• Home
  • »
  • News
  • »
  • state
  • »
  • Karwar: ಚಿಟ್ಟೆಗಳೇ ಚಿಟ್ಟೆಗಳೇ ಕೇಳಿ... ಇಲ್ಲಿದೆ ಬನ್ನಿ ನಿಮಗೂ ಒಂದು ಪಾರ್ಕ್!

Karwar: ಚಿಟ್ಟೆಗಳೇ ಚಿಟ್ಟೆಗಳೇ ಕೇಳಿ... ಇಲ್ಲಿದೆ ಬನ್ನಿ ನಿಮಗೂ ಒಂದು ಪಾರ್ಕ್!

ಪಾರ್ಕ್‌ನಲ್ಲಿ ಚಿಟ್ಟೆಗಳ ಸಮೃದ್ಧ ಜೀವನ

ಪಾರ್ಕ್‌ನಲ್ಲಿ ಚಿಟ್ಟೆಗಳ ಸಮೃದ್ಧ ಜೀವನ

ಉತ್ತರ ಕನ್ನಡ ಅಂದ್ರೆ ಅದು ಪ್ರವಾಸಿಗರ ಸ್ವರ್ಗ ಇದ್ದಂತೆ. ಈ ಸ್ವರ್ಗಕ್ಕೆ ಇನ್ನೊಂದು ಹೊಸ ತಾಣವೊಂದು ಸೇರ್ಪಡೆಯಾಗಿದೆ. ಅದೇ ಚಿಟ್ಟೆಗಳ ಪಾರ್ಕ್. ಕೋವಿಡ್ ಅಬ್ಬರವೆಲ್ಲ ಮುಗಿದ ಮೇಲೆ ನೀವೂ ಒಮ್ಮೆ ಭೇಟಿ ನೀಡಿದ್ರೆ ಚಿಟ್ಟೆಗಳನ್ನು ಕಣ್ತುಂಬಿಕೊಳ್ಳಬಹುದು...

  • Share this:

'ಹಾರುವ ಹೂವುಗಳು' (Flying Flowers) ಎಂದು ಕರೆಸಿಕೊಳ್ಳುವ ಚಿಟ್ಟೆಗಳು (Butterfly) ಬಹುತೇಕ ಎಲ್ಲೆಡೆ ಕಾಣಿಸುತ್ತವೆ‌. ಅವುಗಳ ಬಣ್ಣಕ್ಕೆ (Colors) ಮಾರು ಹೋಗದ ಜನರಿಲ್ಲ. ಕೇವಲ ಅಲ್ಪ ಅವಧಿಯಲ್ಲಿ (Short Term) ಬದುಕು ಕಟ್ಟಿ ಎಲ್ಲರ ಪ್ರೀತಿ ಸಂಪಾದಿಸುವ ಈ ಚಿಟ್ಟೆಗಳ ಬಗ್ಗೆ ಬಹುತೇಕರಿಗೆ ಕುತೂಹಲ, ಆಸಕ್ತಿ ಕೆರಳದೇ ಇರದು. ಹೀಗೆ ಚಿಟ್ಟೆಗಳಿಗೂ ಒಂದು ಪಾರ್ಕ್ (Park) ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ (Karwar) ಗೋಟೆಗಾಳಿಯಲ್ಲಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ (Forest Department)  ಆಶ್ರಯದಲ್ಲಿ ನಿರ್ಮಾಣವಾದ ಚಿಟ್ಟೆ ಪಾರ್ಕ್‌ನಲ್ಲಿ (Butterfly Park) ಸಾವಿರಾರು ಚಿಟ್ಟೆಗಳ ಕಲರವ ಶುರುವಾಗಿದೆ. ಕಾರವಾರಕ್ಕ ಬರುವ ಪ್ರವಾಸಿಗರು "ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ" ಅಂತ ಮನಸಲ್ಲೇ ಗುನುಗುತ್ತಾ, ಪಾರ್ಕ್‌ನಲ್ಲಿ ಸುತ್ತಾಡ್ತಿದ್ದಾರೆ.


ಕಾರವಾರದ ಪ್ರವಾಸೋದ್ಯಮಕ್ಕೆ ಹೊಸ ಸೇರ್ಪಡೆ


ರಾಜ್ಯದಲ್ಲೇ ಅತೀ ಹೆಚ್ಚು ಅರಣ್ಯ ಹೊಂದಿರುವ ಉತ್ತರ ಕನ್ನಡ ಜಿಲ್ಲೆ ತನ್ನಲ್ಲಿ ಅಪಾರ ಜೀವ ವೈವಿದ್ಯವನ್ನು ಬಚ್ಚಿಟ್ಟುಕೊಂಡಿದೆ. ದೇಶದ ಬಹುತೇಕ ಪ್ರಭೇದದ ಚಿಟ್ಟೆಗಳು ಉತ್ತರ ಕನ್ನಡ ಜಿಲ್ಲೆಯ ಅರಣ್ಯಗಳ ಭಾಗಗಳಲ್ಲಿ ನೋಡಲು ಸಿಗುತ್ತವೆ. ಹೀಗಾಗಿ ಅರಣ್ಯ ಇಲಾಖೆ ಇವುಗಳ ರಕ್ಷಣೆ ಹಾಗೂ ಪೋಷಣೆಗೆ ಇಳಿದಿದೆ.


ಕಾರವಾರದ ಗೋಟೆಗಾಳಿಯಲ್ಲಿ ಚಿಟ್ಟೆ ಪಾರ್ಕ್


ಜಿಲ್ಲೆಯ ಜೋಯಿಡಾದಲ್ಲಿ ಚಿಟ್ಟೆಗಳ ಅಭಿವೃದ್ಧಿ, ಪೋಷಣೆಗಾಗಿ ಚಿಟ್ಟೆ ಪಾರ್ಕ ಅನ್ನು ಇಲಾಖೆ ನಿರ್ಮಿಸಿ ಯಶಸ್ಸು ಕಂಡಿದೆ. ಇದೀಗ ಕಾರವಾರ ತಾಲೂಕಿನ ಗೋಟೆಗಾಳಿಯಲ್ಲಿ ಎರಡುವರೆ ಎಕರೆ ವಿಸ್ತೀರ್ಣದಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸಿದೆ‌. ದೇಶದಲ್ಲಿ 1500 ವಿವಿಧ ಪ್ರಭೇದದ ಚಿಟ್ಟೆಗಳಿದ್ದು ರಾಜ್ಯದಲ್ಲಿ 350 ಪ್ರಭೇದಕ್ಕೂ ಹೆಚ್ಚು ಚಿಟ್ಟೆಗಳು ಕಾಣಸಿಗುತ್ತವೆ.


ಇದನ್ನೂ ಓದಿ: Tourist Place: ನೆಮ್ಮದಿ ಹುಡುಕ್ತಿದ್ದೀರಾ? ಅರೇ.. ಅದು ಈ ಜಾಗದಲ್ಲಿ ಸಿಗುತ್ತೆ ಒಂದ್ಸಲ ವಿಸಿಟ್​ ಮಾಡ್ರಿ!


312 ಚಿಟ್ಟೆ ಪ್ರಬೇಧಗಳ ಪತ್ತೆಕಾರ್ಯ


ಉತ್ತರ ಕನ್ನಡ ಜಿಲ್ಲೆಯ ಸಹ್ಯಾದ್ರಿ ಶ್ರೇಣಿಯ  ಜೋಯಿಡಾ, ದಾಂಡೇಲಿ, ಕಾರವಾರದಲ್ಲಿ 312 ಪ್ರಬೇಧದ ಚಿಟ್ಟೆಗಳನ್ನು ಗುರುತಿಸಲಾಗಿದೆ. ಈ ಭಾಗದಲ್ಲಿ ಚಿಟ್ಟೆಗಳು ಅಗಾದ ಪ್ರಮಾಣದಲ್ಲಿ ಇದ್ದರೂ ಇವುಗಳನ್ನು ನೋಡಬೇಕು ಎಂದರೆ ಅರಣ್ಯ ಪ್ರವೇಶಿಸಬೇಕು. ಹೀಗಾಗಿ ಇದೀಗ ಅರಣ್ಯ ಇಲಾಖೆ ಕಾರವಾರ ತಾಲೂಕಿನ ಗೋಟಗಾಳಿಯಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸಿದೆ.


ಚಿಟ್ಟೆಗಳ ಸುರಕ್ಷಿತ ಜೀವನಕ್ಕೆ ವ್ಯವಸ್ಥೆ


ಚಿಟ್ಟೆಗಳ ಸಂತಾನವೃದ್ಧಿಗೆ ಸಹಾಯ ಮಾಡವಲು ಹಾಗೂ ಆಹಾರ ಕೊರತೆ ನೀಗಿಸಲು ಇಲ್ಲಿ ಲಿಪ್ಪರ್ ಪ್ಲಾಂಟ್ ಹಾಗೂ ಹೋಸ್ಟ್ ಪ್ಲಾಂಟ್ ಗಳನ್ನು ಬೆಳೆಸಲಾಗಿದೆ. ಇದರಿಂದಾಗಿ ಚದುರಿ ಹೋಗುವ ಚಿಟ್ಟೆಗಳು ಹೇರಳ ಆಹಾರ ಸಿಗುವ ಈ ಪಾರ್ಕ ನಲ್ಲಿ ಬಂದು ಹೆಚ್ಚು ಹೆಚ್ಚಾಗಿ ನೆಲಸುತ್ತವೆ. ಜೊತೆಗೆ ಇಲ್ಲಿ ಬೆಳೆದ ಗಿಡಗಳಲ್ಲಿ ಸಂತಾನವೃದ್ಧಿ ಮಾಡುತ್ತವೆ. ಇದರಿಂದಾಗಿ ಚಿಟ್ಟೆ ಸಂತತಿ ಸಹ ವೃದ್ಧಿಯಾಗುತ್ತದೆ.


ಇಲ್ಲಿದೆ ದೇಶದ ಅತಿ ದೊಡ್ಡ ಚಿಟ್ಟೆ  ಪ್ರಬೇಧ


ಸದ್ಯ ಈ ಭಾಗದಲ್ಲಿ ಕತ್ತಿ ಬಾಲದ ಚಿಟ್ಟೆ, ಸ್ವರ್ಣ ಚಿಟ್ಟೆ, ನವಿಲು ಚಿಟ್ಟೆ, ನೀಲ ಸುಂದರಿ ಚಿಟ್ಟೆ, ಮಲಬಾರ್ ರೋಜ್ ಚಿಟ್ಟೆಗಳು ಕಾಣಸಿಗುತ್ತವೆ. ದೇಶದಲ್ಲೇ ಅತೀ ದೊಡ್ಡ ಚಿಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕತ್ತಿ ಬಾಲದ ಚಿಟ್ಟೆ ಸಹ ಇಲ್ಲಿ  ನೋಡಲು ಸಿಗುತ್ತವೆ. ಇದು ಪ್ರವಾಸಿಗರ ವಿಶೇಷ ಆಕರ್ಷಣೆಗೆ ಪಾತ್ರವಾಗಿದೆ.


ಇದನ್ನೂ ಓದಿ: Travel Tips: ಲಸಿಕೆ ಹಾಕಿಸಿಕೊಂಡಿದ್ರೆ ನೀವು ಈ ದೇಶಗಳಿಗೆ ಟ್ರಿಪ್ ಹೋಗ್ಬೋದು


ಪ್ರವಾಸಿಗರಿಗೆ, ಅಧ್ಯಯನಕಾರರಿಗೆ ವ್ಯವಸ್ಥೆ


ಪ್ರವಾಸಿಗರಿಗೆ ಹಾಗೂ ಚಿಟ್ಟೆ ಅಧ್ಯಯನಕಾರರಿಗೆ ಸಹಾಯವಾಗಲು ಶೌಚಾಲಯ, ಕ್ಯಾಂಟಿನ್ ವ್ಯವಸ್ಥೆ ಯನ್ನು ಅರಣ್ಯ ಇಲಾಖೆ ಮಾಡಿದೆ‌. ಇದರ ಜೊತೆ ಮಕ್ಕಳಿಗಾಗಿ ಪಾರ್ಕ್ ಸಹ ಇದರಲ್ಲಿ ತಲೆ ಎತ್ತಿದೆ. ಇನ್ನು ಪಕ್ಷಿಗಳಿಗೂ ಸಹ ಬಾಯಾರಿಕೆ ನೀಗಲು ನೀರಿನ ತೊಟ್ಟಿಗಳನ್ನು ನಿರ್ಮಾಣ  ಮಾಡಲಾಗಿದೆ. ಸುಂದರವಾಗಿ ಪಾರ್ಕ್ ನಿರ್ಮಾಣವಾಗಿದ್ದು ಇದೀಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.


ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರಿಗೆ ಒಂದು ಸ್ವರ್ಗ ಇದ್ದಂತೆ, ಸ್ವರ್ಗಕ್ಕೆ ಮತ್ತೊಂದು ಮೇರಗು ಎಂಬಂತೆ ಈ ಚಿಟ್ಟೆ ಪಾರ್ಕ್ ನಿರ್ಮಾಣವಾಗಿದೆ. ಮಕ್ಕಳು  ಸಂಜೆ ವೇಳೆಯಲ್ಲಿ ಚಿಟ್ಟೆಗಳೊಂದಿಗೆ ಆಡುವುದನ್ನ ನೋಡುವುದೆ ಚೆಂದ.

Published by:Annappa Achari
First published: