• Home
  • »
  • News
  • »
  • state
  • »
  • Kodagu: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ

Kodagu: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ

ಇಂದು ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

ಇಂದು ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

ಇಂದು ಸಂಜೆ 5 ಗಂಟೆಯಿಂದ ಮುಖ್ಯ ಅರ್ಚಕ ರಾಜೇಶ್ ಅಚಾರ್ ಅವರ ನೇತೃತ್ವದಲ್ಲಿ ಶ್ರೀನಿವಾಸ್ ಉಡುಪ ಸೇರಿದಂತೆ ಒಂಭತ್ತು ಅರ್ಚಕರ ತಂಡ ಕಾವೇರಿ ಪವಿತ್ರ ಕುಂಡಿಕೆಯ ಬಳಿ ವಿಶೇಷ ಪೂಜೆ ವಿಧಿವಿಧಾನಗಳು ನಡೆಸಲಿದ್ದಾರೆ,.

  • News18 Kannada
  • 2-MIN READ
  • Last Updated :
  • Karnataka, India
  • Share this:

ಕೊಡಗು  : ನಾಡಿನ ಜೀವನದಿ ಕಾವೇರಿ (Cauvery) ತೀರ್ಥರೂಪಿಣಿಯಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ (Talacauvery) ಇಂದು ರಾತ್ರಿ 7 ಗಂಟೆ 21 ನಿಮಿಷಕ್ಕೆ ಮೇಷ ಲಗ್ನದಲ್ಲಿ  ತೀರ್ಥೋದ್ಭವ (Theerthodbhava) ಜರುಗಲಿದ್ದು ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ಧಾರೆ. ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಕೊಡಗು ಜಿಲ್ಲಾಡಳಿತ (District Administration) ಸಕಲಸಿದ್ಧತೆ ಮಾಡಿಕೊಂಡಿದೆ.


ತೀರ್ಥೋದ್ಭವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ


ಈಗಾಗಲೇ ಅಗಸ್ತ್ಯ ಮುನಿ ಸನ್ನಿಧಿ, ಗಣಪತಿ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳನ್ನು ಹೂವಿನಿಂದ ಅಲಂಕಾರ ಮಾಡಲಾಗಿದೆ. ಮುಖ್ಯವಾಗಿ ತೀರ್ಥೋದ್ಭವವಾಗು ಬ್ರಹ್ಮ ಕುಂಡಿಕೆಯ ಬಳಿಯು ಹೂವಿನ ಅಲಂಕಾರಗಳನ್ನು ಮಾಡಲಾಗಿದೆ. ತುಲಾ ಸಂಕ್ರಮಣ ಮಾಸದಲ್ಲಿ ತೀರ್ಥ ರೂಪಿಣಿಯಾಗಿ ದರ್ಶನ ನೀಡುವ ಕೊಡಗಿನ ಕುಲದೇವಿ ಮಾತೆ ಕಾವೇರಿಯ ಸ್ವಾಗತಕ್ಕಾಗಿ ತಲಕಾವೇರಿಯಲ್ಲಿ ಸಕಲ ಸಿದ್ಧತೆ ನಡೆದಿದೆ.


ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯದಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ತೀರ್ಥೋದ್ಭವ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡದೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈ ಬಾರಿ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದ್ದು ಇದಕ್ಕಾಗಿ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಸಕಲರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.


ಇಂದು ಸಂಜೆ ತೀರ್ಥೋದ್ಭವ ಜರುಗಲಿದೆ


ಇಂದು ಸಂಜೆ ಐದು ಗಂಟೆಯಿಂದ ಮುಖ್ಯ ಅರ್ಚಕ ರಾಜೇಶ್ ಅಚಾರ್ ಅವರ ನೇತೃತ್ವದಲ್ಲಿ ಶ್ರೀನಿವಾಸ್ ಉಡುಪ ಸೇರಿದಂತೆ ಒಂಭತ್ತು ಅರ್ಚಕರ ತಂಡ ಕಾವೇರಿ ಪವಿತ್ರ ಕುಂಡಿಕೆಯ ಬಳಿ ವಿಶೇಷ ಪೂಜೆ ವಿಧಿವಿಧಾನಗಳು ನಡೆಸಲಿದೆ. ಸಹಸ್ರ ನಾಮಾರ್ಚನೆ, ಕುಂಕುಮಾರ್ಚನೆ, ಅಭಿಷೇಕಗಳನ್ನು ನೆರವೇರಿಸಲಿದ್ದಾರೆ. ಬಳಿಕ ತೀರ್ಥೋದ್ಭವದ ಸಂದರ್ಭ ಮಹಾಪೂಜೆ ಕೂಡ ನಡೆಯಲಿದೆ. ಕಾವೇರಿ ತೀರ್ಥವನ್ನು ಸಂಗ್ರಹಿಸಲು ಸಾವಿರಾರು ಸಂಖ್ಯೆಯಲ್ಲಿ ಬರುವುದರಿಂದ ಯಾವುದೇ ನೂಕುನುಗ್ಗಲು ಆಗದಂತೆ ಬ್ಯಾರಿಕೇಡ್ ಹಾಕಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.


ಭಕ್ತರ ಸಾಗರವೇ ಹರಿದು ಬರುವ ನಿರೀಕ್ಷೆ


ಒಂದೆಡೆ ಪವಿತ್ರ ಕುಂಡಿಕೆ ಕಡೆಗೆ ಹೋಗಲು ಅವಕಾಶವಿದ್ದರೆ ಮತ್ತೊಂದೆಡೆ ಅಲ್ಲಿಂದ ಹೊರಗೆ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ. ಅದಕ್ಕೂ ಮೊದಲು ತೀರ್ಥ ಕುಂಡಿಕೆ ಮತ್ತು ಕೊಳದ ಬಳಿಗೆ ಯಾರಿಗೂ ಹೋಗಲು ಅವಕಾಶವಿಲ್ಲ. ಸಂಪೂರ್ಣ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧಿಸಲಾಗಿದೆ. ತೀರ್ಥ ಕೊಳದಲ್ಲಿ ಈ ಬಾರಿ ಪುಣ್ಯಸ್ನಾನಕ್ಕೂ ಅವಕಾಶ ನೀಡಲಾಗಿದ್ದು, ಭಕ್ತರು ಪುಣ್ಯಸ್ನಾನ ಮಾಡಿ ಬಳಿಕ ಕಾವೇರಿ ತೀರ್ಥವನ್ನು ಪಡೆಯಲು ಅವಕಾಶ ನೀಡಲಾಗಿದೆ. ಇನ್ನು ವಿವಿಐಪಿಗಳು ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಪತ್ಯೇಕ ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ: Murugha Mutt: ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷರ ನೇಮಕ; ಬಸವಪ್ರಭು ಶ್ರೀಗಳಿಗೆ ಪೂಜಾ ಕೈಂಕರ್ಯದ ಉಸ್ತುವಾರಿ


ಕಿಲೋ ಮೀಟರ್ ದೂರದವರೆಗೆ ಲೈಟಿಂಗ್ ವ್ಯವಸ್ಥೆ


ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸೋ ಹಿನ್ನೆಲೆಯಲ್ಲಿ ಮತ್ತು ರಾತ್ರಿ 7 ಗಂಟೆ 21 ನಿಮಿಷಕ್ಕೆ ತೀರ್ಥೋದ್ಭವ ನಡೆಯುವ ಹಿನ್ನೆಲೆಯಲ್ಲಿ ತಲಕಾವೇರಿಯಿಂದ ಭಾಗಮಂಡಲದವರೆ ಮತ್ತು ಭಾಗಮಂಡಲದಿಂದ 10 ಕಿಲೋ ಮೀಟರ್ ದೂರದವರೆಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಎಲ್ಲಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ 400 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೂವರು ಡಿವೈಎಸ್‍ಪಿಗಳು, 7 ಎನ್‍ಸ್ಪೆಕ್ಟರ್‍ಗಳು, 17 ಸಬ್‍ಇನ್‍ಸ್ಪೆಕ್ಟರ್​, 300 ಪೊಲೀಸರು ಹಾಗೂ ಮೀಸಲು ಸಶಸ್ತ್ರ ಪಡೆಯ 100 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.


ಇದನ್ನೂ ಓದಿ: Heavy Rain: ದಾಖಲೆಯ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು! ಅಬ್ಬಬ್ಬಾ ಇದೆಂಥಾ ವರುಣನ ಅಬ್ಬರ!


ಇದರ ಜೊತೆಗೆ ಗೃಹ ರಕ್ಷಕ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ತೀರ್ಥ ಸ್ವರೂಪಿಣಿಯಾದ ಕಾವೇರಿ ಮಾತೆಯ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದು, 1 ತಿಂಗಳ ತುಲಾ ಸಂಕ್ರಮಣ ಜಾತ್ರೆಗೆ ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದೆ.

Published by:ಪಾವನ ಎಚ್ ಎಸ್
First published: