ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಎಸ್ಐಟಿ ತಂಡ ಸಿಡಿ ಯುವತಿಯ ಪೋಷಕರು ಹಾಗೂ ಸಹೋದರನನ್ನು ಬೆಂಗಳೂರಿಗೆ ಕರೆಸಿ, ಸುದೀರ್ಘ ವಿಚಾರಣೆ ನಡೆಸಿದೆ. ಟೆಕ್ನಿಕಲ್ ಸೆಲ್ನಲ್ಲಿ ವಿಚಾರಣೆ ಮುಗಿದ ಬಳಿಕ ಯುವತಿ ಪೋಷಕರು ಸುದ್ದಿಗೋಷ್ಠಿ ನಡೆಸಿ, ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವತಿ ತಂದೆ, ದಯಮಾಡಿ ಮಾಧ್ಯಮದವರು ನಾವು ಏನ್ ಹೇಳ್ತಿವಿ ಕೇಳಿ. ಯಾವ ತರ ರಾಜಕೀಯ ಮಾಡ್ತಾ ಇದ್ದಾರೆ ನೋಡಿ. ಒಬ್ಬ ಎಸ್ಟಿ ಹೆಣ್ಣು ಮಗಳು ಇಟ್ಕೊಂಡು ಯಾವ ತರ ರಾಜಕೀಯ ಮಾಡ್ತಾರೆ ಎಂಬುದಕ್ಕೆ ಈ ಪ್ರಕರಣ ಒಂದು ಉದಾಹರಣೆ. ಒಬ್ಬ ಹೆಣ್ಣು ಮಗಳು ಇಟ್ಟುಕೊಂಡು ಯಾಕೆ ಹೀಗೆ ಹೊಲಸು ರಾಜಕೀಯ ಮಾಡ್ತಿದ್ದಿರಾ ಎಂದು ಹೇಳಿದರು.
ಬಳಿಕ ಸಹೋದರ ಮಾತನಾಡಿ,
ನಾನು ಹೇಳ್ತೀನಿ, ಯಾಕ ನಮ್ಮ ಅಕ್ಕನ ಇಟ್ಕೊಂಡು ರಾಜಕೀಯ ಮಾಡ್ತೀರಾ. ದಯವಿಟ್ಟು ನಮ್ಮ ಅಕ್ಕನನ್ನು ವಾಪಸ್ ಕೊಟ್ಟು ಬಿಡಿ. ನಮ್ಮ ಅಕ್ಕನ ಇರಿಸಿಕೊಂಡು ಈ ತರ ಮಾಡ್ತಿದ್ದಾರೆ. ನಮಗೆ ಯಾವುದೇ ಬೆದರಿಕೆ ಇಲ್ಲ. ನಮಗೋಸ್ಕರ ನಮ್ಮ ಜೊತೆ ಪೊಲೀಸ್ ಡಿಪಾರ್ಟ್ಮೆಂಟ್ ಇದೆ ಎಂದು ಹೇಳಿದರು.
ಇದನ್ನು ಓದಿ: ಕೊನೆಗೂ ಪ್ರತ್ಯಕ್ಷರಾದ ಜಾರಕಿಹೊಳಿ ಸಿಡಿ ಯುವತಿಯ ಪೋಷಕರು; ಎಸ್ಐಟಿಯಿಂದ ವಿಚಾರಣೆ
ನಾನು ನಮ್ಮ ಅಕ್ಕನ ಜೊತೆ ಮಾತನಾಡುವಾಗ ಡಿ.ಕೆ.ಶಿವಕುಮಾರ್ ಅವರ ಮನೆಗೆ ಹೋಗಿದ್ದಾಗಿ ಆಕೆ ಹೇಳಿದ್ದಳು. ಅವರಿಂದ ಹಣ ಪಡೆದು, ಗೋವಾಗೆ ಅವರೇ ಕಳಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಳು. ಇದಕ್ಕೆ ನಾನು ಸ್ವಾತಿ ಇವೆಲ್ಲಾ ನಮಗೆ ಯಾಕೆ ಬೇಕು. ಮನೆಗೆ ಬಂದುಬಿಡು ಎಂದು ಹೇಳಿದೆ. ಅದಕ್ಕೆ ಅವಳು, ಇಲ್ಲ ಚಿನ್ನಿ, ಡಿ.ಕೆ.ಶಿವಕುಮಾರ್ ಅವರೇ ನಮ್ಮನ್ನು ಸೇಫ್ ಮಾಡುತ್ತಿದ್ದಾರೆ ಎಂದು ಹೇಳಿದ್ದಳು.
ಡಿ.ಕೆ. ಶಿವಕುಮಾರ್ ಅವರೇ ಇದೆಲ್ಲವನ್ನೂ ಮಾಡಿಸಿರುವುದು. ದಯವಿಟ್ಟು ನಮ್ಮ ಅಕ್ಕನನ್ನು ಕಳುಹಿಸಿಕೊಟ್ಟುಬಿಡಿ ಎಂದು ಡಿ.ಕೆ. ಶಿವಕುಮಾರ್ ಅವರ ಮೇಲೆ ನೇರ ಆರೋಪ ಮಾಡಿದರು.
ಈ ಮಧ್ಯೆ, ಕಣ್ಣೀರು ಹಾಕುತ್ತಾ ಮಾತನಾಡಿದ ಯುವತಿ ತಾಯಿ, ಸ್ವಾತಿ ಎಲ್ಲಿದ್ದರೂ ಬಂದುಬಿಡು. ನಮ್ಮ ಮಗಳನ್ನು ಡಿ.ಕೆ.ಶಿವಕುಮಾರ್ ಅವರೇ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ ಯುವತಿ ಪೋಷಕರು ನೇರವಾಗಿ ಬೆಳಗಾವಿಗೆ ಪ್ರಯಾಣ ಬೆಳೆಸಿದರು. ಬೆಳಗಾವಿವರೆಗೂ ಯುವತಿ ಪೋಷಕರಿಗೆ ಪೊಲೀಸರು ಎಸ್ಕಾರ್ಟ್ ಕೊಡಲಿದ್ದಾರೆ. ನೈಸ್ ರಸ್ತೆ, ತುಮಕೂರು ರಸ್ತೆ ಮೂಲಕ ಯುವತಿ ಪೋಷಕರು ಬೆಳಗಾವಿಗೆ ತೆರಳುತ್ತಿದ್ದಾರೆ. ದಾರಿಯುದ್ಧಕ್ಕೂ ಎಸ್ಐಟಿ ಅಧಿಕಾರಿಗಳು ಅವರಿಗೆ ಎಸ್ಕಾರ್ಟ್ ಮಾಡಲಿದ್ದಾರೆ. ಇನ್ಸ್ಪೆಕ್ಟರ್ ಬೊಳೆತ್ತಿನ್ ನೇತೃತ್ವದಲ್ಲಿ ಎಸ್ಕಾರ್ಟ್ ನೀಡಲಾಗುತ್ತಿದೆ.
ಯುವತಿ ಪೋಷಕರು ಸುದ್ದಿಗೋಷ್ಠಿ ಮುಗಿದ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ಯುವತಿ ಪೋಷಕರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ