ಸಿಫೋರ್ ಚುನಾವಣೆ ಸಮೀಕ್ಷೆ: ಕಾಂಗ್ರೆಸ್​ಗೆ 126, ಬಿಜೆಪಿಗೆ 70 ಸ್ಥಾನ?

ಕಾಂಗ್ರೆಸ್ ಮತ್ತು ಬಿಜೆಪಿ ಧ್ವಜ

ಕಾಂಗ್ರೆಸ್ ಮತ್ತು ಬಿಜೆಪಿ ಧ್ವಜ

 • Share this:
  - ನ್ಯೂಸ್ 18 ಕನ್ನಡ

  ಬೆಂಗಳೂರು(ಮಾ 26): 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಲಿದ್ದು, ಮತ್ತೊಮ್ಮೆ ಅಧಿಕಾರ ಗದ್ದುಗೆ ಏರಲಿದೆ ಎಂದು ಸಿ ಪೋರ್ ಸಮೀಕ್ಷಾ ಸಮಿತಿಯ ಮುಖ್ಯಸ್ಥ ಪ್ರೇಮ್ ಚಂದ್ ಪಾಲೆಟಿ ತಿಳಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳ ಪೈಪೋಟಿಯನ್ನು ಎದುರಿಸಿ ಕಾಂಗ್ರೆಸ್ ಜಯಸಾಧಿಸಲಿದೆ ಎಂದಿದ್ದಾರೆ.

  ಅವರ ಪ್ರಕಾರ ಕಾಂಗ್ರೆಸ್ ಪಕ್ಷ ಶೇ 46ರಷ್ಟು ಮತ ಪಡೆಯಲಿದ್ದು, ಕಳೆದ ಬಾರಿಯ 2013ರ ಚುನಾವಣೆಗಿಂತ ಶೆ. 9ರಷ್ಟು ಹೆಚ್ಚು ಮತ ಪಡೆಯಲಿದೆ. ಒಟ್ಟಾರೆ ಕಾಂಗ್ರೆಸ್  ರಾಜ್ಯದಲ್ಲಿ 126 ಸೀಟ್ ಗಳಿಸಲಿದೆ ಎಂದು ಈ ಸಮೀಕ್ಷೆ ಅಂದಾಜು ಮಾಡಿದೆ.

  ಬಿಜೆಪಿ ಶೇ.31ರಷ್ಟು ಮತ ಪಡೆದು 70 ಕ್ಷೇತ್ರದಲ್ಲಿ ಜಯ ಸಾಧಿಸಲಿದೆ. ಜೆಡಿಎಸ್ ಶೆ.16ರಷ್ಟು ಮತ ಪಡೆದು 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.  ಮುಸ್ಲಿಂ ಮತ್ತು ದಲಿತರ ಮತಗಳು ಕಾಂಗ್ರೆಸ್​ ಪರ ಹೋಗುವುದರಿಂದ ಶೇ 4ರಷ್ಟು ಮತಗಳು ಜೆಡಿಎಸ್ ಕೈತಪ್ಪಲಿರುವುದನ್ನು ಸಮೀಕ್ಷೆ ತಿಳಿಸಿದೆ.

  ಹೈದರಾಬಾದ್-ಕರ್ನಾಟಕ, ಬೆಂಗಳೂರು, ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಅತಿಹೆಚ್ಚಿನ ಮುನ್ನಡೆ ಸಾಧಿಸಲಿದೆ. ಇನ್ನು ಮುಂಬೈ-ಕರ್ನಾಟಕ, ಕರಾವಳಿ ಪ್ರಾಂತ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆ ಹೆಚ್ಚಿದೆ.

  ಭಾಗ್ಯ ಯೋಜನೆಗಳ ಮೂಲಕ ಜನಪ್ರಿಯರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ  ಯೋಜನೆಗಳು ಈ ಬಾರಿ ಚುನಾವಣೆಯಲ್ಲಿ ಕೈ ಹಿಡಿಯಲು ಸಹಾಯಕವಾಗಲಿದೆ. ದಲಿತ, ಕೃಷಿ, ಹಿಂದುಳಿದ ವರ್ಗ ಸೇರಿದಂತೆ ಶೇ. 65ರಷ್ಟು ಬಡಜನರು ಕಾಂಗ್ರೆಸ್ ತಮ್ಮ ಕಲ್ಯಾಣಕ್ಕೆ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  2013ರ ಚುನಾವಣೆಯ ವೇಳೆಯಲ್ಲೂ ಸಿಫೋರ್ ಸಮೀಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಬರುಬಹುದೆಂದು ಸರಿಯಾಗಿಯೇ ಅಂದಾಜಿಸಿತ್ತು. ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸರಿಯಾಗಿಯೇ ಪ್ರೆಡಿಕ್ಟ್ ಮಾಡಿದ್ದು ಇದೇ ಸಿಫೋರ್ ಸಮೀಕ್ಷೆ.

  ಚುನಾವಣಾ ಪೂರ್ವ ಸಮೀಕ್ಷೆ ನಡೆಸಿರುವ ಸಿ ಪೋರ್  154 ವಿಧಾನಸಭಾ ಚುನಾವಣೆಯಲ್ಲಿ 22,357 ಮತದಾರರನ್ನು ಪ್ರಶ್ನೆಗಳ ಮೂಲಕ ಸಮೀಕ್ಷೆ ನಡೆಸಿದೆ. 2,368 ಚುನಾವಣಾ ಮತಕಟ್ಟೆಗಳಲ್ಲಿ 326 ನಗರ ಹಾಗೂ 977 ಗ್ರಾಮೀಣ ಕ್ಷೇತ್ರಗಳ ಜನರ ಸಮೀಕ್ಷೆ ಮಾಡಲಾಗಿದೆ. ವಿವಿಧ ಸಮುದಾಯ, ಜಾತಿ ಜನರನ್ನು ಸಮೀಕ್ಷೆ ನಡೆಸಿದ್ದು, ಶೇ.1ರಷ್ಟು ತಪ್ಪಿದ್ದರೂ, ಶೇ.95ರಷ್ಟು ವಿಶ್ವಾಸನೀಯ ಮಟ್ಟವೊಂದಿದೆ ಎಂದು ಸಂಸ್ಥೆ ತಿಳಿಸಿದೆ.

  "ಸಿಫೋರ್ ಸಮೀಕ್ಷೆ ವಿಶ್ವಾಸಾರ್ಹ"
  ಸಿಫೋರ್ ಸಮೀಕ್ಷೆಯನ್ನು ಕಾಂಗ್ರೆಸ್ ಪಕ್ಷವೇ ಪ್ರಾಯೋಜಿಸಿದೆ ಎಂಬ ಸುದ್ದಿಯನ್ನು ಸಿಫೋರ್ ಸಂಸ್ಥೆ ಮುಖ್ಯಸ್ಥ ಪ್ರೇಮ್ ಚಂದ್ ಪಾಲೆಟಿ ಅಲ್ಲಗಳೆದರು. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷದ ಅಣತಿಯಿಂದ ಮಾಡದೇ, ಖುದ್ದಾಗಿಯೇ ಸಮೀಕ್ಷೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಯಾವುದೇ ರಾಜಕೀಯ ಪಕ್ಷ ಬಂದು ಕೇಳಿಕೊಂಡರೂ ತಾವು ಸಮೀಕ್ಷೆ ಮಾಡಿಕೊಡುತ್ತೇವೆ. ಆದರೆ, ತಮ್ಮ ಸಮೀಕ್ಷೆಯ ವಿಶ್ವಾಸಾರ್ಹತೆ ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಯಾರು ಬೇಕಾದರೂ ಕೂಡ ತಮ್ಮ ಕಚೇರಿಗೆ ಬಂದು ದಾಖಲೆಗಳನ್ನು ಪರಿಶೀಲಿಸಬಹುದು ಎಂದು ಸಿಫೋರ್ ಸಂಸ್ಥೆಯ ಮುಖ್ಯಸ್ಥರು ಹೇಳಿದರು.

  (ಹಕ್ಕು ನಿರಾಕರಣೆ: ಈ ಮೇಲೆ ತಿಳಿಸಿದ ಸಮೀಕ್ಷೆಯನ್ನು ನ್ಯೂಸ್18 ಕನ್ನಡ ವಾಹಿನಿ ಮಾಡಿಸಿದ್ದಲ್ಲ. ಈ ಸಮೀಕ್ಷೆಗೂ ನಮ್ಮ ವಾಹಿನಿಗೂ ಯಾವುದೇ ಸಂಬಂಧವಿಲ್ಲ. ಇದರ ನಿಖರತೆಯನ್ನು ನಾವು ದೃಢೀಕರಿಸಲು ಸಾಧ್ಯವಿಲ್ಲ)
  First published: