಬಿಸುವುದಕ್ಕೋಸ್ಕರ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಶಾಸಕರು ಆರೋಪಿಸಿದ್ದಾರೆ.

ಪ್ರಧಾನಿಮಂತ್ರಿ ಕಛೇರಿಗೆ ಮನವಿ ಬರೆದರೂ, ಸ್ಥಳೀಯವಾಗಿ ಅನುದಾನ ಮೀಸಲಿರಿಸುವ ಹಾಗೂ ಇತರ ಕೆಲಸಗಳು ನಡೆಯಬೇಕಿದ್ದು, ಈ ರೀತಿಯ ರಾಜಕೀಯ ಪ್ರೇರಿತ ನಾಟಕವನ್ನು ನಿಲ್ಲಿಸಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Published by:G Hareeshkumar
First published: