ಸಚಿವಾಕಾಂಕ್ಷಿಗಳನ್ನು ಸಮಾಧಾನಪಡಿಸಲು ಫೀಲ್ಡ್​ಗಿಳಿದ ತ್ರಿಮೂರ್ತಿಗಳು; ಸ್ಥಾನ ಸಿಗದ ಕೈ ಶಾಸಕರಿಂದ ಉರುಳುತ್ತ ಮೈತ್ರಿ ಸರ್ಕಾರ?

news18
Updated:September 6, 2018, 8:28 AM IST
ಸಚಿವಾಕಾಂಕ್ಷಿಗಳನ್ನು ಸಮಾಧಾನಪಡಿಸಲು ಫೀಲ್ಡ್​ಗಿಳಿದ ತ್ರಿಮೂರ್ತಿಗಳು; ಸ್ಥಾನ ಸಿಗದ ಕೈ ಶಾಸಕರಿಂದ ಉರುಳುತ್ತ ಮೈತ್ರಿ ಸರ್ಕಾರ?
news18
Updated: September 6, 2018, 8:28 AM IST
ಶ್ರೀನಿವಾಸ್ ಹಳಕಟ್ಟಿ, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.6): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಮಂತ್ರಿಗಿರಿಗೆ ಪೈಪೋಟಿ ಆರಂಭವಾಗಿದೆ. ಕೈ ಪಾಲಿಗೆ ಉಳಿದ ಆರು ಸ್ಥಾನಗಳಿಗೆ 20ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಿದ್ದಾರೆ. ಸ್ಥಾನ ಸಿಗದ ಶಾಸಕರಿಂದ ಮೈತ್ರಿ ಸರ್ಕಾರಕ್ಕೆ ಕುತ್ತು ಬರುವ ಲಕ್ಷಣಗಳು ಕಂಡುಬರುತ್ತಿರುವ ಕಾರಣ, ಇವರನ್ನು ಸಮಾಧಾನಪಡಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಡಿಕೆಶಿ ಫೀಲ್ಡ್​ಗೆ ಇಳಿದಿದ್ದಾರೆ.

ಸಚಿವಾಕಾಂಕ್ಷಿಗಳನ್ನು ಸಮಾಧಾನ ಪಡಿಸುವುದು ತ್ರಿಮೂರ್ತಿಗಳಿಗೆ ದೊಡ್ಡ ಚಾಲೆಂಜ್​ ಆಗಿದ್ದು, ಮಂತ್ರಿ ಸ್ಥಾನ ಕೇಳಬೇಡಿ ಪ್ಲೀಸ್ ಎಂದು ಮನವಿ ಮಾಡುತ್ತಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಡಾ.ಸುಧಾಕರ್, ಸಂಗಮೇಶ, ಎಂಟಿಬಿ ನಾಗರಾಜ್, ಬಿ.ಸಿ. ಪಾಟೀಲ್, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಸೇರಿ ಹತ್ತಕ್ಕೂ ಹೆಚ್ಚು ಶಾಸಕರ ಜೊತೆ ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸಿದ್ದಾರೆ.

ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿಯಬೇಡಿ, ಎರಡು ವರ್ಷ ತಾಳ್ಮೆಯಿಂದ ಕಾಯಿರಿ. ಮಂತ್ರಿ ಸ್ಥಾನ ಸಿಗದಿದ್ದಲ್ಲಿ, ನಿಮಗೆ ಬೇಕಾದ ನಿಗಮ ಮಂಡಳಿ ಕೊಡುತ್ತೇವೆ. ಆದರೆ, ಮಂತ್ರಿ ಸ್ಥಾನ ಮಾತ್ರ ಕೇಳಬೇಡಿ ಎಂದು ಆಕಾಂಕ್ಷಿಗಳ ಮನವೊಲಿಕೆಗೆ ತ್ರಿಮೂರ್ತಿಗಳು ಮುಂದಾಗಿದ್ದಾರೆ. ಆದರೆ, ನಾಯಕರ ಮಾತಿಗೆ ಶಾಸಕರು ಕ್ಯಾರೆ ಅನ್ನುತ್ತಿಲ್ಲ. "ಈ ವಿಸ್ತರಣೆಯಲ್ಲೇ ನಮ್ಮನ್ನು ಮಂತ್ರಿ ಮಾಡಿ,ಇಲ್ಲವಾದಲ್ಲಿ ನಮ್ಮ ಹಾದಿ ನಮಗೆ," ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಶಾಸಕರ ಈ ನಡೆಯಿಂದ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ.

ದಮ್ಮಯ್ಯ ಮಂತ್ರಿ ಸ್ಥಾನ ಕೇಳ್ಬೇಡಿ ಪ್ಲೀಸ್!

ಸಂಪುಟ ವಿಸ್ತರಣೆ ಕಾಂಗ್ರೆಸ್​ಗೆ ದೊಡ್ಡ ತಲೆನೋವಾಗಿದ್ದು, ಉಳಿದ ಸ್ಥಾನಗಳನ್ನು ಯಾರಿಗೆ ಕೊಡಬೇಕು, ಯಾರನ್ನು ಬಿಡಬೇಕು ಎಂಬುದೇ ಚಿಂತೆಯಾಗಿದೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದಲ್ಲಿ ನಮ್ಮ ಹಾದಿ ನಮಗೆ ಎಂದು ಶಾಸಕರು ಎಚ್ಚರಿಕೆ ನೀಡುತ್ತಿದ್ದಾರೆ. ಹಾಗೇನಾದರೂ ಅವರು ಮಾಡಿದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳುವುದು ನಿಶ್ಚಿತ. ಹೀಗಾಗಿ ಮಂತ್ರಿಗಿರಿ ಸಿಗದ ಶಾಸಕರ ಸಮಾಧಾನಪಡಿಸುವುದು ಕೈ ನಾಯಕರಿಗೆ ಅನಿವಾರ್ಯವಾಗಿದೆ. ಸಂಪುಟ ವಿಸ್ತರಣೆ ವೇಳೆ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಾಯಕರು ತೀರ್ಮಾನಿಸಿದ್ದಾರೆ.
Loading...

ಸಂಪುಟ ವಿಸ್ತರಣೆ ವೇಳೆ ಸದ್ಯ ಖಾಲಿ ಇರುವ ಆರು ಸ್ಥಾನಗಳಲ್ಲಿ ನಾಲ್ಕನ್ನು ಭರ್ತಿ ಮಾಡಿ, ಉಳಿದ ಎರಡು ಸ್ಥಾನಗಳನ್ನು ಹಾಗೆಯೇ ಉಳಿಸಿಕೊಳ್ಳುವ ಉಪಾಯವನ್ನು ನಾಯಕರು ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ತಂತ್ರ ಅಸಮಾಧಾನಿತರನ್ನು ಎಷ್ಟು ಸಮಾಧಾನ ಮಾಡುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ದೆಹಲಿಗೆ ದಿನೇಶ್ ಗುಂಡೂರಾವ್ ದೌಡು

ಲೋಕಸಭೆ ಚುನಾವಣೆ ವಿಚಾರವಾಗಿ ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್​ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಕಾಂಗ್ರೆಸ್​ ಅಧ್ಯಕ್ಷರು ಮತ್ತು ಖಜಾಂಚಿಗಳ ಸಭೆ ದೆಹಲಿಯಲ್ಲಿ ನಡೆಯಲಿದೆ. ಈ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ದೆಹಲಿಗೆ ದೌಡಾಯಿಸಿದ್ದಾರೆ. ಇವರ ಜೊತೆಗೆ ಕೆಪಿಸಿಸಿ ಖಜಾಂಚಿ ಕೃಷ್ಣಂರಾಜು ಅವರು ಕೂಡ ತೆರಳಲಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಗೆ ಸಂಪನ್ಮೂಲ ಕ್ರೂಢೀಕರಣ, ಅಭ್ಯರ್ಥಿಗಳ ಆಯ್ಕೆ, ಸದ್ಯ ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ, ಗತಿ ಸೇರಿ ಇತರೆ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ