BY Vijayendra: ಈಗಲೇ ಸಿಎಂ ಅನ್ನಬೇಡಿ, ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ: ಬಿ ವೈ ವಿಜಯೇಂದ್ರ ಮನವಿ
ಕಾರ್ಯಕ್ರಮ ಮುಗಿಯುತ್ತಿದ್ದಂತೆ ವಿಜಯೇಂದ್ರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರು ಮುಗಿಬಿದ್ದರು. ಕೇಸರಿ ಶಾಲು ಹಾಕಿ ಸೆಲ್ಪಿ ತೆಗೆದುಕೊಂಡರು. ಇದೇ ವೇಳೆ ಮುಂದಿನ ಸಿಎಂ ಬಿ.ವೈ.ವಿಜಯೇಂದ್ರ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿದರು.
ಹಾಸನ: ರಾಜಕೀಯದಲ್ಲಿ ನಾನಿನ್ನೂ ಅಂಬೆಗಾಲು ಇಡುತ್ತಿದ್ದೇನೆ. ಸಚಿವರಾದ ಮುರುಗೇಶ್ ನಿರಾಣಿ ಹಾಗೂ ನಾರಾಯಗೌಡ ಹಿರಿಯರಿದ್ದು, ಅವರ ಪ್ರೀತಿಗೆ ನಾನು ಋಣಿಯಾಗಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಸಚಿವರಾದ ನಾರಾಯಣಗೌಡ, ಮುರುಗೇಶ್ ನಿರಾಣಿ ಹೇಳಿಕೆ ಕುರಿತು ಹಾಸನದಲ್ಲಿ (Hassan) ಪ್ರತಿಕ್ರಿಯಿಸಿದ ಅವರು, ಪ್ರಾಮಾಣಿಕವಾಗಿ, ಸ್ಪಷ್ಟವಾಗಿ ಪಕ್ಷ (BJP) ಏನು ನನಗೆ ಜವಾಬ್ದಾರಿ ಕೊಡುತ್ತೋ ಅದನ್ನು ತೆಗೆದುಕೊಂಡು ಪಕ್ಷ ಸಂಘಟನೆ ಮಾಡುವೆ. ನಾನು ಇನ್ನೂ ಶಾಸಕನೇ ಆಗಿಲ್ಲ. ಈ ರೀತಿ ಮುಖ್ಯಮಂತ್ರಿ ಅನ್ನೋದನ್ನು ಯಾವುದೇ ಕಾರಣಕ್ಕೂ ಒಪ್ಪೋದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಬಲಪಡಿಸುವ ಕೆಲಸವನ್ನು ನಮ್ಮೆಲ್ಲರ ಮುಖಂಡರ ಜೊತೆ ಸೇರಿ ಮಾಡ್ತಿನಿ ಎಂದು ಅವರು ತಿಳಿಸಿದ್ದಾರೆ.
ಸಚಿವರ ಹೇಳಿಕೆ ಯಾವುದೇ ಕಾರಣಕ್ಕೂ ಸರಿಯಲ್ಲ, ನಾನು ಹಿಂದೆ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಈಗ ರಾಜ್ಯದ ಉಪಾಧ್ಯಕ್ಷನಾಗಿ ಪಕ್ಷ ಕೆಲಸ ಕೊಟ್ಟಿದೆ. ಯಶಸ್ವಿಯಾಗಿ ಅದನ್ನು ನೆರವೇರಿಸುತ್ತಾ, ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.
ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಮಹಿಳೆಯರು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್ ಗೆಲುವು ಖಚಿತ ಎಂದು ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ವಿಜಯೇಂದ್ರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರು ಮುಗಿಬಿದ್ದರು. ಕೇಸರಿ ಶಾಲು ಹಾಕಿ ಸೆಲ್ಪಿ ತೆಗೆದುಕೊಂಡರು. ಇದೇ ವೇಳೆ ಮುಂದಿನ ಸಿಎಂ ಬಿ.ವೈ.ವಿಜಯೇಂದ್ರ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿದರು.
ಯಾವ ಕ್ಷೇತ್ರ ಎಂದು ಪಕ್ಷ ತೀರ್ಮಾನಿಸುತ್ತೆ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅಭಿವೃದ್ಧಿ ಕೆಲಸ ಮಾಡಿದ ಸಂದರ್ಭದಲ್ಲಿ, ಅವರು ಮುಖ್ಯಮಂತ್ರಿಯಾಗಿ ಮುಂದುವರಿದರೆ ನಮ್ಮ ಪಕ್ಷಕ್ಕೆ ಭವಿಷ್ಯ ಇಲ್ಲ ಅಂತ ಹೇಳಿ ವಿರೋಧ ಪಕ್ಷದವರೆಲ್ಲ ಸೇರಿ ಚೂರಿ ಹಾಕುವ ಕೆಲಸ ಮಾಡಿದ್ರು. ಇದನ್ನು ರಾಜ್ಯದ ಜನ ಕೂಡ ನೋಡಿದ್ದಾರೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ. ಚುನಾವಣೆಗೆ ಸ್ಪರ್ಧಿಸುವ ವಿಚಾರ, ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ತೀರ್ಮಾನವನ್ನು ಪಕ್ಷ ತೀರ್ಮಾನಿಸಲಿದ್ದು, ಅದರ ನಿರ್ಧಾರದಂತೆ ನಾನು ಕೂಡ ಮುಂದೆ ನಡೆಯುತ್ತೇನೆ ಎಂದು ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಬಿಜೆಪಿ ಪರ ಒಲವು ಇದಕ್ಕೂ ಮುನ್ನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾದ್ಯಕ್ಷ ವಿಜಯೇಂದ್ರ, ಹಳೇ ಮೈಸೂರು ಭಾಗಕ್ಕೆ ಈ ವಿಧಾನಪರಿಷತ್ ಚುನಾವಣೆ, ಮುಂದಿನ ವಿದಾನಸಭೆ ಚುನಾವಣೆಗೆ ಪೂರಕವಾಗಲಿದೆ. ನಿನ್ನೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೆಂದೂ ಕಾಣದ ಉತ್ಸಾಹ ಕಂಡಿದೆ. ನಮ್ಮ ಕಾರ್ಯಕರ್ತರು ಸಾಕಷ್ಟು ಉತ್ಸಾಹದಲ್ಲಿ ಇದ್ದಾರೆ. ವಿಧಾನಪರಿಷತ್ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಎಂದು ಅವರು ತಿಳಿಸಿದರು.
ತಂದೆಯ ಗುಣಗಾನ ಮಾಡಿದ ವಿಜಯೇಂದ್ರ ಸಿದ್ದಗಂಗಾ ಶ್ರೀಗಳನ್ನು ನಡೆದಾಡುವ ದೇವರು ಎಂದು ಎಲ್ಲರಊ ಪೂಜಿಸುತ್ತೇವೆ. ಹಾಗೆಯೇ ನಡೆದಾಡುವ ಸರ್ಕಾರ ಎಂಬಂತೆ ಯೋಜನೆಗಳನ್ನು ಮನೆಗೆ ತಲುಪಿಸಿದ್ದು ಬಿ.ಎಸ್.ಯಡಿಯೂರಪ್ಪ ಅವರು. ಯಡಿಯೂರಪ್ಪ ಅವರನ್ನ ಧೀಮಂತ ನಾಯಕ, ಛಲದಂಕಮಲ್ಲ ಎಂದು ಕರೆಯುತ್ತಾರೆ ಹೊರತು ಬೇರೆ ಯಾರನ್ನೂ ಕರೆಯೋದಿಲ್ಲ. ಅವರು ಅಂತಹ ನಾಯಕ ಎಂದು ತಮ್ಮ ತಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಗುಣಗಾನ ಮಾಡಿದರು.
ಬಿ ಎಸ್ ಯಡಿಯೂರಪ್ಪ ಅವರು ಅದೆಷ್ಟು ಪಾದಯಾತ್ರೆ, ಸೈಕಲ್ ಜಾಥಾ ನಡೆಸಿ ಹೋರಾಟ ಮಾಡಿದ್ದಾರೆ. ಇವೆಲ್ಲ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಮಾಡಿದ್ದಲ್ಲ. ಜನರ ನೋವಿಗೆ ಸ್ಪಂದಿಸಲು, ನೆರವಾಗಲು ಹೋರಾಟ ಮಾಡಿದ ಧೀಮಂತ ನಾಯಕ ಬಿಎಸ್ವೈ. ಅವರು ಕೊಟ್ಟ ಯೋಜನೆಯನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ ಎಂದರು
ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿಯಲ್ಲಿ ಯಡಿಯೂರಪ್ಪ ಅವರು ಮುಟ್ಟದ ಕ್ಷೇತ್ರವೇ ಇಲ್ಲ. ಹೀಗೆ ಅವರು ಎಲ್ಲರಿಗೂ ಅನುಕೂಲ ಆಗುವ ಕೆಲಸ ಮಾಡಿದ್ದಾರೆ. ಹಿಂದೆ ಬಿಜೆಪಿ ಎಂದರೆ ನಗರಕ್ಕೆ ಸೀಮಿತ ಎಂದು ವಿಪಕ್ಷಗಳು ಮಾತನಾಡುತ್ತಿದ್ದರು. ಈಗ ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿಯಲ್ಲಿ ಬಿಜೆಪಿ ಬೆಳೆದು ನಿಂತಿದೆ. ಬಿಜೆಪಿ ಅಧಿಕಾರಕ್ಕೆ ಬರೋದು ಕನಸು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ ಬಿಜೆಪಿ ಇವತ್ತು ಕರ್ನಾಟಕದಿಂದ ಕಾಶ್ಮೀರದವರೆಗೆ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ಬಿ.ವೈ.ವಿಜಯೇಂದ್ರ ಬಣ್ಣಿಸಿದರು.
ಕಾಂಗ್ರೆಸ್ ಸ್ಥಿತಿ ಹೇಗಿದೆ ಅಂದ್ರೆ.. ಅತಿ ಹೆಚ್ಚು ಸಂಸತ್ ಸ್ಥಾನ ಹೊಂದಿದ್ದ ಕಾಂಗ್ರೆಸ್ ಈಗ ಕೇವಲ 42 ಕ್ಕೆ ಕುಸಿದಿದೆ. ಪ್ರತಿ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳುವ ರಾಹುಲ್ಗಾಂಧಿ ಅವರ ಕುಟುಂಬ ಸದಾಕಾಲ ನಿಲ್ಲುತ್ತಿದ್ದ ಕ್ಷೇತ್ರವನ್ನು ಬಿಡಬೇಕಾಯ್ತು. ಅವರು ಕೇರಳದಲ್ಲಿ ಹೋಗಿ ಚುನಾವಣೆಗೆ ನಿಂತರು. ಈಗ ಕಾಂಗ್ರೆಸ್ ದೇಶದ ಎಲ್ಲೂ ಚುನಾವಣೆಗೆ ನಿಲ್ಲಲಾಗದ ಸ್ಥಿತಿ ತಲುಪಿದೆ. ಎಂದು ಅವರು ಟೀಕಿಸಿದರು.
ನಮ್ಮ ಪ್ರಧಾನಿ ಭವಿಷ್ಯದ ಭಾರತ ಹೇಗಿರಬೇಕು ಎಂದು ಯೋಚನೆ ಮಾಡುತ್ತಾರೆ. ಈ ಬಗ್ಗೆ ನಮಗೆ ಹೆಮ್ಮೆಯಿದೆ, ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣ ಇಲ್ಲದೆ ಸರ್ಕಾರ ನಡೆದಿದೆ. ಭ್ರಷ್ಟಾಚಾರ ರಹಿತವಾಗಿ ಸರ್ಕಾರ ನಡೆಸಬಹುದು ಎಂದು ನಮ್ಮ ಪ್ರಧಾನಿ ತೋರಿಸಿಕೊಟ್ಟಿದ್ದಾರೆ ಎಂದರು.
ಶಶಿಧರ್.ವಿ.ಸಿ., ನ್ಯೂಸ್ 18 ಕನ್ನಡ, ಹಾಸನ
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ