Farmers Protest: ನಾಳೆ ರಸ್ತೆಗೆ ಇಳಿಯುವ ಮುನ್ನ ಎಚ್ಚರ: ರಸ್ತೆ ತಡೆದು ಪ್ರತಿಭಟಿಸಲಿದ್ದಾರೆ ಅನ್ನದಾತರು!

ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಕಾಯ್ದೆಗಳು ದೇಶದ ವಿವಿಧೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೂ ಅನ್ನದಾತನ ಹೋರಾಟಕ್ಕೆ ಸರ್ಕಾರ ಸ್ವಂದಿಸದೇ ರೈತರ ಪರವಾದ ಕಾಯ್ದೆಗಳು ಅಂತ ವಾದ ಮಾಡುತ್ತಿದೆ. ಇದೀಗ ಮತ್ತೆ ರೈತರು ನಾನಾ ಬೇಡಿಕೆಗಳನ್ನ ಮುಂದಿಟ್ಟಿಕೊಂಡು ಸಾವಿರಾರು ಅನ್ನದಾತರು ಬೀದಿಗಿಳಿಯುತ್ತಿದ್ದಾರೆ. ಹೀಗಾಗಿ ನಾಳೆ ರಸ್ತೆಗಿಳಿಯುವ ಮುನ್ನ ಇರಲಿ ಎಚ್ಚರ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು (ಫೆಬ್ರವರಿ 05); ನೂತನ ಕೃಷಿ ಮಸೂದೆಗಳನ್ನ ಖಂಡಿಸಿ  ರೈತರು ನಡೆಸುತ್ತಿರುವ ಹೋರಾಟ  ದಿನೇ ದಿನೇ ತಾರಕ್ಕೇರುತ್ತಿದೆ. ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿ ಹಿಂಸಾ ರೂಪ ಪಡೆದ ಬಳಿಕ ರೈತರು ಹಾಗೂ ಸರ್ಕಾರದ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಫೆಬ್ರವರಿ 6 ರಂದು ದೇಶವ್ಯಾಪ್ತಿ ರಸ್ತೆ ತಡೆಗೆ ಕರೆ ನೀಡಿದ್ದಾರೆ. ದೆಹಲಿ ರೈತರ ಹೋರಾಟವನ್ನ ಬೆಂಬಲಿಸಿ ರಾಜ್ಯದ ರೈತರು ಸಹ  ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನ ಬಂದ್  ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಮೂರು ವಿವಾಧಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೋರಾಟದಲ್ಲಿ ನಿರತರಾಗಿರುವ ರೈತ ಸಂಘಟನೆಗಳು ಇದೇ ಶನಿವಾರ ಅಂದರೆ ನಾಳೆ ರಾಷ್ಟ್ರವ್ಯಾಪಿ ಚಕ್ಕಾಜಾಮ್ ಹೋರಾಟಕ್ಕೆ ಕರೆ ನೀಡಿವೆ.

ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಹೋರಾಟ ಇದಾಗಿದ್ದು, ಈ ಹೋರಾಟಕ್ಕೆ ರಾಜ್ಯದ ಕುರುಬೂರು ಶಾಂತಕುಮಾರ್ ನೇತೃತ್ವದ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಬೆಂಬಲ ಸೂಚಿಸಿದೆ. ಅಲ್ಲದೆ, ತಾವೂ ಈ ಹೋರಾಟದಲ್ಲಿ ಭಾಗಿಯಾಗಿ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಿದ್ದೇವೆ. ನಾನು‌ ಖುದ್ದಾಗಿ ಯಲಹಂಕ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ವೃತ್ತದ ಬಳಿ ರಸ್ತೆ ತಡೆದು ಹೋರಾಟ ಮಾಡಲಿದ್ದೇನೆ ಅಂತ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ವಿರೋಧದ ನಡುವಿನ ಈ ಕೃಷಿ ಕಾಯ್ದೆಯ ವಿರುದ್ಧ ಅನ್ನದಾತರು ಕಳೆದ ಎರಡು ತಿಂಗಳಿನಿಂದ ಸತತ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿಯ ಹೊರವಲಯದಲ್ಲಿರುವ ಸಿಂಘು ಗಡಿಯಲ್ಲಿ ನಿರಂತರ ಹೋರಾಟದಲ್ಲಿ ನಿರತರಾಗಿದ್ದಾರೆ. ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶ ಮಾಡಿದ್ದ ರೈತರು ಜನವರಿ.30 ರಂದು ಉಪವಾಸ ಸತ್ಯಾಗ್ರಹವನ್ನು ಆಚರಿಸಿದ್ದರು.

ಆದರೆ, ಕೇಂದ್ರ ಸರ್ಕಾರ ಮಾತ್ರ, ಈ ಯಾವ ಹೋರಾಟಕ್ಕೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ಈ ಕಾರಣ ರೈತರು ಮತ್ತೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ಮುಂದಾಗಿದ್ದು, ರಾಜ್ಯದಲ್ಲಿಯೂ ದೆಹಲಿ ಹೋರಾಟಕ್ಕೆ ಬೆಂಬಲ ಸಿಕ್ಕಿದೆ.

ಬೆಂಗಳೂರಿನ ಎಲ್ಲೆಲ್ಲಿ ರಸ್ತೆ ತಡೆ.!!

- ದೇವನಹಳ್ಳಿ ಏರ್ಪೋರ್ಟ್ ರಸ್ತೆ ಬಂದ್
- ತುಮಕೂರು ರಸ್ತೆ ತಡೆ
- ನೈಸ್ ರೋಡ್ ಸಂಪೂರ್ಣ ಬಂದ್
- ಹಳೆ ಮದ್ರಾಸ್ ರಸ್ತೆ ಸಂಪೂರ್ಣ ತಡೆ
- ಮೈಸೂರು ರಸ್ತೆ ಸಂಪೂರ್ಣ ಸ್ತಬ್ಥ
- ಯಲಹಂಕ ಮುಖ್ಯ ರಸ್ತೆ ಬಂದ್

ನೂತನ ಕೃಷಿ ಕಾಯ್ದೆಗಳು ಮರಣ ಶಾಸನವಾಗಿದೆ ಅಂತ ರೈತರು ಆರೋಪ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ  ಈ ಕಾಯ್ದೆಯನ್ನ ವಾಪಸ್ ಪಡೆಯಬೇಕು ಅಂತ ರೈತ ಸಂಘಟನೆಗಳು ಅಗ್ರಹಿಸಿವೆ. ದೆಹಲಿ ರೈತ ಹೋರಾಟವನ್ನು ದಮನಿಸುವ ಸಲುವಾಗಿ ಸರ್ಕಾರ ಮುಂದೆ ನಿಂತು ರಸ್ತೆಗಳನ್ನು ಅಗೆದು, ಚೂಪಾದ ಮೊಳೆಗಳನ್ನು ನೆಟ್ಟಿ, ಮುಳ್ಳುತಂತಿಗಳು, ಬ್ಯಾರಿಕೇಡ್‌ಗಳನ್ನು ಹಾಕಿ, ಪ್ರತಿಭಟನೆ ಸ್ಥಳದಲ್ಲಿ ಇಂಟರ್ನೆಟ್ ಸಂಪರ್ಕ ಕಡಿತ ಮಾಡುವ ಮೂಲಕ ರೈತರನ್ನ ಹಿಂಸಿಸುವ ಕೆಲಸ ಮಾಡಲಾಗಿತ್ತು.

ಇದರ ವಿರುದ್ದವೂ ರೈತ ಸಂಘಟನೆಗಳು ಕೆಂಡಾಮಂಡಲವಾಗಿವೆ. ಹೀಗಾಗಿ ಮತ್ತೆ ಶನಿವಾರ ರಸ್ತೆ ತಡೆಗೆ ಕರೆ ನೀಡಿದ್ದಾರೆ. ರಾಜ್ಯದಲ್ಲಿಯೂ ರಾಷ್ಟ್ರಿಯ ಸಂಪರ್ಕ  ಕಲ್ಪಿಸುವ ದೇವನಹಳ್ಳಿ ಏರ್ಪೋರ್ಟ್ ರಸ್ತೆ, ತುಮಕೂರು ರಸ್ತೆ, ನೈಸ್ ರೋಡ್, ಓಲ್ಡ್ ಮದ್ರಾಸ್ ರಸ್ತೆ, ಮೈಸೂರು ರಸ್ತೆ ಸೇರಿದಂತೆ ಹಲವು ರಸ್ತೆಗಳನ್ನ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ತಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಮುಂದಾಗಿದ್ದಾರೆ.

ಇದನ್ನೂ ಓದಿ: Farmers Protest: ರಿಹಾನಾ ಅವರ ಮುಂದಿನ ವಿಡಿಯೋದಲ್ಲಿ ನೀವಿರುತ್ತೀರಿ; ತಾಪ್ಸಿ, ಸ್ವರ ಭಾಸ್ಕರ್​ ಬೆನ್ನಿಗೆ ನಿಂತ ಅಭಯ್​ ಡಿಯೋಲ್

ಇನ್ನು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟೊರುವ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್, ನಮ್ಮ ಬಳಿ ಯಾರೂ ಅನುಮತಿ ಕೇಳೋಕೆ ಬಂದಿಲ್ಲ. ಮಾಧ್ಯಮಗಳಲ್ಲಿ ಬಂದಿದ್ದಷ್ಟೇ ನಮಗೆ ಗೊತ್ತು. ನಮಗೆ ಎಲ್ಲೆಲ್ಲಿ ತಡೆ ಮಾಡ್ತಾರೆ ಅಂತ ಮಾಹಿತಿ ಇಲ್ಲ. ಮಾಹಿತಿ ಬಂದ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾವು ಜನ ಸಾಮಾನ್ಯರಿಗೆ ತೊಂದರೆ ಆಗಲು ಬಿಡಲ್ಲ. ಯಾವುದೇ ಕಾರಣಕ್ಕೂ ಶಾಂತಿ ಸುವ್ಯಸವಸ್ಥೆಗೆ ಧಕ್ಕೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ಯಾವುದೇ ರೀತಿಯ ಪರಿಸ್ಥಿತಿ ಇದ್ರು ಅದನ್ನು ಎದುರಿಸಲು ನಾವು ರೆಡಿ ಇದ್ದೇವೆ ಅಂತ ಹೇಳಿದರು.

ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಕಾಯ್ದೆಗಳು ದೇಶದ ವಿವಿಧೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೂ ಅನ್ನದಾತನ ಹೋರಾಟಕ್ಕೆ ಸರ್ಕಾರ ಸ್ವಂದಿಸದೇ ರೈತರ ಪರವಾದ ಕಾಯ್ದೆಗಳು ಅಂತ ವಾದ ಮಾಡುತ್ತಿದೆ. ಇದೀಗ ಮತ್ತೆ ರೈತರು ನಾನಾ ಬೇಡಿಕೆಗಳನ್ನ ಮುಂದಿಟ್ಟಿಕೊಂಡು ಸಾವಿರಾರು ಅನ್ನದಾತರು ಬೀದಿಗಿಳಿಯುತ್ತಿದ್ದಾರೆ. ಹೀಗಾಗಿ ನಾಳೆ ರಸ್ತೆಗಿಳಿಯುವ ಮುನ್ನ ಇರಲಿ ಎಚ್ಚರ.

(ವರದಿ- ಆಶಿಕ್ ಮುಲ್ಕಿ)
Published by:MAshok Kumar
First published: