ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ನಡೆದಿದ್ದು, ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಧುಸ್ವಾಮಿ, ಬೆಂಗಳೂರಿನ ನಿರ್ವಾಚನಾ ನಿಲಯದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 13.50 ಕೋಟಿ ರೂ. ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಶಿಕ್ಷಣ ಇಲಾಖೆಯ ನಲಿ-ಕಲಿ ಕಾರ್ಯಕ್ರಮದಲ್ಲಿ ಕಲಿಕಾ ಸಾಮಗ್ರಿ ಕೊಡಲು 27 ಕೋಟಿ ರೂ.ಬಿಡುಗಡೆ, ವಿವಿಧ ಜಿಲ್ಲೆಗಳಲ್ಲಿ 120 ಆಂಬುಲೆನ್ಸ್ ಖರೀದಿಗೆ 32 ಕೋಟಿ ರೂ. ಬಿಡುಗಡೆ. ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ವಿದ್ಯಾಲಯ ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 263 ಕೋಟಿ ರೂ.ಬಿಡುಗಡೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು. ಹಾಗೆಯೇ ನಾಲ್ಕನೇ ಶನಿವಾರದ ರಜೆ ಅನ್ವಯವಾಗದ ಸರ್ಕಾರಿ ನೌಕರರಿಗೆ 15 ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ ಎಂದರು.
ಅನ್ನದಾಸೋಹ ಯೋಜನೆಯಡಿ 351 ಸಂಸ್ಥೆಗಳಿಗೆ ಅಕ್ಕಿ ಮತ್ತು ಗೋಧಿ ವಿತರಿಸಲಾಗುತ್ತಿತ್ತು. ಇದನ್ನು ಖಾಸಗಿ ಶಾಲೆಗಳಿಗೆ ನಿರ್ಬಂಧಿಸಲಾಗಿತ್ತು. ಇದೀಗ 18 ಕೋಟಿ ರೂ. ಸಬ್ಸಿಡಿ ಕೊಟ್ಟು, ಅಕ್ಕಿ ಮತ್ತು ಗೋಧಿ ವಿತರಣೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಇದನ್ನು ಓದಿ: ಸಂಪುಟ ಪುನರ್ ರಚನೆ ಇಲ್ಲ, ವಿಸ್ತರಣೆ ಮಾತ್ರ; ಸಿಎಂ ಬಿಎಸ್ವೈ ಭರವಸೆ
ವಿವಿಧ ರೀತಿಯ 51 ಪ್ರಕರಣಗಳನ್ನು ವಾಪಸ್ ಪಡೆಯಲು ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸವದತ್ತಿಯಲ್ಲಿನ ಕಳಸಾ-ಬಂಡೂರಿ ವಿಚಾರದಲ್ಲಿ ದಾಖಲಾದ ರೈತರ ಮೇಲಿನ ಪ್ರಕರಣ ವಾಪಸ್, ಮಂಡ್ಯದ ಮಾದೇಗೌಡರ ಹೋರಾಟ ಹಾಗೂ ರೈತರ ಮೇಲಿನ 35 ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಮಾಧುಸ್ವಾಮಿ, ಗೋಕರ್ಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಯವರ ವಿರುದ್ದ ಅಶ್ಲೀಲ ಸಿಡಿ ಬಿಡುಗಡೆ ಮಾಡಿದ್ದ ಪ್ರಕರಣವನ್ನು ಹಿಂದಿನ ಸರ್ಕಾರ ವಾಪಸ್ ಪಡೆದಿತ್ತು. ಆದರೆ ಮತ್ತೆ ಈ ಪ್ರಕರಣವನ್ನು ಮುಂದುವರೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ