ಚಿಕ್ಕಮಗಳೂರು (ನ. 7): ಕಾಫಿ ಬೆಳೆಗಾರರಿಗೆ ನೀಡಿದ್ದ ಕೋಟ್ಯಂತರ ರೂ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ಸಿದ್ಧಾರ್ಥ್ ಹೆಗ್ಡೆ ಅವರ ಹೆಂಡತಿ ಮಾಳವಿಕಾಗೆ ಮೂಡಿಗೆರೆ ಜೆಎಂಎಫ್ಸಿ ಕೋರ್ಟ್ ಜಾಮೀನುರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಆ ಪ್ರಕರಣದಲ್ಲಿ ಮಾಳವಿಕಾ ಸಿದ್ದಾರ್ಥ್ ಹೆಗ್ಡೆಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇಂದು ಅವರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಮಾಳವಿಕಾ ಸೇರಿದಂತೆ ಐವರಿಗೆ ಮೂಡಿಗೆರೆ ಜೆಎಂಎಫ್ಸಿ ಕೋರ್ಟ್ನಿಂದ ಜಾಮೀನು ಮಂಜೂರಾಗಿದೆ.
ಕಾಫಿ ಬೆಳೆಗಾರರ ಕೋಟ್ಯಾಂತರ ರೂಪಾಯಿ ಸಾಲ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಕೋರ್ಟ್ ಮೆಟ್ಟಿಲೇರಿದ್ದರು. ಮಾಳವಿಕಾ ಸೇರಿದಂತೆ 8 ಮಂದಿಗೆ ನೋಟಿಸ್ ನೀಡಿದ್ದ ಕೋರ್ಟ್ ವಿಚಾರಣೆಗೆ ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಬಂಧನದ ವಾರೆಂಟ್ ಹೊರಡಿಸಿತ್ತು.ಕೆಫೆ ಕಾಫಿ ಡೇ ಸ್ಥಾಪಿಸಿ, ಚಿಕ್ಕಮಗಳೂರು, ಕೊಡಗು ಭಾಗದ ಸಾಕಷ್ಟು ಕಾಫಿ ಬೆಳೆಗಾರರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದ್ದ ಸಿದ್ಧಾರ್ಥ್ ಹೆಗ್ಡೆ 2019ರ ಜುಲೈ ತಿಂಗಳಲ್ಲಿ ಮಂಗಳೂರು ಬಳಿಯ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಇಂದಿನಿಂದ ವೀಕೆಂಡ್ನಲ್ಲಿ ವಾಹನ ಸಂಚಾರ ನಿಷೇಧ
ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಅವರಿಗೆ ತನ್ನ ಸಾಮ್ರಾಜ್ಯ ಎಲ್ಲೋ ಲಯ ತಪ್ಪುತ್ತಿದೆ ಅನ್ನೋದು ಆಗಲೇ ಗೊತ್ತಾಗಿ ಹೋಗಿತ್ತು. ಸದ್ಯ ಕಾಫಿ ಡೇಯಲ್ಲಿ ನಡೀತಿರೋ ಬೆಳವಣಿಗೆಗಳು ಒಂದು ವರ್ಷದ ಹಿಂದೆ ಅವರು ತೆಗೆದುಕೊಂಡ ಆ ಕೆಟ್ಟ ನಿರ್ಧಾರದ ಸತ್ಯವನ್ನು ನೆನಪು ಮಾಡಿಸುತ್ತಿದೆ. ಹೌದು, ಈ ಬೃಹತ್ ಕಂಪನಿ ದಿವಾಳಿ ಆಗದಿದ್ದರೂ ನಷ್ಟದಲ್ಲಿದೆ ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ತೀವ್ರ ಆರ್ಥಿಕ ಸಂಕಷ್ಟದಿಂದ ಪೀಠೋಪಕರಣಗಳನ್ನು ಉತ್ಪಾದಿಸುವ ಡ್ಯಾಫ್ಕೋ ಘಟಕವನ್ನು ಮುಚ್ಚಲಾಯಿತು. ಕಾಫಿ ಬೀಜ ಕೊಟ್ಟ ಬೆಳೆಗಾರರಿಗೆ ಹಣ ನೀಡಲಾಗದೇ ಪರಿತಪಿಸುವ ಸ್ಥಿತಿ ಬಂದೊದಗಿತ್ತು. ಅಲ್ಲದೆ ಸಿದ್ದಾರ್ಥ್ ಹೆಗ್ಡೆ ಅವರ ಪತ್ನಿ ಹಾಗೂ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಮಗಳು ಮಾಳವಿಕಾಗೂ ಬಂಧನದ ಭೀತಿ ಎದುರಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ