ಹುಬ್ಬಳ್ಳಿ : ಬೆಂಗಳೂರಿನಲ್ಲಿ (Bengaluru) ಬಿಜೆಪಿ ಶಾಸಕ (BJP MLA) ಮಾಡಾಳ್ ವಿರೂಪಾಕ್ಷಪ್ಪ ( Madalu Virupakshappa) ಹಾಗೂ ಪುತ್ರ ಮಾಡಾಳ್ ಪ್ರಶಾಂತ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವುದು ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಉದ್ಯಮಿಯೊಬ್ಬರ ಮನೆ ಹಾಗೂ ಕಚೇರಿಗಳ ಮೇಲೆ ಸಿಸಿಬಿ (CCB) ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 3 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಡಿವೈಎಸ್ಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಉದ್ಯಮಿ ರಮೇಶ್ ಬೊಣಗೇರಿ ಎಂಬುವವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕೋಟ್ಯಂತರ ನಗದು ಪತ್ತೆಯಾಗಿದೆ.
ಸಿಸಿಬಿ ಅಧಿಕಾರಿಗಳು ಆಸ್ತಿ-ಪಾಸ್ತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ಹೆಚ್ಚಿನ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಈ ಕುರಿತಂತೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಮೇಶ್ ಬೊಣಗೇರಿ ಕೃಷಿ ಇಲಾಖೆಗೆ ರಾಸಾಯನಿಕ ಸರಬರಾಜು ಮಾಡುವ ಉದ್ಯಮಿಯಾಗಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಾಸಕನ ಪುತ್ರ
ಇತ್ತೀಚೆಗೆ ಬೆಂಗಳೂರಿನಲ್ಲಿ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ, BWSSB ಚೀಫ್ ಅಕೌಂಟೆಂಟ್ ಪ್ರಶಾಂತ್ ಅವರು 40 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಇವರು ಟೆಂಡರ್ ವಿಚಾರವಾಗಿ ಸುಮಾರು 80 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು 40 ಲಕ್ಷ ಪಡೆಯುವ ವೇಳೆ ವೇಳೆ ತಮ್ಮ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಇದನ್ನೂ ಓದಿ:Lokayukta Raid: ಬಿಜೆಪಿ ಶಾಸಕ ಪುತ್ರ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಸಿಕ್ಕ ಡೈರಿ ರಹಸ್ಯ!
ಕೆಲವು ದಾಖಲಾತಿಗಳು, 6.2 ಕೋಟಿ ನಗದನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾತ್ರಿಯಿಡೀ ಪ್ರಶಾಂತ್ ಮಾಡಾಳ್ ಮತ್ತು ನಾಲ್ವರ ವಿಚಾರಣೆ ನಡೆಸಲಾಗಿತ್ತು. ಇದರ ಜೊತೆಗೆ ಕಚೇರಿಯಲ್ಲೂ 2 ಕೋಟಿ ನಗದು ಸೇರಿದಂತೆ ಒಟ್ಟು 8 ಕೋಟಿ ಕ್ಯಾಶ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಇನ್ನು ಮನೆಯಲ್ಲಿ ಚಿನ್ನಾಭರಣ ಮತ್ತು ಆಸ್ತಿಪತ್ರ ಎಷ್ಟೆಷ್ಟು ಸಿಕ್ಕಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.
ವಿಶೇಷ ನ್ಯಾಯಾಲಯಕ್ಕೆ ಕೇಸ್ ವರ್ಗಾವಣೆ
ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಲಂಚಾವತಾರದ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಲಂಚ ಪಡೆಯುವ ವೇಳೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಮಾಡಾಳು ಪುತ್ರ ಪ್ರಶಾಂತ್‌ನನ್ನು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರ ಮೇಲೂ ಆರೋಪ ಇರುವುದರಿಂದ ಕೇಸ್‌ನ ವಿಚಾರಣೆಯನ್ನು ಲೋಕಾಯುಕ್ತ ಕೋರ್ಟ್‌ನಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಮಾಡಾಳು ಸೇರಿ 6 ಮಂದಿ ಮೇಲೆ ಎಫ್ಐಆರ್
ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೇಯಸ್ ಕಶ್ಯಪ್ ಕೆಮಿಕಲ್ ಕಂಪನಿಯ ಪಾಲುದಾರ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿ ಆರು ಜನರ ವಿರುದ್ದ ಎಫ್ಐಆರ್ ದಾಳಲಾಗಿದೆ. ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ಎ1 ಆರೋಪಿ, ಪುತ್ರ ಪ್ರಶಾಂತ ಮಾಡಾಳ್, ಬಿಡಬ್ಯೂ ಎಸ್ ಎಸ್ ಬಿ ಸಿಇಓ A2, ಕಚೇರಿ ಲೆಕ್ಕಾಧಿಕಾರಿ ಸುರೇಂದ್ರ A3, ಪ್ರಶಾಂತ ಮಾಡಾಳ್ ಸಂಬಂಧಿ ಸಿದ್ದೇಶ A4 ಹಾಗೂ ಕರ್ನಾಟಕ ಅರೋಮಸ್ ಕಂಪನಿಯ ಸಿಬ್ಬಂದಿ ಆಲ್ಬರ್ಟ್ ನಿಕೋಲಾಸ್ A5 ಹಾಗೂ ಗಂಗಾಧರ್ A6 ಆರೋಪಿಯಾಗಿದ್ದಾರೆ. ದಾಳಿಯಲ್ಲಿ ಒಟ್ಟು 8 ಕೋಟಿ12 ಲಕ್ಷ 30 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ