ಸಮನ್ಸ್​ ಜಾರಿಗಾಗಿ ವಿಧಾನಸೌಧದಲ್ಲಿ ಕಾಂಗ್ರೆಸ್​ ನಾಯಕ ಕೆ.ಜೆ ಜಾರ್ಜ್​ಗಾಗಿ ಹುಡುಕಾಡಿದ ಸಿಬಿಐ ಅಧಿಕಾರಿಗಳು

DySP Ganapathi Death: ಕಾಂಗ್ರೆಸ್​ ನಾಯಕರಿಗೆ ಖುದ್ದು ಸಮನ್ಸ್​ ನೀಡಬೇಕು ಎಂಬ ನ್ಯಾಯಾಲಯದ ಆದೇಶ ಹಿನ್ನೆಲೆ ಇಂದು ಅವರನ್ನು ಹುಡುಕಿಕೊಂಡು ವಿಧಾನಸೌಧಕ್ಕೆ ಇಬ್ಬರು ಅಧಿಕಾರಿಗಳು ಆಗಮಿಸಿದರು.

ಕೆ.ಜೆ. ಜಾರ್ಜ್ -ಡಿವೈಎಸ್​ಪಿ ಗಣಪತಿ

ಕೆ.ಜೆ. ಜಾರ್ಜ್ -ಡಿವೈಎಸ್​ಪಿ ಗಣಪತಿ

  • Share this:
ಬೆಂಗಳೂರು (ಸೆ.21): ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆಜೆ ಜಾರ್ಜ್​ಗೆ ಸಮನ್ಸ್​ ಜಾರಿಮಾಡಬೇಕೆಂಬ ಆದೇಶದ ಹಿನ್ನೆಲೆ ಸಿಬಿಐ ಅಧಿಕಾರಿಗಳು ಇಂದು ವಿಧಾನಸೌಧದಲ್ಲಿ ಹುಟುಕಾಟ ನಡೆಸಿದರು.   ಇಂದಿನಿಂದ ಮುಂಗಾರು ಅಧಿವೇಶನ ಪ್ರಾರಂಭವಾಗಿದ್ದು, ವಿರೋಧ ಪಕ್ಷದ ಶಾಸಕರಾಗಿರುವ ಕೆ.ಜೆ ಜಾರ್ಜ್​ ಹಾಜರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಅವರಿಗೆ ವಿಧಾನಸೌಧದಲ್ಲಿಯೇ ಸಮನ್ಸ್​ ನೀಡಲು ಸಿಬಿಐ ಅಧಿಕಾರಿಗಳು ಆಗಮಿಸಿದರು. ಈ ಹಿಂದೆ ಕೂಡ ಅವರ ಭೇಟಿಗಾಗಿ ಐದಾರು ಸ್ಥಳಗಳಲ್ಲಿ ಅವರಿಗೆ ಸಮನ್ಸ್​  ನೀಡಲು  ಅಧಿಕಾರಿಗಳು ಪ್ರಯತ್ನಿಸಿ ವಿಫಲರಾಗಿದ್ದರು. ಅವರಿಗೆ ಖುದ್ದು ಸಮನ್ಸ್​ ನೀಡಬೇಕು ಎಂಬ ನ್ಯಾಯಾಲಯದ ಆದೇಶ ಹಿನ್ನೆಲೆ ಇಂದು ಅವರನ್ನು ಹುಡುಕಿಕೊಂಡು ವಿಧಾನಸೌಧಕ್ಕೆ ಇಬ್ಬರು ಅಧಿಕಾರಿಗಳು ಆಗಮಿಸಿದರು. ವಿಪಕ್ಷ ನಾಯಕರ ಕೊಠಡಿಗೆ ಬಂದ ಅಧಿಕಾರಿಗಳು ಅವರ ನಂಬರ್​ ಪಡೆದು ಹೋದರು. ಬಳಿಕ ಅವರನ್ನು ಪತ್ತೆ ಮಾಡಿದ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ

ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಚೋದನೆ ನೀಡಿದ ಆರೋಪವನ್ನು ಮಾಜಿ ಗೃಹ ಸಚಿವ, ಕಾಂಗ್ರೆಸ್​ ನಾಯಕ ಕೆಜೆ ಜಾರ್ಜ್​ ಮೇಲಿತ್ತು. ಇವರು ಪ್ರಕರಣದ ಎ1 ಆರೋಪಿಯಾಗಿದ್ದಾರೆ.  ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಸಿಬಿಐ ನ್ಯಾಯಾಲಯದಲ್ಲಿ 'ಬಿ ರಿಪೋರ್ಟ್ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ಗಣಪತಿ ಅವರ ಪುತ್ರ ನೆಹಾಲ್ ಗಣಪತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಾದ- ಪ್ರತಿವಾದ ಆಲಿಸಿದ ನ್ಯಾಯಾಪೀಠ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್​ ಅನ್ನು ತಿರಸ್ಕರಿಸಿತ್ತು. ಈ ಮೂಲಕ ಮಾಜಿ ಸಚಿವ ಕೆ.ಜೆ.ಚಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್, ಪ್ರಣಬ್ ಮೊಹಾಂತಿಗೆ ಮತ್ತೆ ಸಂಕಷ್ಟ ಎದುರಾಗಿತ್ತು.

ಏನಿದು ಪ್ರಕರಣ?:

ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿ ಆಗಿದ್ದ ಕೊಡಗು ಮೂಲದ ಎಂ.ಕೆ. ಗಣಪತಿ 2016ರ ಜುಲೈ 7ರಂದು ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೊಡಗಿನ ಸ್ಥಳೀಯ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ‘ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ನಾನು ಸಾವನ್ನಪ್ಪಿದ್ದರೆ ಅದಕ್ಕೆ ಈ ಮೂವರೇ ಕಾರಣ’ ಎಂದು ಹೇಳಿದ್ದರು. ಅದೇ ದಿನ ಸಂಜೆ ಅವರು ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಆಗ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಕಷ್ಟು ಪ್ರತಿಭಟನೆಗಳು ನಡೆದು, ಕೊಡಗು ಬಂದ್‌ ಘೋಷಿಸಲಾಗಿತ್ತು. ವಿಪಕ್ಷಗಳು ಕೆ.ಜೆ. ಜಾರ್ಜ್‌ ರಾಜೀನಾಮೆಗೆ ಪಟ್ಟು ಹಿಡಿದ ಕಾರಣ ಕೆ.ಜೆ. ಜಾರ್ಜ್‌ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿಗೂ ವಹಿಸಿತ್ತು. ಸಿಐಡಿ ತಂಡವು ಜಾರ್ಜ್‌ ವಿರುದ್ಧದ ಆರೋಪಕ್ಕೆ ‘ಕ್ಲೀನ್‌ ಚಿಟ್‌’ ನೀಡಿ ನ್ಯಾಯಾಲಯಕ್ಕೆ 800 ಪುಟಗಳ ವರದಿ ಸಲ್ಲಿಸಿತ್ತು. ಬಳಿಕ 2017ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಈ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್​ ಸಲ್ಲಿಸಿತ್ತು
Published by:Seema R
First published: