Cabinet Expansion: ಸಂಪುಟದಿಂದ ಕೈ ಬಿಡುವ ಭೀತಿ; ಬೆಳ್ಳಂಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾದ ಹೆಚ್​. ನಾಗೇಶ್

Karnataka Cabinet Expansion: ಅಬಕಾರಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡುವ ಚರ್ಚೆ ನಡೆದ ಬೆನ್ನಲ್ಲೆ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಅಬಕಾರಿ ಸಚಿವ ಎಚ್.ನಾಗೇಶ್

ಅಬಕಾರಿ ಸಚಿವ ಎಚ್.ನಾಗೇಶ್

  • Share this:
ಬೆಂಗಳೂರು (ಜ. 12): ಇನ್ನೆರಡು ದಿನಗಳಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಇನ್ನೂ 7 ನೂತನ ಸಚಿವರು ಸಂಪುಟ ಸೇರಿಕೊಳ್ಳಲಿದ್ದಾರೆ. ಇದರ ಜೊತೆಗೆ ಕೆಲವು ಹಾಲಿ ಸಚಿವರನ್ನು ಕೈಬಿಡಲಾಗುವುದು ಎನ್ನಲಾಗುತ್ತಿದೆ. ಆ ಪಟ್ಟಿಯಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಅವರ ಹೆಸರೂ ಕೇಳಿಬರುತ್ತಿರುವುದರಿಂದ ಹೆಚ್​. ನಾಗೇಶ್ ಅವರಿಗೆ ಮಂತ್ರಿ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಸಚಿವ ಹೆಚ್. ನಾಗೇಶ್ ಚರ್ಚೆ ನಡೆಸಿದ್ದಾರೆ.

ಅಬಕಾರಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡುವ ಚರ್ಚೆ ನಡೆದ ಬೆನ್ನಲ್ಲೆ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ಸಂಪುಟದಿಂದ ಕೈ ಬಿಡದಂತೆ ಸಿಎಂ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಲು ಭೇಟಿ ಮಾಡಿರುವ ಸಾಧ್ಯತೆಗಳಿವೆ. ಅಲ್ಲದೆ, ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾದ ನಂತರ ಕೋಪದಿಂದ ತೆರಳಿದ ಹೆಚ್. ನಾಗೇಶ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅವರನ್ನು ಸಂಪುಟದಿಂದ ಕೈಬಿಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ರಚನೆಗೆ ನಾನೇ ಮುಖ್ಯ ಕಾರಣ, ನನ್ನನ್ನು ಸಂಪುಟದಿಂದ ಕೈ ಬಿಡುವ ಮಾತೇ ಇಲ್ಲ; ಹೆಚ್. ನಾಗೇಶ್ ವಿಶ್ವಾಸ

ತಮ್ಮನ್ನು ಸಂಪುಟದಿಂದ ಕೈಬಿಡಲಾಗುವುದು ಎಂಬ ಸುದ್ದಿ ಹರಡುತ್ತಿದ್ದಂತೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸಚಿವ ಹೆಚ್. ನಾಗೇಶ್, ಬಿಜೆಪಿ ಸರ್ಕಾರ ರಚನೆಗೆ ನನ್ನಿಂದಲೇ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ನೀನು ಮೂರೂವರೆ ವರ್ಷ ಸಚಿವನಾಗಿರುತ್ತೀಯ ಎಂದು ಸಿಎಂ ಯಡಿಯೂರಪ್ಪ ನನಗೆ ಮಾತು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಂಬ ಎಂಬ ವಿಶ್ವಾಸ ನನಗಿದೆ. ನನ್ನನ್ನು ಸಂಪುಟದಿಂದ ಕೈ ಬಿಡುವ ಮಾತೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ನಾನು ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು. ಆಮೇಲೆ ಅಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಬಂದವನು. ಆಗ ನನ್ನನ್ನು ಎಷ್ಟೋ ಜನರು ಏನೇನೋ ಟೀಕೆ ಮಾಡಿದ್ದರು. ಹೀಗಿದ್ದರೂ ನಾನು ಅಲ್ಲಿ ರಾಜೀನಾಮೆ ಕೊಟ್ಟು ಬಂದಿದ್ದೇನೆ. ನನ್ನ ರೀತಿ ಯಾರು ಮಾಡ್ತಾರೆ ಹೇಳಿ? ಈ ಸರ್ಕಾರ ರಚನೆಗೆ ನಾನೇ ಪ್ರಮುಖ ಕಾರಣ. ಬಿಜೆಪಿ ಸರ್ಕಾರ ಬರೋದಕ್ಕೂ ನಾನೇ ಟರ್ನಿಂಗ್ ಪಾಯಿಂಟ್. ಹೀಗಾಗಿ ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೆಚ್. ನಾಗೇಶ್ ತಿಳಿಸಿದ್ದರು.
Published by:Sushma Chakre
First published: