ಕೊಡಗು : ಕೊಡಗು ಜಿಲ್ಲೆಯಲ್ಲಿ (Kodagu) ಎರಡು ದಿನಗಳ ಕಾಲ ಸ್ವಲ್ಪ ತಗ್ಗಿದ ಮಳೆ (Rain) ಮಂಗಳವಾರ ಸಂಜೆಯಿಂದ ಮತ್ತೆ ಅಬ್ಬರಿಸುತ್ತಿದೆ. ಪರಿಣಾಮ ಜಿಲ್ಲೆಯ ಜೀವನದಿ ಕಾವೇರಿ (Cauvery) ಮತ್ತೆ ಉಗ್ರರೂಪ ತಾಳುತ್ತಿದ್ದು, ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಮಡಿಕೇರಿ (Madikeri) ತಾಲ್ಲೂಕಿನ ಕಣ್ವಬಲಮುರಿಯಲ್ಲಿ ಕಾವೇರಿ ನದಿ ಬೋರ್ಗರೆದು ಹರಿಯುತ್ತಿದೆ. ಬಲುಮುರಿಯ ಕೆಳಸೇತುವೆ (Under Bridge) ಮುಳುಗಡೆಯಾಗಿದ್ದು, ಸೇತುವೆ ಮೇಲೆ ಆರೇಳು ಅಡಿ ನೀರು ಹರಿಯುತ್ತಿದೆ. ಹೀಗಾಗಿ ಬಲಮುರಿ, ಪಾರಾಣೆ ಮತ್ತು ಕೂಡುಪರಂಬು ಪೈಸಾರಿಗಳ ಸಂಪರ್ಕ ಕಡಿತಗೊಂಡಿದೆ. ಈ ಭಾಗದ ಮೂರ್ನಾಲ್ಕು ಗ್ರಾಮಗಳ ಜನರು ಸಂಚಾರಕ್ಕೆ ಮೇಲ್ಸೇತುವೆಯನ್ನೇ ಅವಲಂಬಿಸಿದ್ದು, ಒಂದೇ ಕಿಲೋ ಮೀಟರ್ ನಲ್ಲಿ ಊರು ತಲುಪುತ್ತಿದ್ದ ಜನರು ಈಗ ಐದು ಕಿಲೋಮೀಟರ್ ಸುತ್ತಿ ಬಳಸಿ ಊರು ಸೇರುವಂತಾಗಿದೆ.
2018 ಮತ್ತು 2019 ರಲ್ಲಿ ಸುರಿದ್ದಿದ್ದ ಮಳೆಗೆ ಗಾಯಿತ್ರಿ ಚಾರಿಟೆಬಲ್ ಭವನ ಮುಳುಗಡೆಯಾಗಿತ್ತು. ಇದರಿಂದ ದೇವಾಲಯದಲ್ಲಿ ಇದ್ದ ಹಲವಾರು ಪೂಜಾ ಸಾಮಗ್ರಿಗಳು ತೇಲಿ ಹೋಗಿದ್ದವು. ಈಗ ಮತ್ತೆ ಮಳೆ ತೀವ್ರಗೊಳ್ಳುತ್ತಿದ್ದು ಏನಾಗುವುದೋ ಎಂದು ಅರ್ಚಕ ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.
ಆತಂಕದಲ್ಲಿ ರೈತರು
ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಮತ್ತು ಕೊಲ್ಲಿಗಳ ಮೂಲಕ ಕಾವೇರಿ ಪ್ರವಾಹದ ನೀರು ಹೊಲ ಗದ್ದೆಗಳು ಮತ್ತು ತೋಟಗಳನ್ನು ಸಂಪೂರ್ಣ ಆವರಿಸಿದ್ದು, ಗ್ರಾಮಗಳತ್ತಲೂ ನುಗ್ಗಲಾರಂಭಿಸಿದೆ. ಹೀಗಾಗಿ ಮತ್ತೆ ಏನಾಗುವುದೋ ಎಂದು ಜನರು ಭಯಪಡುವಂತೆ ಆಗಿದೆ.
ಬಲಮುರಿ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಜನರು ಆತಂಕಕ್ಕೆ ಈಡಾಗೀದ್ದಾರೆ. ಹೊಲ, ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ರೈತರು ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣ ಪ್ರವಾಹದ ಪಾಲಾಗಿದೆ. ಪ್ರವಾಹದ ನೀರು ಕಾಫಿ ತೋಟಗಳಲ್ಲಿ ಹೀಗೆ ನಿಂತಿರುವುದರಿಂದ ಕಾಫಿ ಬೆಳೆಗೆ ಕೊಳೆ ರೋಗ ಬಂದು ಎಲ್ಲವೂ ಹಾಳಾಗುವ ಆತಂಕ ಎದುರಾಗಿದೆ.
ನಾಪೋಕ್ಲು ಸಮೀಪದ ಚೆರಿಯಪರಂಬು ಪೈಸಾರಿ ಗ್ರಾಮಗಳಿಗೆ ಬಹುತೇಕ ಜಲಾವೃತವಾಗಿವೆ. ಮತ್ತೊಂದೆಡೆ ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಮತ್ತು ಶೈಲಜಾ ಬಡಾವಣೆಗಳ ಜನರು ಆತಂಕದಲ್ಲಿದ್ದಾರೆ.
ಇದನ್ನೂ ಓದಿ: BBMP: ಬೆಂಗಳೂರಲ್ಲಿ ವಾರ್ಡ್ಗಳ ಸಂಖ್ಯೆ 243ಕ್ಕೆ ಏರಿಕೆ; ವಾರ್ಡ್ ನಂ. 55ಕ್ಕೆ ಪುನೀತ್ ರಾಜ್ಕುಮಾರ್ ಹೆಸರು
ಸಂಪೂರ್ಣ ಕತ್ತಲಿನಲ್ಲಿ ಕೊಡಗು ಜಿಲ್ಲೆ
ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಗುಹ್ಯ, ಬೆಟ್ಟಕಾಡು, ಕುಶಾಲನಗರ ತಾಲ್ಲೂಕಿನ ನಲ್ವತ್ತೇಕ್ರೆ ಸೇರಿದಂತೆ ಹಲವೆಡೆ ಕಾವೇರಿ ಪ್ರವಾಹದ ನೀರು ನಿಧಾನವಾಗಿ ಏರುತ್ತಿದೆ. ಇದು ಜನರನ್ನು ಆತಂಕಕ್ಕೆ ದೂಡಿದೆ. ಕೊಡಗಿನ ಹತ್ತಾರು ಹಳ್ಳಿಗಳಲ್ಲಿ ನೂರಾರು ಮರಗಳು ಬಿದ್ದಿದ್ದು ಗುರುವಾರ ಇಡೀದಿನ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮತ್ತೊಂದೆಡೆ ವಿದ್ಯುತ್ ವ್ಯತ್ಯಯವಾಗಿ ಕೊಡಗು ಸಂಪೂರ್ಣ ಕತ್ತಲಿನಲ್ಲಿ ಮುಳುಗಿತ್ತು.
2018ರ ರೀತಿ ಉಕ್ಕಿ ಹರಿಯುತ್ತಿರೋ ಕಾವೇರಿ
ಒಟ್ಟಿನಲ್ಲಿ 2018 ರಲ್ಲೂ ಇದೇ ರೀತಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಹತ್ತಾರು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದವು. ನೂರಾರು ಕುಟುಂಬಗಳು ತಮ್ಮ ಮನೆ, ಮಠ, ಎಲ್ಲಾ ವಸ್ತುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಇದೀಗ ಮತ್ತೆ ಕಾವೇರಿ ನದಿಯಲ್ಲಿ ಮಳೆ ಜಾಸ್ತಿಯಾದಂತೆಲ್ಲಾ ನೀರಿನ ಪ್ರಮಾಣವೂ ಜಾಸ್ತಿಯಾಗುತ್ತಿರುವುದು ಭೀಕರ ಪ್ರವಾಹ ಎದುರಾಗಿಬಿಡುತ್ತಾ ಎನ್ನುವ ಆತಂಕ ತಂದೊಡ್ಡಿದೆ.
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ (Heavy Rain) ಈವರೆಗೆ 32 ಮಂದಿ ಮೃತಪಟ್ಟಿದ್ದಾರೆ. ಐವರು ಕಾಣೆಯಾಗಿದ್ದು, 34 ಮಂದಿ ಗಾಯಗೊಂಡಿದ್ದಾರೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದರು.
ಇದನ್ನೂ ಓದಿ: Chitradurga: ಸಾಹಿತಿ ಬಿಎಲ್ ವೇಣುಗೆ ಎರಡನೇ ಬೆದರಿಕೆ ಪತ್ರ! ಅನಾಮಧೇಯ ವ್ಯಕ್ತಿಗಳ ವಿರುದ್ಧ FIR
ಉಡುಪಿಯಲ್ಲಿ ಅಧಿಕಾರಿಗಳ (Officer) ಜತೆ ಸಭೆ ಬಳಿಕ ಮಾತನಾಡಿ ಮಳೆಹಾನಿ ಬಗ್ಗೆ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಸಕ್ತ ವರ್ಷದಲ್ಲಿ ಜುಲೈ ತಿಂಗಳಿನಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ 300 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ