ಫೆ. 17ಕ್ಕೆ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ; ಸವದಿ, ಶಂಕರ್​ಗೆ ಶುರುವಾಯ್ತು ಟೆನ್ಷನ್

ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ರಿಜ್ವಾನ್ ಅರ್ಷದ್ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ನಿಂತು ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನ ಖಾಲಿ ಉಳಿದಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • News18
  • Last Updated :
  • Share this:
ನವದೆಹಲಿ(ಜ. 27): ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಒಂದು ವಿಧಾನಪರಿಷತ್ ಸ್ಥಾನಕ್ಕೆ ಉಪಚುನಾವಣೆಯ ದಿನ ನಿಗದಿಯಾಗಿದೆ. ಫೆ. 17ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಹೆಚ್ಚಿನ ಶಾಸಕ ಬಲ ಇರುವ ಬಿಜೆಪಿ ಈ ಉಪಚುನಾವಣೆಯಲ್ಲಿ ಗೆಲ್ಲುವುದು ಖಚಿತವಾಗಿದೆ. ಆದರೆ, ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಪಕ್ಷದೊಳಗೆ ಇನ್ನೂ ನಿವಾರಣೆಯಾಗಿಲ್ಲ.

ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿಗೆ ಟಿಕೆಟ್ ಕೊಡುವುದೋ ಅಥವಾ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ ಆರ್. ಶಂಕರ್ ಅವರಿಗೆ ಟಿಕೆಟ್ ಕೊಡುವುದೋ ಎಂಬ ಧರ್ಮಸಂಕಟದಲ್ಲಿ ಯಡಿಯೂರಪ್ಪ ಇದ್ಧಾರೆ.

ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿಯ ಬೆನ್ನಿಗೆ ನಿಂತಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನಸು ಆರ್. ಶಂಕರ್ ಮೇಲಿದೆ. ರಾಣೆಬೆನ್ನೂರು ಟಿಕೆಟ್ ತ್ಯಾಗ ಮಾಡಿದರೆ ಸಚಿವ ಸ್ಥಾನ ಮತ್ತು ಪರಿಷತ್ ಸ್ಥಾನ ಕೊಡಿಸುವುದಾಗಿ ಆರ್. ಶಂಕರ್​ಗೆ ವಾಗ್ದಾನ ನೀಡಿದ್ದ ಯಡಿಯೂರಪ್ಪಗೆ ಈಗ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ಧಾರೆ. ಈಗಾಗಲೇ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಅವರನ್ನು ಯಾವುದೇ ಕಾರಣಕ್ಕೂ ಕೆಳಗಿಳಿಸಬಾರದು, ಅವಮಾನ ಮಾಡಬಾರದು ಎಂದು ಹೈಕಮಾಂಡ್​ನಿಂದ ರಾಜ್ಯದ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ. ಹೀಗಾಗಿ, ಯಡಿಯೂರಪ್ಪ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ಧಾರೆ.

ಇದನ್ನೂ ಓದಿ: ಬಹುಪತ್ನಿತ್ವ, ನಿಕಾ ಹಲಾಲ ಪ್ರಶ್ನಿಸಿ ಅರ್ಜಿ; ಅನ್ಯಧರ್ಮೀಯರ ಹಸ್ತಕ್ಷೇಪ ಸಲ್ಲದು ಎಂದು ಮುಸ್ಲಿಮ್ ಮಂಡಳಿ ಆಕ್ಷೇಪ

ಇನ್ನು ಫೆ. 17ರಂದು ನಡೆಯುವ ವಿಧಾನಪರಿಷತ್ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆ. 6 ಕೊನೆಯ ದಿನವಾಗಿದೆ. ಅಷ್ಟರೊಳಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಅಂದರೆ ಇನ್ನು 10 ದಿನದೊಳಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿದೆ.

ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ರಿಜ್ವಾನ್ ಅರ್ಷದ್ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ನಿಂತು ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನ ಖಾಲಿ ಉಳಿದಿದೆ. ಈ ಉಪಚುನಾವಣೆಯಲ್ಲಿ ಗೆದ್ದವರು 2022, ಜೂನ್ 14ರವರೆಗೆ ಮೇಲ್ಮನೆ ಸದಸ್ಯರಾಗಿ ಉಳಿಯಬಹುದಾಗಿದೆ.

ಇದೇ ವರ್ಷದ ಜೂನ್ ತಿಂಗಳಲ್ಲಿ ಏಳು ಪರಿಷತ್ ಸ್ಥಾನಗಳು ಖಾಲಿ ಬೀಳಲಿವೆ. ಅದೇ ತಿಂಗಳಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ನಾಲ್ಕು ಸ್ಥಾನಗಳು ತೆರವಾಗಲಿವೆ. ಹೆಚ್ಚೆಚ್ಚು ಸಂಖ್ಯೆಯಲ್ಲಿ ಮೇಲ್ಮನೆಗೆ ಸದಸ್ಯರನ್ನು ಕಳುಹಿಸಲುವ ಅವಕಾಶ ಬಿಜೆಪಿಗೆ ಸಿಗಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: