ಸ್ಯಾಂಡಲ್ವುಡ್ ಡ್ರಗ್ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದೇ ಪ್ರಕರಣದಲ್ಲಿ ನಟಿ ರಾಗಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸೇರಿದಂತೆ ಆರು ಮಂದಿ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ಹಲವು ದಿನಗಳಿಂದ ಸಂಜನಾ ಹಾಗೂ ರಾಗಿಣಿ ಅವರ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಿವಪ್ರಕಾಶ್ ತಲೆಮರೆಸಿಕೊಂಡಿದ್ದಾನೆ. ಹೀಗಿರುವಾಗಲೇ ಸಿಸಿಬಿ ಪೊಲೀಸರು ಬಂಧಿತರ ಆಪ್ತರು ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಈಗಲೂ ಸಹ ಸಂಜನಾ ಗಲ್ರಾನಿ ಆವರ ಆಪ್ತನೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಜೋಯೆಬ್ ಎಂದು ಗುರುತಿಸಲಾಗಿದೆ. ಈತನ ಬಂಧನದಿಂದ ನಟಿ ಸಂಜನಾ ಗಲ್ರಾನಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸಂಜನಾ ಗಲ್ರಾನಿ ಆಪ್ತ ಎಂದು ಹೇಳಲಾಗುತ್ತಿರುವ ಜೋಯೆಬ್ ದೂಪನಹಳ್ಳಿಯ ಬಸ್ ನಿಲ್ದಾಣದ ಬಳಿ ಮಾದಕ ವಸ್ತುವನ್ನು ತೆಗೆದುಕೊಳ್ಳುವ ವ್ಯವಹಾರ ನಡೆಸುತ್ತಿದ್ದ ಎನ್ನಲಾಗುತ್ತಿದ್ದು, ಈ ಪ್ರದೇಶ ಸಂಜನಾ ಅವರ ಮನೆಗೆ ಬಹಳ ಹತ್ತಿರವಾಗಿದೆ. ಇನ್ನು ಜೋಯೆಬ್ ಮೂಲಕ ಸಂಜನಾ ಡ್ರಗ್ಸ್ ತರಿಸಿಕೊಂಡಿರುವ ಸಾಧ್ಯತೆ ಸಹ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅನ್ನದಾತನ ಬಗ್ಗೆ ಕಾಳಜಿ ಇರುವ ದರ್ಶನ್ರನ್ನು ಹೊಗಳಿದ ನಿರ್ದೇಶಕ ಪವನ್ ಒಡೆಯರ್..!
ಬೆಂಗಳೂರು ಸೇರಿ ಹಲವೆಡೆ ಡ್ರಗ್ಸ್ ಸಪ್ಲೈ ಲಿಂಕ್ ಹೊಂದಿರುವ ಓರ್ವ ವ್ಯಕ್ತಿಯ ಮಾಹಿತಿ ಸಂಗ್ರಹ ಮಾಡಿರೋ ಸಿಸಿಬಿ ಪೊಲೀಸರು ಗೌಪ್ಯವಾಗಿ ಆತನ ಬೆನ್ನು ಬಿದ್ದಿದ್ದಾರೆ. ಆ ಬಿಗ್ ಫಿಶ್ ಬೆಂಗಳೂರು-ಮಂಗಳೂರು, ಬೆಂಗಳೂರು-ಮುಂಬೈ, ಬೆಂಗಳೂರು ಗೋವಾ ಸೇರಿದಂತೆ ಹಲವೆಡೆ ಡ್ರಗ್ ಸಪ್ಲೈ ಮಾಡಿರೋ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಿದೆ. ಖಾಕಿ ಕಣ್ಣು ತಪ್ಪಿಸಿ ಲೀಲಾಜಾಲವಾಗಿ ಡ್ರಗ್ ಸಪ್ಲೈ ಮಾಡಿರೋ ಆತ ಹಲವು ಸೆಲೆಬ್ರಿಟಿಗಳ ಜೊತೆ ಲಿಂಕ್ ಹೊಂದಿದ ಎನ್ನಲಾಗಿದೆ. ಇದೀಗ ಆ ಬಿಗ್ ಫಿಶ್ ಅನ್ನ ಬಲೆಗೆ ಬೀಳಿಸಲು ಖಾಕಿ ಖೆಡ್ಡ ರೆಡಿ ಮಾಡಿದ್ದಾರಂತೆ. ಸಿಸಿಬಿ ಪೊಲೀಸರು ಈವರೆಗೆ ಬಂಧಿಸಿರುವ ಡ್ರಗ್ ಪೆಡ್ಲರ್ ಗಳು ಕೊಟ್ಟ ಮಾಹಿತಿ ಮೇರೆಗೆ ಈ ಕಾರ್ಯಾಚರಣೆಯನ್ನ ನಡೆಸ್ತಿದ್ದಾರಂತೆ.
ನಿನ್ನೆಯಷ್ಟೆ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಕೇಸ್ ಸಂಬಂಧ ವಾದ-ಪ್ರತಿವಾದ ಆಲಿಸಿದ ಎನ್ಡಿಪಿಎಸ್ ನ್ಯಾಯಾಲಯ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಪ್ರಕಟಿಸಿತ್ತು. ಆದ್ದರಿಂದ ಇಬ್ಬರೂ ನಟಿಯರಿಗೂ ಇನ್ನೊಂದಷ್ಟು ದಿನ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ. ಸಿಸಿಬಿ ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿದೆ. ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ