ಬೆಂಗಳೂರು (ನ. 5): ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಯನ್ನು ಇಂದು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜಕಾರಣದಲ್ಲಿ ಚಕ್ರ ತಿರುಗುತ್ತಲೇ ಇರುತ್ತದೆ. ಸಿಬಿಐನವರು ರಾಜಕಾರಣದ ಅಸ್ತ್ರವಾಗಬಾರದು. ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದಿರುವುದಕ್ಕೆ ಕೆಲವು ಬಿಜೆಪಿಯವರು ಖುಷಿ ಪಡುತ್ತಿರಬಹುದು. ಆದರೆ, ದೇಶದ ಕಾನೂನಿನ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮವರು ಯಾರೂ ತಪ್ಪು ಮಾಡಿಲ್ಲ. ನಮ್ಮ ನಾಯಕರನ್ನು ಮುಗಿಸಲು ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಈ ಹಿಂದೆ ವಿನಯ್ ಕುಲಕರ್ಣಿ ಬಳಿ ಎಲ್ಲವನ್ನೂ ವಿಚಾರಿಸಿದ್ದೇನೆ. ಈಗಾಗಲೇ ಅವರ ಕೇಸ್ ಕುರಿತು ತನಿಖೆ ಮಾಡಲಾಗಿದೆ. ಪೊಲೀಸರು ರಿಪೋರ್ಟ್ ಮಾಡಿದ್ದಾರೆ. ಆ ಭಾಗದ ಬಿಜೆಪಿ ನಾಯಕರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ವಿನಯ್ ಕುಲಕರ್ಣಿ ಪ್ರಭಾವಿ ಎಂಬ ಕಾರಣಕ್ಕೆ ಅವರನ್ನು ಮಟ್ಟ ಹಾಕೋಕೆ ಹೊರಟಿದ್ದಾರೆ. ಸಿಬಿಐನವರು ಅವರ ಜೊತೆಗಿದ್ದವರನ್ನು ವಿಚಾರಿಸಿದ್ದಾರೆ. ಸಿಬಿಐನವರು ಕಾನೂನು ಬಿಟ್ಟು ಏನನ್ನೂ ಮಾಡುವುದಿಲ್ಲ ಎಂಬ ನಂಬಿಕೆ ನನಗಿದೆ. ಸಿಬಿಐನವರು ರಾಜಕೀಯಕ್ಕೆ ತಲೆ ಬಾಗಬಾರದು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ
ಡಿವೈಎಸ್ಪಿ ಗಣಪತಿ ಸಾವಿನ ವಿಚಾರದಲ್ಲಿ ಈ ಹಿಂದೆ ಕೆಜೆ ಜಾರ್ಜ್ ಅವರಿಗೂ ಸಾಕಷ್ಟು ಕಿರುಕುಳ ನೀಡಲಾಗಿತ್ತು. ವಿನಯ್ ಕುಲಕರ್ಣಿಗೂ ಅದೇ ರೀತಿ ಮಾಡಲಾಗುತ್ತಿದೆ. ಬಿಜೆಪಿಯ ಸಚಿವರೊಬ್ಬರು ವಿನಯ್ ಕುಲಕರ್ಣಿಯನ್ನು ಕರೆದು ಬಿಜೆಪಿಗೆ ಸೇರಿ ಎಂದಿದ್ದರು. ಬಿಜೆಪಿ ನಾಯಕರೇ ಇದರ ಬಗ್ಗೆ ಮಾತನಾಡಲಿ. ಪೊಲೀಸರು ಏನು ಮಾಡಿದರೂ ನಾವು ವಿನಯ್ ಕುಲಕರ್ಣಿ ಪರವಾಗಿಯೇ ಇದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ