HOME » NEWS » State » BYPOLL VOTING TODAY IN 16 CONSTITUENCIES INCLUDING 3 FROM KARNATAKA SNVS

Voting - ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಇಂದು ಮತದಾನ; ದೇಶಾದ್ಯಂತ 16 ಕ್ಷೇತ್ರಗಳಿಗೆ ಉಪಚುನಾವಣೆ

ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಚುನಾವಣೆ ಇದ್ದು 45 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ 2 ಲೋಕಸಭಾ ಕ್ಷೇತ್ರ ಹಾಗೂ 14 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ಇದೆ.

Vijayasarthy SN | news18-kannada
Updated:April 17, 2021, 7:33 AM IST
Voting - ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಇಂದು ಮತದಾನ; ದೇಶಾದ್ಯಂತ 16 ಕ್ಷೇತ್ರಗಳಿಗೆ ಉಪಚುನಾವಣೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಏ. 17): ಕೋವಿಡ್ ಮಹಾಮಾರಿಯ ಎರಡನೇ ಅಲೆ ಕಂಟಕದ ನಡುವೆಯೂ ಅಬ್ಬರದ ಚುನಾವಣಾ ಪ್ರಚಾರ ಕಂಡಿದ್ದ ಮೂರು ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ, ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಬೀದರ್​ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ನಡೆಯುವ ಮತದಾನದಲ್ಲಿ ಒಟ್ಟು 30 ಅಭ್​ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ಇದೇ ವೇಳೆ, ಕೋಲ್ಕತಾ ವಿಧಾನಸಭೆಗೆ ಇಂದು ಐದನೇ ಹಂತದ ಚುನಾವಣೆ ಇದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ 16 ಕ್ಷೇತ್ರಗಳಿಗೆ ಇಂದು ಉಪಚುನಾವಣೆ ಇದೆ. ಇದರಲ್ಲಿ ಬೆಳಗಾವಿ ಮತ್ತು ತಿರುಪತಿ ಲೋಕಸಭಾ ಕ್ಷೇತ್ರಗಳೂ ಒಳಗೊಂಡಿವೆ.

ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು ಕೋವಿಡ್​ನಿಂದಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರೂ ಕೂಡ ಕೋವಿಡ್​ಗೆ ಬಲಿಯಾಗಿದ್ದರು. ಹೀಗಾಗಿ ಆ ಕ್ಷೇತ್ರ ತೆರವಾಗಿತ್ತು. ಇನ್ನು, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗೆ ಪಕ್ಷಾಂತರ ಮಾಡಿದ್ದರಿಂದ ಶಾಸಕ ಸ್ಥಾನಕ್ಕೆ ಅನರ್ಹಗೊಂಡಿದ್ದರು. ಹೀಗಾಗಿ, ಈ ಕ್ಷೇತ್ರ ಕೂಡ ತೆರವಾಗಿತ್ತು. ಈಗ ಈ ಮೂರು ಕ್ಷೇತ್ರಗಳಲ್ಲಿ ಇದೀಗ ಉಪಚುನಾವಣೆ ಎದುರಾಗಿದೆ. ಇವತ್ತು ನಡೆಯುವ ಮತದಾನಕ್ಕೆ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಮಹಿಳಾ ಮತದಾರರಿಗೆ ಅನುಕೂಲಕ್ಕೆಂದು ಪ್ರತ್ಯೇಕವಾಗಿ ಕೆಲ ಸಖಿ ಬೂತ್​ಗಳನ್ನೂ ತೆರೆಯಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮತದಾನಕ್ಕೆ ಅವಕಾಶ ಇದೆ. ಸಂಜೆ 6ರಿಂದ 7 ಗಂಟೆಗೆ ಕೋವಿಡ್ ಸೋಂಕಿತ ಮತದಾರರಿಗೆ ವೋಟಿಂಗ್ ಅವಕಾಶ ಒದಗಿಸಲಾಗಿದೆ.

ಬೆಳಗಾವಿ ಉಪಚುನಾವಣೆ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್​​ನಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಇವರಿಬ್ಬರ ಮಧ್ಯೆ ನೇರ ಪೈಪೋಟಿ ಇದೆ. ಮೂಲತಃ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಈಚಿನ 20 ವರ್ಷಗಳಿಂದ ಬಿಜೆಪಿ ಬಲವಾಗಿ ಬೇರುಬಿಟ್ಟಿದೆ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತಾ ಬರುತ್ತಿದೆ. ಈ ಬಾರಿ ಸತೀಶ್ ಜಾರಕಿಹೊಳಿ ಅವರು ಸ್ಪರ್ಧಾ ಕಣದಲ್ಲಿರುವುದು ಕಾಂಗ್ರೆಸ್​ಗೆ ತನ್ನ ಭದ್ರಕೋಟೆಯನ್ನು ಮರಳಿ ತೆಕ್ಕೆಗೆ ಹಾಕಿಕೊಳ್ಳುವ ಹುಮ್ಮಸ್ಸು ಕಾಣಿಸುತ್ತಿದೆ.

ಇದನ್ನೂ ಓದಿ: ಹಿರಿಯ ಹಸುವಿನ ಅಂತ್ಯ ಸಂಸ್ಕಾರ ವೇಳೆ ನಡೆಯಿತು ಅಚ್ಚರಿ; ಗೋವುಗಳ ಅಂತಃಕರಣ ಕಂಡು ಸ್ವಾಮೀಜಿಗಳೇ ಮೂಕರಾದರು!

ಮಸ್ಕಿ ಉಪಚುನಾವಣೆ: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸ್ಪರ್ಧಾ ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳಿದ್ದಾರೆ. ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಬಸನಗೌಡ ಪಾಟೀಲ ತುರ್ವಿಹಾಳ ಅವರು ಇಲ್ಲಿ ಪ್ರಧಾನ ಸ್ಪರ್ಧಾಳುಗಳು. ಕಳೆದ ಬಾರಿ ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದ ಇವರಿಬ್ಬರ ಮಧ್ಯೆ ರೋಚಕ ಕದನ ಇತ್ತು. ಈ ಬಾರಿಯೂ ತುರುಸಿನ ಸ್ಪರ್ಧೆ ನಿರೀಕ್ಷಿಸಲಾಗಿದೆ. ಇಲ್ಲಿ ಐವರು ಪಕ್ಷೇತರರೂ ಕಣದಲ್ಲಿದ್ದಾರೆ.

ಬಸವಕಲ್ಯಾಣ ಉಪಚುನಾವಣೆ: ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 12 ಅಭ್ಯರ್ಥಿಗಳಿದ್ದಾರೆ. ಇಲ್ಲಿಯ ಸ್ಪರ್ಧಾ ಕಣ ಬಹಳ ಕುತೂಹಲಕಾರಿಯಾಗಿದೆ. ಬಿಜೆಪಿಯಿಂದ ಶರಣು ಸಲಗರ ಹಾಗೂ ಕಾಂಗ್ರೆಸ್​ನಿಂದ ಮಾಲಾ ಬಿ ಅವರು ಸ್ಪರ್ಧಿಸಿದ್ದಾರೆ. ಜೆಡಿಎಸ್​ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ ಕಣದಲ್ಲಿದ್ದರೆ, ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸೆಡ್ಡು ಹೊಡೆದಿದ್ದಾರೆ. ಇಲ್ಲಿ ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಜೆಡಿಎಸ್​ನ ಮುಸ್ಲಿಮ್ ಅಭ್ಯರ್ಥಿಯು ಇಲ್ಲಿ ಕಾಂಗ್ರೆಸ್​ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನ ಒಡೆಯುವ ಸಾಧ್ಯತೆ ಇದೆ. ಖೂಬಾ ಅವರು ಬಿಜೆಪಿ ಅಭ್ಯರ್ಥಿಗೆ ಕಂಟಕವಾಗುವ ಸಾಧ್ಯತೆ ಇದೆ. ಹೀಗಾಗಿ, ಅಂತಿಮವಾಗಿ ಯಾರಿಗೆ ಗೆಲುವಿನ ಮಾಲೆ ಸಿಗುತ್ತದೆ ಎಂಬುದು ಕುತೂಹಲದ ಸಂಗತಿ.

ಇದೇ ವೇಳೆ, ಇತರ 11 ರಾಜ್ಯಗಳಲ್ಲೂ ಕೆಲ ಕ್ಷೇತ್ರಗಳಿಗೆ ಉಪಚುನಾವಣೆ ಇಂದು ಇದೆ. ರಾಜಸ್ಥಾನದ 3 ವಿಧಾನಸಭಾ ಕ್ಷೇತ್ರಗಳು, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ನಾಗಾಲೆಂಡ್, ಒಡಿಶಾ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ್ ಮತ್ತು ಮಿಜೋರಾಮ್ ರಾಜ್ಯಗಳಲ್ಲಿ ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ಇದ್ದು ಮತದಾನ ಆಗುತ್ತಿದೆ. ಆಂಧ್ರದ ತಿರುಪತಿ ಲೋಕಸಭಾ ಕ್ಷೇತ್ರಕ್ಕೂ ಇಂದು ಉಪಚುನಾವಣೆ ಇದೆ. ಕರ್ನಾಟಕದ್ದೂ ಒಳಗೊಂಡಂತೆ ಒಟ್ಟು 2 ಲೋಕಸಭಾ ಕ್ಷೇತ್ರ ಹಾಗೂ 14 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ಇದೆ.ಅತ್ತ, ಪಶ್ಚಿಮ ಬಂಗಾಳ ವಿಧಾನಸಭೆಗೆ ಇಂದು ಐದನೇ ಹಂತದ ಮತದಾನ ನಡೆಯುತ್ತಿದೆ. ಇಲ್ಲಿಯ 45 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನವಾಗುತ್ತಿದ್ದು 342 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಒಟ್ಟು 294 ಕ್ಷೇತ್ರಗಳಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಇವತ್ತಿನದ್ದು ಐದನೇ ಹಂತದ್ದು. ಏಪ್ರಿಲ್ 29ರವರೆಗೆ ಇನ್ನೂ ಮೂರು ಹಂತಗಳ ಚುನಾವಣೆ ನಡೆಯುತ್ತದೆ. ಈ ಎಲ್ಲಾ ಚುನಾವಣೆ, ಉಪಚುನಾವಣೆಗಳ ಮತ ಎಣಿಕೆ ಕಾರ್ಯ ಮೇ 2ರಂದು ನಡೆಯಲಿದೆ. ಅಂದೇ ಬಹುತೇಕ ಎಲ್ಲಾ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.
Published by: Vijayasarthy SN
First published: April 17, 2021, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories