ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ವಿಷಯವಾಗಿ ಇಂದು ಟ್ವೀಟ್ ಮಾಡಿರುವ ಜೆಡಿಎಸ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರನ್ನು ಉಲ್ಲೇಖಿಸಿ ಈ ಪ್ರಕರಣ ಹನಿಟ್ರ್ಯಾಪ್ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ. ಅಲ್ಲದೇ ಪ್ರಕರಣ ಸಂಬಂಧ ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಹೆಸರು ಕೇಳಿಬರುವ ಮೂಲಕ ಪ್ರಕರಣ ಈಗ ಹನಿಟ್ರ್ಯಾಪ್ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ರಾಷ್ಟ್ರದ ಎದುರು ನಾಚಿಕೆ ಸ್ಥಿತಿಯಲ್ಲಿ ರಾಜ್ಯ ನಿಂತಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿ.ಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಪ್ರಕರಣದಲ್ಲಿ @DKShivakumar ಮತ್ತು @siddaramaiah ಹೆಸರು ಕೇಳಿಬರುವ ಮೂಲಕ ಪ್ರಕರಣ ಈಗ 'ಹನಿಟ್ರ್ಯಾಪ್' ಸ್ವರೂಪ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ರಾಷ್ಟ್ರದ ಎದುರು ನಾಚಿಕೆ ಪಡುವ ಸ್ಥಿತಿಯಲ್ಲಿ ರಾಜ್ಯ ನಿಂತಿದೆ.
ರಾತ್ರಿ ಒಂದು ಆಡಿಯೋ ಬಿಡುಗಡೆಯಾಗುವುದು, ಬೆಳಗ್ಗೆ ಅದಕ್ಕೊಂದು ಸ್ಪಷ್ಟನೆಯ ವಿಡಿಯೋ ಬಿಡುಗಡೆಯಾಗುವುದು, ಇವೆಲ್ಲವನ್ನೂ ಗಮನಿಸುತ್ತಿದ್ದರೆ ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ ಆಕೆಯನ್ನು ಮುಂದಿಟ್ಟುಕೊಂಡು ಯಾರೋ ಆಟವಾಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಜೆಡಿಎಸ್ ಹೇಳಿದೆ.
ಇದನ್ನು ಓದಿ: ಕೊನೆಗೂ ಪ್ರತ್ಯಕ್ಷರಾದ ಜಾರಕಿಹೊಳಿ ಸಿಡಿ ಯುವತಿಯ ಪೋಷಕರು; ಎಸ್ಐಟಿಯಿಂದ ವಿಚಾರಣೆ
ಪ್ರಕರಣವನ್ನು ಅದರ ಪಾಡಿಗೆ ಬಿಟ್ಟು ಆಗುವ ಬೆಳವಣಿಗೆಯನ್ನು ರಾಷ್ಟ್ರ ನೋಡಿ ಮನರಂಜನೆ ಪಡೆಯುವಂತೆ ಮಾಡುವುದು ರಾಜ್ಯಕ್ಕೆ ನಮ್ಮ ಪೊಲೀಸರಿಗೆ ಮಾಡುವ ಅತೀದೊಡ್ಡ ಅಪಮಾನವಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರು ದಿಟ್ಟತನ ಮೆರೆಯುವುದು ಅತ್ಯಗತ್ಯ. ಯಾವುದೇ ರಾಜಕೀಯ ಒತ್ತಡಗಳನ್ನೂ ಲೆಕ್ಕಿಸದೇ ತನಿಖೆ ನಡೆಸಿ ಅಸಲಿ ಸತ್ಯ ಬಯಲಿಗೆ ಎಳೆಯಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ