ಚಿಕ್ಕಮಗಳೂರು (ನ. 5): ಆ ವ್ಯಕ್ತಿ ತಾನು ಬೆಳೆಯೋದರ ಜೊತೆ ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟು ಅವರ ಜೀವನವನ್ನು ಬಂಗಾರವಾಗಿಸಬೇಕು ಅಂತ ಪಣತೊಟ್ಟಿದ್ದ ಕನಸುಗಾರ. ಆ ದಿಕ್ಕಿನಲ್ಲಿಯೇ ಹೆಜ್ಜೆಯನ್ನಿಟ್ಟು ಕಾಫಿ ಕಿಂಗ್, ಬ್ಯುಸಿನೆಸ್ ಐಕಾನ್ ಅಂತೆಲ್ಲ ಕರೆಯಿಸಿಕೊಂಡು ನಿಷ್ಕಪಟಿಯಾಗಿ ರಾಜ್ಯದಲ್ಲೇ ಬೃಹತ್ ಉದ್ಯಮವನ್ನು ಹುಟ್ಟುಹಾಕಿದ ಸ್ವಾಭಿಮಾನಿ. ಆದರೆ, ಕಾಲಚಕ್ರದ ವಿಷವರ್ತುಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು, ಇಡೀ ಕರುನಾಡೇ ಕಂಬನಿ ಮಿಡಿಯೋ ಹಾಗೆ ಮಾಡಿದ್ದರು. ಇದೀಗ ದೇಶದಲ್ಲೇ ದೊಡ್ಡ ಕಾಫಿ ಸಾಮ್ರಾಜ್ಯವನ್ನೇ ಕಟ್ಟಿದ ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಅವರ ಹೆಂಡತಿ ಬಂಧನ ಭೀತಿ ಎದುರುಸುವಂತಾಗಿದೆ.
ಕಾಫಿಯ ಘಮಲನ್ನು ಇಡೀ ಜಗದತ್ತ ಪಸರಿಸುತ್ತಾ ಅಮೆರಿಕನ್ ದೈತ್ಯ ಸ್ಟಾರ್ ಬಕ್ಸ್ ಭಾರತಕ್ಕೆ ಕಾಲಿಡುವ ಮುನ್ನವೇ ಕಾಫಿ ಸಂಸ್ಕೃತಿಯನ್ನು ದೇಶದಲ್ಲಿ ಗಟ್ಟಿಗೊಳಿಸಿದ ಚತುರ ಕಾಫಿ ಡೇ ಸಿದ್ದಾರ್ಥ್ ಹೆಗ್ದೆ. "ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ" ಎಂದು ಹೇಳುತ್ತಾ ಅದೆಷ್ಟೋ ಲವ್ ಸ್ಟೋರಿಗಳಿಗೆ, ಬ್ಯುಸಿನೆಸ್ ಯಶೋಗಾಥೆಗಳಿಗೆ , ಯಾಂತ್ರಿಕ ಜೀವನದಿಂದ ತೊಳಲಾಟ ನಡೆಸುತ್ತಿದ್ದ ಜನರು ನೆಮ್ಮದಿಯಾಗಿ ಕಾಲ ಕಳೆಯೋ ಕ್ಷಣಗಳಿಗೆ ವೇದಿಕೆ ಮಾಡಿಕೊಟ್ಟ ಸೂಪರ್ ಮ್ಯಾನ್ ಸಿದ್ದಾರ್ಥ್ ಹೆಗ್ಡೆ. ಈ ಮೂಲಕ ಗ್ರಾಮೀಣ ಭಾಗದ ಸಾವಿರಾರು ಯುವಕ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ಕೊಟ್ಟು ನಿಜವಾದ ಗಾಡ್ ಫಾದರ್ ಆದ ದೈತ್ಯ ಉದ್ಯಮಿ. ಯಶಸ್ಸಿನ ಉತ್ತುಂಗಕ್ಕೆ ಕಾಲಿಡುತ್ತಿರುವಾಗಲೇ ಯೂ ಟರ್ನ್ ತೆಗೆದುಕೊಂಡು ಬದುಕಿಗೆ ಗುಡ್ ಬೈ ಹೇಳಿದ ನತದೃಷ್ಟ. ಸಿದ್ಧಾರ್ಥ್ ಹೆಗ್ಡೆ 2019ರ ಜುಲೈ ತಿಂಗಳಲ್ಲಿ ಮಂಗಳೂರು ಬಳಿಯ ನೇತ್ರಾವತಿ ನದಿಗೆ ಹಾರಿ ಸಾವನ್ನಪ್ಪಿದ್ದರು.
ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಅವರಿಗೆ ತನ್ನ ಸಾಮ್ರಾಜ್ಯ ಎಲ್ಲೋ ಲಯ ತಪ್ಪುತ್ತಿದೆ ಅನ್ನೋದು ಆಗಲೇ ಗೊತ್ತಾಗಿ ಹೋಗಿತ್ತು. ಸದ್ಯ ಕಾಫಿ ಡೇಯಲ್ಲಿ ನಡೀತಿರೋ ಬೆಳವಣಿಗೆಗಳು ಒಂದು ವರ್ಷದ ಹಿಂದೆ ಅವರು ತೆಗೆದುಕೊಂಡ ಆ ಕೆಟ್ಟ ನಿರ್ಧಾರದ ಸತ್ಯವನ್ನು ನೆನಪು ಮಾಡಿಸುತ್ತಿದೆ. ಹೌದು, ಈ ಬೃಹತ್ ಕಂಪನಿ ದಿವಾಳಿ ಆಗದಿದ್ರೂ ನಷ್ಟದಲ್ಲಿದೆ ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ತೀವ್ರ ಆರ್ಥಿಕ ಸಂಕಷ್ಟದಿಂದ ಪೀಠೋಪಕರಣಗಳನ್ನು ಉತ್ಪಾದಿಸುವ ಡ್ಯಾಫ್ಕೋ ಘಟಕವನ್ನು ಮುಚ್ಚಲಾಯಿತು. ಇದೀಗ ಕಾಫಿ ಬೀಜ ಕೊಟ್ಟ ಬೆಳೆಗಾರರಿಗೆ ಹಣ ನೀಡಲಾಗದೇ ಪರಿತಪಿಸುವ ಸ್ಥಿತಿ ಬಂದೊದಗಿದೆ. ಅಲ್ಲದೆ ಸಿದ್ದಾರ್ಥ್ ಹೆಗ್ಡೆ ಅವರ ಪತ್ನಿ ಹಾಗೂ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಮಗಳು ಮಾಳವಿಕಾಗೂ ಬಂಧನದ ಭೀತಿ ಎದುರಾಗಿದೆ.
ಇದನ್ನೂ ಓದಿ: ಲವ್ ಜಿಹಾದ್ ಭಯೋತ್ಪಾದನೆಯ ಮತ್ತೊಂದು ಮುಖ; ಶೋಭಾ ಕರಂದ್ಲಾಜೆ ಆರೋಪ
ಕಾಫಿ ಡೇಗೆ ಕಾಫಿ ಮಾರಾಟ ಮಾಡಿದ ಬೆಳೆಗಾರರು ಹಣ ಸಿಗದೇ ಕಳೆದ ಒಂದು ವರ್ಷದಿಂದಲೂ ಓಡಾಟ ನಡೆಸುವಂತಾಗಿದೆ. ಕಾಫಿ ಬೆಳೆಗಾರರಿಗೆ ಕೊಟ್ಟ ಚೆಕ್ ಗಳೆಲ್ಲಾ ಬೌನ್ಸ್ ಆಗಿದೆ. ಈ ಬಗ್ಗೆ ಕೇಳಿದರೂ ಸಮರ್ಪಕ ಉತ್ತರ ಸಿಗದೇ ಕಾಫಿ ಕೊಟ್ಟವರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. 300ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣ ಕೊಡದೇ ಕಾಫಿ ಡೇ ಸತಾಯಿಸುತ್ತಲೇ ಬರುತ್ತಿದ್ದು, ಕಾದು ಕಾದು ರೋಸಿ ಹೋಗಿರೋ ಕಾಫಿ ಬೆಳೆಗಾರರು ಇದೀಗ ಕಾನೂನು ಹೋರಾಟ ಆರಂಭಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಜೆಎಂಎಫ್ಸಿ ಕೋರ್ಟ್ ಇದೀಗ 8 ಮಂದಿಗೆ ಬಂಧನ ರಹಿತ ವಾರೆಂಟ್ ಜಾರಿ ಮಾಡಿದ್ದು, ಇದು ಸ್ವತಃ ಸಿದ್ದಾರ್ಥ್ ಹೆಗ್ಡೆ ಪತ್ನಿ ಮಾಳವಿಕಾಗೂ ಕಂಟಕವಾಗಿ ಪರಿಣಮಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ