ಕಲಬುರಗಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ (PSI Recruitment) ನೇಮಕಾತಿಯಲ್ಲಿ ಹಗರಣ (PSI Scam) ನಡೆದ ಪ್ರಕರಣ ಇಡೀ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಮರ್ಯಾದೆಯನ್ನು ಹರಾಜು ಮಾಡಿತ್ತು. ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡ ಬಳಿಕ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯಿಂದ ಹಿಡಿದ ಅಭ್ಯರ್ಥಿಯ ತನಕ ಅನೇಕ ಮಂದಿಯನ್ನು ತನಿಖಾ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಇಂತಹದೇ ಮತ್ತೊಂದು ಹಗರಣ ಇನ್ನೊಂದು (KKRTC) ಪ್ರಕರಣದಲ್ಲಿ ಕಂಡು ಬಂದಿದೆ.
ದೇಹತೂಕ ಹೆಚ್ಚಿಸಿಕೊಳ್ಳಲು ಅಕ್ರಮ
ಕಳೆದ ವರ್ಷ ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಮಟ್ಟದ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಇದೀಗ ಆ ಪ್ರಕರಣ ಮರೆ ಮಾಸುವ ಮುನ್ನವೇ ಇಂತಹುದೇ ಮತ್ತೊಂದು ಗೋಲ್‌ಮಾಲ್ ನಡೆದಿರುವುದು ಬೆಳಕಿಗೆ ಬಂದಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ನಿಗಮದ ಕಂಡಕ್ಟರ್ ಆಗಲು ನೇಮಕಾತಿ ಪ್ರಕ್ರಿಯೆ ವೇಳೆ ದೈಹಿಕ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ಅಭ್ಯರ್ಥಿಗಳು ಅಕ್ರಮ ಎಸಗಿರುವುದು ಕಂಡು ಬಂದಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ವಾಮಮಾರ್ಗ ಕಂಡು ಹಿಡಿದಿದ್ದು, ಡ್ರೈವರ್ ಕಂ ಕಂಡಕ್ಟರ್ ನೇಮಕಾತಿ ಪರೀಕ್ಷೆ ವೇಳೆ ತೂಕ ಹೆಚ್ಚಿಸಿಕೊಳ್ಳಲು ಕಾಲಿಗೆ ಕಬ್ಬಿಣ ಕಟ್ಟಿಕೊಂಡಿದ್ದಾರೆ. ತನ್ನ ತೊಡೆಗೆ 5-10 ಕೆಜಿ ತೂಕದ ಕಬ್ಬಿಣ ಕಟ್ಟಿಕೊಂಡು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪರಿಶೀಲನೆ ವೇಳೆ ಸಿಕ್ಕಿಬಿದ್ದ ಹಲವು ಅಭ್ಯರ್ಥಿಗಳಿಗೆ ಅಧಿಕಾರಿಗಳು ಗೇಟ್‌ಪಾಸ್ ನೀಡಿದ್ದಾರೆ.
ಒಳ ಉಡುಪಿನಲ್ಲಿ ಕಬ್ಬಿಣ ಇಟ್ಟ ಖದೀಮರು
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಡ್ರೈವರ್ ಕಂ ಕಂಡಕ್ಟರ್ ಹುದ್ದೆಗೆ ಒಟ್ಟು 1619 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿ ಆದೇಶ ಹೊರಡಿಸಿತ್ತು. ಅದರನ್ವಯ ಇತ್ತೀಚೆಗೆ ಪರೀಕ್ಷೆಯನ್ನೂ ನಡೆಸಲಾಗಿತ್ತು. ಡ್ರೈವರ್ ಕಂ ಕಂಡಕ್ಟರ್ ಆಗಲು ಪ್ರತಿಯೊಬ್ಬ ಅಭ್ಯರ್ಥಿ ಕೂಡ 55 ಕೆ ಜಿ ತೂಕ ಮತ್ತು ಎತ್ತರ 163 ಕಡ್ಡಾಯವಾಗಿ ಇರಲೇಬೇಕಾದ ಅನಿವಾರ್ಯತೆ ಇರೋದರಿಂದ ಅದಕ್ಕಿಂತ ಕಡಿಮೆ ತೂಕ ಇದ್ದವರು ಕಬ್ಬಿಣದ ರಾಡ್‌ಗಳನ್ನ ಒಳ ಉಡುಪಿನಲ್ಲಿ ಇಟ್ಟುಕೊಂಡು ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ವಿಫಲ ಪ್ರಯತ್ನ ಮಾಡಿದ್ದಾರೆ.
ಅಕ್ರಮ ಎಸಗಿದವರು ಕಪ್ಪು ಪಟ್ಟಿಗೆ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಡ್ರೈವರ್ ಕಂ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಲು ಕಬ್ಬಿಣದ ರಾಡ್‌ಗಳನ್ನ ಒಳ ಉಡುಪಿನಲ್ಲಿ ಇಟ್ಟುಕೊಂಡು ಮೋಸ ಮಾಡಲು ಯತ್ನಿಸಿದ ಅಭ್ಯರ್ಥಿಗಳ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಮೋಸಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಕಬ್ಬಿಣದ ರಾಡ್‌ಗಳನ್ನ ಇಟ್ಟು ಮೋಸ ಮಾಡುತ್ತಿರುವುದು ತಿಳಿಯುತ್ತಿದ್ದಂತೆ ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. ಕಡಿಮೆ ತೂಕ ಇದ್ದು ಅಕ್ರಮ ಎಸಗಲು ಮುಂದಾದ ಒಟ್ಟು ನಾಲ್ಕು ಜನರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಪ್ಪು ಪಟ್ಟಿಗೆ ಸೇರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ