• Home
  • »
  • News
  • »
  • state
  • »
  • Cafe Coffee Day: ಕೆಫೆ ಕಾಫಿ ಡೇ ನೂತನ ಸಿಇಓ ಆಗಿ ವಿ.ಜಿ. ಸಿದ್ಧಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ನೇಮಕ

Cafe Coffee Day: ಕೆಫೆ ಕಾಫಿ ಡೇ ನೂತನ ಸಿಇಓ ಆಗಿ ವಿ.ಜಿ. ಸಿದ್ಧಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ನೇಮಕ

ಸಿದ್ಧಾರ್ಥ್​ ಹೆಗ್ಡೆ- ಮಾಳವಿಕಾ ಹೆಗ್ಡೆ

ಸಿದ್ಧಾರ್ಥ್​ ಹೆಗ್ಡೆ- ಮಾಳವಿಕಾ ಹೆಗ್ಡೆ

Malavika Hegde: ಸಿದ್ಧಾರ್ಥ್​ ಹೆಗ್ಡೆ ಸಾವನ್ನಪ್ಪಿ ಒಂದು ವರ್ಷದ ಬಳಿಕ ಅವರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಮಗಳೂ ಆಗಿರುವ ಮಾಳವಿಕಾ ಹೆಗ್ಡೆ ಅವರನ್ನು ಕೆಫೆ ಕಾಫಿ ಡೇ ನೂತನ ಸಿಇಓ ಆಗಿ ನೇಮಕ ಮಾಡಲಾಗಿದೆ.

  • Share this:

ಬೆಂಗಳೂರು (ಡಿ. 8): ಕೆಫೆ ಕಾಫಿ ಡೇ ಸ್ಥಾಪಿಸಿ, ಕೊಡಗು, ಚಿಕ್ಕಮಗಳೂರು ಭಾಗದ ಕಾಫಿ ಬೆಳೆಗಾರರಿಗೆ ಹೊಸ ಮಾರುಕಟ್ಟೆ ಕಲ್ಪಿಸಿಕೊಟ್ಟ ವಿ.ಜಿ. ಸಿದ್ಧಾರ್ಥ್​ ಬಳಿಕ ವಿಶ್ವಾದ್ಯಂತ ತಮ್ಮ ಬ್ರಾಂಚ್​ಗಳನ್ನು ತೆರೆದರು. ಹಳ್ಳಿಗಳ ಸಾವಿರಾರು ಯುವಕ-ಯುವತಿಯರಿಗೆ ತರಬೇತಿ ನೀಡಿ, ಕಾಫಿ ಡೇಯಲ್ಲಿ ಕೆಲಸ ನೀಡಿದ ಸಿದ್ಧಾರ್ಥ್​ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಕಳೆದ ವರ್ಷ ಅವರು ಇದ್ದಕ್ಕಿದ್ದಂತೆ ಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಬಳಿಕ ತೆರವಾಗಿದ್ದ ಕೆಫೆ ಕಾಫಿ ಡೇ ಕಂಪನಿಯ ಸಿಇಓ ಆಗಿ ಇದೀಗ ಅವರ ಹೆಂಡತಿ ಹಾಗೂ ಮಾಜಿ ಸಿಎಂ ಎಸ್​.ಎಂ. ಕೃಷ್ಣ ಅವರ ಮಗಳು ಮಾಳವಿಕಾ ಅವರನ್ನು ನೇಮಕ ಮಾಡಲಾಗಿದೆ.


ಸಿದ್ಧಾರ್ಥ್​ ಹೆಗ್ಡೆ ಸಾವನ್ನಪ್ಪಿ ಒಂದು ವರ್ಷದ ಬಳಿಕ ಸಿಸಿಡಿಗೆ (ಕೆಫೆ ಕಾಫಿ ಡೇ) ನೂತನ ಸಿಇಓ ನೇಮಕವಾಗಿದ್ದಾರೆ. ಸಿದ್ಧಾರ್ಥ್​ ಅವರ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ನಿರ್ದೇಶಕಿಯಾಗಿದ್ದ ಮಾಳವಿಕಾ ಹೆಗ್ಡೆ ಇನ್ನು ಮುಂದೆ ಸಿಇಓ ಆಗಿ ಮುಂದುವರೆಯಲಿದ್ದಾರೆ. ಕಳೆದ ವರ್ಷ ಸಿದ್ಧಾರ್ಥ್​ ಮಂಗಳೂರು ಬಳಿಯ ನೇತ್ರಾವತಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.


ದೇಶದಾದ್ಯಂತ ಇರುವ ಕೆಫೆ ಕಾಫಿ ಡೇ ರೆಸ್ಟೋರೆಂಟ್​ಗಳ ವಹಿವಾಟನ್ನು ಇನ್ನು ಮಾಳವಿಕಾ ನೋಡಿಕೊಳ್ಳಲಿದ್ದಾರೆ. ಈ ಕಂಪನಿಯ ನಿರ್ದೇಶಕಿ ಆಗಿರುವ ಮಾಳವಿಕಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಸಿದ್ಧಾರ್ಥ್​ ನಿಧನದ ನಂತರ ಕಾಫಿ ಡೇ ಕಂಪನಿಯ ಸ್ವತಂತ್ರ ನಿರ್ದೇಶಕರಾಗಿದ್ದ ಎಸ್.ವಿ. ರಂಗನಾಥ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.


ಇದನ್ನೂ ಓದಿ: ಕೆಫೆ ಕಾಫಿ ಡೇ ಚೆಕ್​ ಬೌನ್ಸ್​ ಪ್ರಕರಣ; ಮಾಳವಿಕಾ ಸಿದ್ಧಾರ್ಥ್​ ಹೆಗ್ಡೆಗೆ ಜಾಮೀನು ಮಂಜೂರು


ಸೋಮವಾರ ಕೆಫೆ ಕಾಫಿ ಡೇಗೆ ಮಾಳವಿಕಾ ಅವರನ್ನು ಸಿಇಓ ಆಗಿ ನೇಮಕ ಮಾಡಲಾಗಿದೆ. ಸುಮಾರು 11 ಸಾವಿರ ಕೋಟಿ ರೂ. ಮೊತ್ತದ ಬಾಕಿ ಉಳಿಸಿಕೊಂಡಿದ್ದ ಸಿದ್ಧಾರ್ಥ್​ ಹೆಗ್ಡೆ ಅದೇ ಒತ್ತಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಭಾರೀ ಕಿರುಕುಳವಾಗುತ್ತಿದೆ ಎಂದು ಕೂಡ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಆರೋಪಿಸಲಾಗಿತ್ತು. ಸಿದ್ಧಾರ್ಥ್​ ಅವರ ಸಾವಿನ ನಂತರ ಕೆಫೆ ಕಾಫಿ ಡೇ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಉದ್ಭವವಾಗಿತ್ತು. ಸಿದ್ಧಾರ್ಥ್​ ಸಾವಿನ ಬಳಿಕ ಸಿಸಿಡಿ ಷೇರು ಮೌಲ್ಯವೂ ಭಾರೀ ಕುಸಿತ ಕಂಡಿತ್ತು. ಹೀಗಾಗಿ, ಕಳೆದ ಫೆಬ್ರವರಿಯಲ್ಲಿ ಷೇರು ವಹಿವಾಟನ್ನು ಸ್ಥಗಿತಗೊಳಿಸಲಾಗಿತ್ತು.


ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಮಗಳಾಗಿರುವ ಮಾಳವಿಕಾ ಇದೀಗ ಕೆಫೆ ಕಾಫಿ ಡೇ ನೂತನ ಸಿಇಓ ಆಗಿದ್ದಾರೆ. ಇದರ ಜೊತೆಗೆ ಸಿ.ಎಚ್​. ವಸುಂಧರಾ ದೇವಿ, ಗಿರಿ ದೇವನೂರು, ಮೋಹನ್ ರಾಘವೇಂದ್ರ ಕೊಂಡಿ ಅವರನ್ನು 2025ರ ಅಂತ್ಯದವರೆಗೆ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.


ಕೆಫೆ ಕಾಫಿ ಡೇಗೆ ಕಾಫಿ ಬೀಜ ಸರಬರಾಜು ಮಾಡುತ್ತಿದ್ದ ಬೆಳೆಗಾರರಿಗೆ ನೀಡಿದ್ದ ಕೋಟ್ಯಂತರ ರೂ. ಚೆಕ್ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ಸಿದ್ಧಾರ್ಥ್​ ಹೆಗ್ಡೆ ಅವರ ಹೆಂಡತಿ ಮಾಳವಿಕಾಗೆ ಮೂಡಿಗೆರೆ ಜೆಎಂಎಫ್​ಸಿ ಕೋರ್ಟ್​ ಜಾಮೀನುರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಬಳಿಕ ಮಾಳವಿಕಾ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು. ಕಳೆದ ತಿಂಗಳಷ್ಟೇ ಮಾಳವಿಕಾ- ಸಿದ್ಧಾರ್ಥ್​ ಅವರ ಮಗ ಅಮರ್ಥ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಗಳು ಐಶ್ವರ್ಯಾ ನಿಶ್ಚಿತಾರ್ಥ ನಡೆದಿತ್ತು.

Published by:Sushma Chakre
First published: