ನಮ್ಮ ಭಿಕ್ಷೆಯಿಂದಲೇ ಅಧಿಕಾರಕ್ಕೆ ಬಂದು ಕೈ ಬಿಟ್ಟಿರಿ; ಯಡಿಯೂರಪ್ಪ ವಿರುದ್ಧ ಹೆಚ್. ವಿಶ್ವನಾಥ್ ಆಕ್ರೋಶ

Karnataka Cabinet Expansion: 17 ಶಾಸಕರ ಭಿಕ್ಷೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮ್ಮ ತ್ಯಾಗಕ್ಕೆ ಬೆಲೆಯಿಲ್ಲದಂತಾಗಿದೆ. ಯಡಿಯೂರಪ್ಪ ತಮ್ಮ ನಾಲಿಗೆಯನ್ನು ಕಳೆದುಕೊಂಡಿದ್ದಾರೆ ಎಂದು ಎಂಎಲ್​ಸಿ ಹೆಚ್​ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್. ವಿಶ್ವನಾಥ್.

ಹೆಚ್. ವಿಶ್ವನಾಥ್.

  • Share this:
ಮೈಸೂರು (ಜ. 13): ಇಂದು ಸಂಜೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಶಾಸಕರಲ್ಲಿ ಕೆಲವರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಶಾಸಕ ಮುನಿರತ್ನ, ಎಂಎಲ್​ಸಿ ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಅನುಮಾನವಾಗಿದೆ. ಈಗಾಗಲೇ ಅಬಕಾರಿ ಸಚಿವರಾಗಿರುವ ಹೆಚ್. ನಾಗೇಶ್ ಅವರನ್ನು ಕೂಡ ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ. ಹೀಗಾಗಿ, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಎಂಎಲ್​ಸಿ ಹೆಚ್. ವಿಶ್ವನಾಥ್, ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ 17 ಶಾಸಕರ ಭಿಕ್ಷೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ವೇಳೆ ನೀಡಿದ ಮಾತನ್ನು ಯಡಿಯೂರಪ್ಪ ಉಳಿಸಿಕೊಂಡಿಲ್ಲ. ನಮ್ಮ ತ್ಯಾಗಕ್ಕೆ ಬೆಲೆಯಿಲ್ಲದಂತಾಗಿದೆ. ಬ್ಯಾಗ್ ಹಿಡಿಯುವುದೇ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಇರುವ ಅರ್ಹತೆ ಎಂಬಂತಾಗಿದೆ. ಯಡಿಯೂರಪ್ಪ ತಮ್ಮ ನಾಲಿಗೆಯನ್ನು ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಯಡಿಯೂರಪ್ಪನವರ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಸಿಪಿ ಯೋಗೇಶ್ವರ್ ಮಂತ್ರಿ ಆಗೋಕೆ ವಿಜಯೇಂದ್ರ ಕಾರಣ. ಅದೇ ರೀತಿ ಯಡಿಯೂರಪ್ಪನವರ ಪ್ರತಿಷ್ಠೆ ನೆಲಸಮವಾಗೋಕೂ ಅವರ ಮಗ ವಿಜಯೇಂದ್ರನೇ ಕಾರಣ. ಇಡೀ ವಿಧಾನಸೌಧದಲ್ಲಿ ಅವರ ಅಣ್ಣ ತಮ್ಮಂದಿರೇ ಕುಳಿತಿದ್ದಾರೆ. ಇದರಿಂದ ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ ಎಂದು ಮೈಸೂರಿನಲ್ಲಿ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಂಪುಟಕ್ಕೆ ಏಳು ಹೊಸಬರ ಸೇರ್ಪಡೆ; ಸಿಎಂ ಯಡಿಯೂರಪ್ಪ ಘೋಷಣೆ – ಇಲ್ಲಿದೆ ಪಟ್ಟಿ

ಎಲ್ಲದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಯಡಿಯೂರಪ್ಪನವರೇ ಹೈಕಮಾಂಡ್. ಯೋಗೇಶ್ವರ್ ಬ್ಲಾಕ್​ಮೇಲ್ ತಂತ್ರ ಬಳಸಿ ಸಚಿವರಾಗುತ್ತಿದ್ದಾರೆ. ಅವರ ಬ್ಲಾಕ್ ಮೇಲ್ ಏನೆಂದು ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತದೆ. ನಮ್ಮ ರಾಜ್ಯದಲ್ಲಿ ಸಚಿವರಾಗೋಕೆ ಬ್ಯಾಗ್ ಹಿಡಿದುಕೊಳ್ಳೋದೇ ಮಾನದಂಡವೇ? ಯೋಗೇಶ್ವರ್‌ಗೆ ಕೇವಲ ಮುಂಬೈನಲ್ಲಿ ಬ್ಯಾಗ್ ಹಿಡಿದಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ನನಗೆ ನೋವಾಗಿದೆ. ನಾವು ಮನುಷ್ಯರು. ನಮಗೂ ಹೃದಯ ಇದೆ, ನಮಗೂ ನೋವಾಗುತ್ತೆ ಎಂದು ಮೈಸೂರಿನಲ್ಲಿ ಹೆಚ್.ವಿಶ್ವಾನಾಥ್ ಬೇಸರ ಹೊರಹಾಕಿದ್ದಾರೆ.

ಕರ್ನಾಟಕದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ. ಆ ಸಿದ್ದರಾಮಯ್ಯನನ್ನು ಕರೆದುಕೊಂಡು ಬಂದೆವು, ಅವರು ಕೃತಜ್ಞತೆ ಉಳಿಸಿಕೊಳ್ಳಲಿಲ್ಲ. ಯಡಿಯೂರಪ್ಪನವರಿಗಾಗಿ ತ್ಯಾಗ ಮಾಡಿದೆವು. ಆದರೆ ಅವರು ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ಯಡಿಯೂರಪ್ಪನವರು ಕೊಟ್ಟಿದ್ದ ಮಾತು ಉಳಿಸಿಕೊಂಡಿಲ್ಲ. ಇದನ್ನೆಲ್ಲ ಯಡಿಯೂರಪ್ಪ ನೆನಪು ಮಾಡಿಕೊಳ್ಳಬೇಕು. ಯಾರಿಂದ ಸರ್ಕಾರ ಬಂತು ಎಂಬುದನ್ನು ಸಿಎಂ ನೆನಪು ಮಾಡಿಕೊಳ್ಳಬೇಕು. 17 ಜನರ ಭಿಕ್ಷೆಯಲ್ಲಿ ಸರ್ಕಾರ ಇದೆ. ನಮ್ಮ ತ್ಯಾಗದಿಂದ ಸರ್ಕಾರ ಬಂದಿದೆ ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದು ಎಂಎಲ್‌ಸಿ ಹೆಚ್. ವಿಶ್ವನಾಥ್ ನೆನಪು ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: ಇಂದು ಸಚಿವ ಸಂಪುಟ ವಿಸ್ತರಣೆ; ಹೆಚ್​. ನಾಗೇಶ್​ಗೆ ಕೊಕ್, ಮುನಿರತ್ನ ಕೈ ತಪ್ಪಿತಾ ಮಂತ್ರಿಗಿರಿ?

ಯಡಿಯೂರಪ್ಪನವರೇ, ಕೊಟ್ಟ ಮಾತನ್ನು ಉಳಿಸಿಕೊಳ್ಳದ ನಿಮಗೆ ಆ ಸಿದ್ದಲಿಂಗೇಶ್ವರ ಒಳ್ಳೆಯದು ಮಾಡೋದಿಲ್ಲ. ನೀವು ಎಂತಹ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ? 33 ಸಚಿವ ಸ್ಥಾನಗಳಲ್ಲಿ 13 ವೀರಶೈವ, 11 ಜನ ಒಕ್ಕಲಿಗ, 4 ಜನ ಕುರುಬರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದೀರ. ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಹೆಚ್​. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ಯಾಕೆ ತೆಗಿಯಬೇಕು? ಮುನಿರತ್ನನವರ ಬದಲು ಯೋಗೇಶ್ವರ್​ಗೆ ಯಾಕೆ ಸಚಿವ ಸ್ಥಾನ ನೀಡುತ್ತಿದ್ದೀರ? ಯೋಗೇಶ್ವರ್ ಮೇಲೆ 420 ಕೇಸ್ ಇದೆ. ಅವನನ್ನು ಸಚಿವನನ್ನಾಗಿ ಮಾಡೋಕೆ ದುಂಬಾಲು ಬಿದ್ದಿದ್ದೀರ. ಅವನ ಬ್ಲಾಕ್​ಮೇಲ್ ಒಳಗೆ ನೀವೇನಾದರೂ ಸಿಕ್ಕಿಹಾಕಿಕೊಂಡಿದ್ದೀರಾ? ಅವನು ನಿಮಗಾಗಿ ರಾಜೀನಾಮೆ ಕೊಟ್ಟಿದ್ದನಾ? ಅಥವಾ ನೀವು ಯೋಗೇಶ್ವರ್​ಗೆ ಕೈಗೊಂಬೆ ಆಗಿದ್ದೀರಾ? ನಿಮ್ಮ ಮಾಜಿ‌ ಪಿಎ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡ್ರಾ ಹೇಳಿ ಎಂದು ಹೆಚ್. ವಿಶ್ವನಾಥ್ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಯಡಿಯೂರಪ್ಪನವರೇ ನಿಮ್ಮಿಂದ ನಾನು ಇದುವರೆಗೂ ಏನಾದರೂ ನಿರೀಕ್ಷೆ ಮಾಡಿದ್ದೆನಾ? ನಿಮ್ಮೊಂದಿಗೆ ಸ್ನೇಹದಲ್ಲಿ‌ ಇದ್ದಿದ್ದಕ್ಕೆ ನಿಮಗೆ ಸಹಾಯ ಮಾಡಿದೆವು. ಆದರೆ, ನೀವೇನು ಮಾಡಿದಿರಿ ಹೇಳಿ. ನೀವು ಏನು ಮಾತು ಕೊಟ್ಟಿದ್ರಿ ಅಂತ ಹೇಳಿ. ಯಡಿಯೂರಿಗೆ ಹೋಗಿ ಈ ಬಗ್ಗೆ ಮಾತನಾಡೋಣ ಬನ್ನಿ. ನಾವು ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನ ಸಿಎಂ ಮಾಡಿದ್ದೆ ಈ 17 ಜನ. ನಿಮ್ಮ ಸಂಪುಟದಲ್ಲಿ ಮುಸ್ಲಿಂ ಕೂಡ ಇರಬೇಕು‌, ಎಲ್ಲ ಜಾತಿ ಜನಾಂಗದವರು ಇರಬೇಕು. ಆದರೆ, ನಿಮ್ಮ ಸರ್ಕಾರದಲ್ಲೇನಾಗಿದೆ? ಕರ್ನಾಟಕದಲ್ಲಿ ಮಾತಿಗೆ ತಪ್ಪದ ನಾಯಕ ಅಂತ ನಾವೇ ನಿಮಗೆ ಬಿರುದು ಕೊಟ್ಟಿದ್ದೆವು. ಆದರೆ, ಅದೇ ಸುಳ್ಳಾಯ್ತು ಎಂದು ಮೈಸೂರಿನಲ್ಲಿ ಹೆಚ್. ವಿಶ್ವನಾಥ್ ಯಡಿಯೂರಪ್ಪನವರ ವಿರುದ್ಧ ಕಿಡಿ ಕಾರಿದ್ದಾರೆ.
Published by:Sushma Chakre
First published: