ಬೆಂಗಳೂರು (ಜ. 11): ಕರ್ನಾಟಕದಲ್ಲಿ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಿದೆ. ನಿನ್ನೆ ತರಾತುರಿಯಲ್ಲಿ ದೆಹಲಿಗೆ ದೌಡಾಯಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಂಡು ಬಂದಿದ್ದರು. ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದ ಸಿಎಂ ಯಡಿಯೂರಪ್ಪ ಜ. 13ರಂದು ಸಂಪುಟ ವಿಸ್ತರಣೆಯಾಗುವ ಮಾಹಿತಿ ನೀಡಿದ್ದರು. ಆದರೆ, ಇಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ ಜ. 13 ಅಥವಾ 14ರಂದು ಸಂಪುಟ ವಿಸ್ತರಣೆಯಾಗಬಹುದು. ಸಂಪುಟ ವಿಸ್ತರಣೆಯಾಗುತ್ತದಾ ಅಥವಾ ಪುನಾರಚನೆ ಆಗುತ್ತದಾ ಎಂಬುದನ್ನು ನೀವೇ ಕಾದು ನೋಡಿ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರಾದ ಜೆ.ಪಿ ನಡ್ಡಾ, ಅರುಣ್ ಸಿಂಗ್ ಅವರ ಅನುಕೂಲತೆ ನೋಡಿಕೊಂಡು, ಅವರ ಸಮಯಾವಕಾಶ ಕೇಳಿಕೊಂಡು ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಮಾಡುತ್ತೇವೆ. 7 ಜನರನ್ನು ಸಂಪುಟಕ್ಕೆ ಹೊಸದಾಗಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗೊಂದಲದ ಹೇಳಿಕೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಸಿಎಂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ನಾಯಕರತ್ತ ಬೆರಳು ತೋರಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಯಡಿಯೂರಪ್ಪನವರ ಗೊಂದಲದ ಹೇಳಿಕೆ ವಿಚಾರ ಕುತೂಹಲ ಮೂಡಿಸಿದೆ. ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಹೈಕಮಾಂಡ್ನಿಂದ ಸ್ಪಷ್ಟ ಅನುಮತಿ ಸಿಕ್ಕಿಲ್ಲ. ಇನ್ನೂ ವರಿಷ್ಠರ ಅನುಮತಿ ಬೇಕು ಎನ್ನುತ್ತಿರುವ ಸಿಎಂ ಯಡಿಯೂರಪ್ಪ ಅರುಣ್ ಸಿಂಗ್ ಹಾಗೂ ಜೆ.ಪಿ ನಡ್ಡಾ ಅವರನ್ನು ಕರೆಸಿ ನಂತರ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ. ಅವರ ಕಾಲಾವಕಾಶ ನೋಡಿಕೊಂಡು ಸಂಪುಟ ವಿಸ್ತರಣೆಯ ತೀರ್ಮಾನ ಮಾಡಲಾಗುವುದು. ಆ ನಂತರ 7 ಜನ ಸಂಪುಟಕ್ಕೆ ಸೇರಿಕೊಳ್ಳಲಿದ್ದಾರೆ ಎನ್ನುತ್ತಿರುವ ಸಿಎಂ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಬಿ.ಎಲ್. ಸಂತೋಷ್ ಹೆಸರಲ್ಲಿ 30 ಲಕ್ಷ ರೂ. ವಂಚನೆ; ಕಳ್ಳ ಸ್ವಾಮಿ ಯುವರಾಜ್ ವಿರುದ್ಧ ಮತ್ತೊಂದು ಕೇಸ್ ದಾಖಲು
ಸಂಪುಟ ವಿಸ್ತರಣೆಗೆ ಜೆ.ಪಿ ನಡ್ಡಾ, ಅರುಣ್ ಸಿಂಗ್ ಬರಬೇಕಾ? ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಇದ್ದರೆ ಸಾಕಲ್ಲವೇ? ಸಿಎಂ ಯಡಿಯೂರಪ್ಪ ಒತ್ತಡದಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದಾರಾ? ಸಿಎಂಗೆ ಒತ್ತಡ ಹಾಕಿದ್ದು ಯಾರು? ಎಂಬಿತ್ಯಾದಿ ಅಂಶಗಳು ತೀವ್ರ ಕುತೂಹಲ ಕೆರಳಿಸಿವೆ.
ದೆಹಲಿಯ ಬಿಜೆಪಿ ನಾಯಕರು ನಾನು ಹೇಳಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿದ್ದಾರೆ. ಯಾರೆಲ್ಲ ಸಂಪುಟ ಸೇರುತ್ತಾರೆ ಎಂಬುದನ್ನು ಇಂದು ತೀರ್ಮಾನ ಮಾಡುತ್ತೇವೆ ಎಂದಿದ್ದರು. ಸಂಪುಟ ವಿಸ್ತರಣೆಯ ರೂಪುರೇಷೆಗಳು ಇಂದು ಮಧ್ಯಾಹ್ನದೊಳಗೆ ಸ್ಪಷ್ಟಗೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ