ಐದು ದಿನಗಳ ಹಿಂದೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದರು. ಈ ವೇಳೆ ಕೆಲವು ರೌಡಿಗಳು ಪರಾರಿಯಾಗಿದ್ದಾರೆ ಎಂದು ಸಿಸಿಬಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತ್ತು. ಅದರಲ್ಲಿ ರೌಡಿ ಸೈಲೆಂಟ್ ಸುನೀಲ್ ಹೆಸರು ಸಹ ಸೇರಿತ್ತು. ಆದ್ರೆ ಭಾನುವಾರ (ನವೆಂಬರ್ 27) ಇದೇ ಸೈಲೆಂಟ್ ಸುನೀಲ್ ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರ ಅಯೋಜನೆ ಮಾಡಿದ್ದ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರು (BJP Leaders) ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಪರಾರಿಯಾಗಿದ್ದ ಸೈಲೆಂಟ್ ಸುನೀಲ್ (Silent Sunil), ಬಹಿರಂಗವಾಗಿ ಕಾಣಿಸಿಕೊಂಡ್ರೂ ಸಿಸಿಬಿ ಯಾವುದೇ ಕ್ರಮಕ್ಕೆ ಮುಂದಾಗಿರೋದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದ್ದರು. ಇದೀಗ ಎಚ್ಚೆತ್ತಿರುವ ಸಿಸಿಬಿ ಸೈಲೆಂಟ್ ಸುನೀಲ್ನನ್ನು ವಶಕ್ಕೆ ಪಡೆಯಲು ಸೂಚನೆ ನೀಡಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಸಿಬಿ ಮುಖ್ಯಸ್ಥ ಡಾ.ಶರಣಪ್ಪ, ಕಳೆದ ವಾರ ಸಿಸಿಬಿ ವತಿಯಿಂದ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಕೆಲವು ರೌಡಿಗಳು ಮನೆಯಲ್ಲಿ ಇರಲಿಲ್ಲ. ಇದ್ದವರನ್ನು ಸಿಸಿಬಿಗೆ ಕರೆತಂದು ವಿಚಾರಣೆ ಮಾಡಲಾಗಿದೆ ಎಂದರು.
ಅಂದು ಸೈಲೆಂಟ್ ಸುನೀಲ್ ನಾಪತ್ತೆಯಾಗಿದ್ದ
ಅವತ್ತು ನಾಪತ್ತೆಯಾಗಿದ್ದ ಪ್ರಮುಖ 9 ರೌಡಿಗಳನ್ನ ಕರೆಸಿ ವಾರ್ನ್ ಮಾಡಿದ್ದಾರೆ. ಮುಲಾಮ, ರಾಜೇಂದ್ರ, ರೋಹಿತ್ ಗೌಡ, ಕುಮರೇಶ್, ಮಂಜು ಅಲಿಯಾಸ್ ಮಂಜುನಾಥ್, ಗಜ ಅಲಿಯಾಸ್ ಗಜೇಂದ್ರ ಎಂಬವರನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಆದ್ರೆ ಅಂದು ಸೈಲೆಂಟ್ ಸುನೀಲ್ ನಾಪತ್ತೆಯಾಗಿದ್ದನು. ನಿನ್ನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಂತ ಮಾಹಿತಿ ಗೊತ್ತಾಗಿದೆ ಎಂದು ಹೇಳಿದರು.
ವಶಕ್ಕೆ ಪಡೆಯಲು ಸೂಚನೆ
ಸೈಲೆಂಟ್ ಸುನೀಲ್ನನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲು ನಮ್ಮ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಆತನ ಮೇಲೆ ಯಾವುದೇ ವಾರೆಂಟ್ಗಳ ಪೆಂಡಿಂಗ್ ಸದ್ಯಕ್ಕೆ ಇಲ್ಲ. ಆದ್ರೆ ರೌಡಿಶೀಟರ್ ಆತನ ಮೇಲೆ ಇನ್ನೂ ಇದೆ ಎಂಬ ಮಾಹಿತಿಯನ್ನು ನೀಡಿದರು.
ಇದನ್ನೂ ಓದಿ: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸುನೀಲ್ನ ಸೈಲೆಂಟ್ ತಯಾರಿ?
ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ
ಸೈಲೆಂಟ್ ಸುನೀಲ್ ಕಾರ್ಯಕ್ರಮ ಆಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸುನೀಲ್ ಬಗ್ಗೆ ಸದ್ಯ ಯಾವುದೇ ವಾರೆಂಟ್ ಇಲ್ಲ. ಆದ್ರೂ ವಿಚಾರ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕಾನೂನಿನಲ್ಲಿ ಯಾವ ರೀತಿ ಇದೆಯೋ ಅದರಂತೆ ಮಾಡ್ತೀವಿ ಎಂದು ತಿಳಿಸಿದರು.
ಪೊಲೀಸರು ಎಸ್ಕಾರ್ಟ್ ನೀಡಿದ್ರಾ?
ಪೊಲೀಸರು ಎಸ್ಕಾರ್ಟ್ ಮಾಡಿ ಸುನೀಲ್ನನ್ನು ಕರ್ಕೊಂಡು ಹೋಗಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ರೆಡ್ಡಿ, ಈ ಬಗ್ಗೆಯೂ ನಾವು ತನಿಖೆ ಮಾಡಲು ಸೂಚನೆ ನೀಡಲಾಗಿದೆ. ರೌಡಿಶೀಟರ್ಗಳ ಬಗ್ಗೆ ಈ ವರ್ಷ ಸಾಕಷ್ಟು ಕ್ರಮ ಜರುಗಿಸಿದ್ದೀವಿ. ಈಗ ಸುನೀಲ್ನನ್ನು ಕರೆಸಿ ಮಾಹಿತಿ ಪಡೆಯುವಂತೆ ಸಿಸಿಬಿಗೂ ಸೂಚನೆ ನೀಡಲಾಗಿದೆ ಎಂದರು.
ರಕ್ತ ಹರಿಸಿ ರೌಡಿ ಅಗಿದ್ದ ಸೈಲೆಂಟ್ ಸುನೀಲ್, ಬಿಜೆಪಿ ನಾಯಕರ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದನು. ಇದೇ ಕಾರ್ಯಕ್ರಮದಲ್ಲಿ ಸೈಲೆಂಟ್ ಸುನೀಲ್ನ ಸಹಚರರು ಸಹ ಭಾಗಿಯಾಗಿದ್ದರು. ಸಂಸದರು, ಶಾಸಕರ ಆಗಮನ ಹಿನ್ನೆಲೆ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: Silent Sunil: ಬಹಿರಂಗ ಸಮಾವೇಶ ಮಾಡಿದರೂ CCB ಕಣ್ಣಿಗೆ ಕಾಣಲಿಲ್ವಾ ಸೈಲೆಂಟ್ ಸುನೀಲ್?
ಸೈಲೆಂಟ್ ಸುನೀಲ್ ಕಾರ್ಯಕ್ರಮದಲ್ಲಿ ಬಿಜೆಪಿ ಪಡೆ
ಈ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಉದಯ್ ಗರುಡಾಚಾರ್, ಎನ್.ಆರ್.ರಮೇಶ್ ಭಾಗಿಯಾಗಿದ್ದರು. ಬಹಿರಂಗವಾಗಿಯೇ ಸೈಲೆಂಟ್ ಸುನೀಲ್ಗೆ ಶುಭ ಹಾರೈಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ